September 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಪ್ಪಿನಂಗಡಿಯಲ್ಲಿ ದೂರುಗಳ ಸರಮಾಲೆ –  PDO ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅಮಾನತು

ಉಪ್ಪಿನಂಗಡಿ: ಸಾರ್ವಜನಿಕರಿಂದ ವಿವಿಧ ದೂರುಗಳು ಹಾಗೂ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಈ ಹಿಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (PDO) ಕರ್ತವ್ಯ ನಿರ್ವಹಿಸಿದ್ದ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್ 9ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗಾಗಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಮಂದಿ ಸಾರ್ವಜನಿಕರು PDO ವಿರುದ್ಧ ದೂರುಗಳನ್ನು ಸಲ್ಲಿಸಿದ್ದರು. ಅಬ್ದುಲ್ ರಹಿಮಾನ್ ಪಿ.ಎ., ಸಂಜೀವ ಪೂಜಾರಿ, ಅಶ್ರಫ್ ಪೆರಿಯಡ್ಕ, ಖೋಜಮ್ಮ, ಅತುಲ್ ಕಶ್ಯಪ್ ಟಿ., ವಿನಾಯಕ ಪೈ, ಲಲಿತಾ, ಹಣ್ಣು–ತರಕಾರಿ ವ್ಯಾಪಾರಿಗಳು, ಎಸ್. ರವಿ ಹಿರ್ತಮ್ಮ, ಅನಿಲ್ ಕುಮಾರ್ ಜೈನ್, ಶಾಂತ ಕುಮಾರಿ, ಸಂದೇಶ್ ಕೆ., ಮೊಯ್ದಿನ್ ಕುಟ್ಟಿ ಹಿರೇಬಂಡಾಡಿ, ಅಬ್ದುಲ್ಲಾ ಸೇರಿದಂತೆ ಹಲವರು ದೂರು ನೀಡಿದ್ದರೆಂದು ತಿಳಿಸಲಾಗಿದೆ.

ದೂರುಗಳ ಹಿನ್ನೆಲೆಯಲ್ಲಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರಿಗೆ ಲಿಖಿತ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು. ಇದೇ ವೇಳೆ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಅಲ್ಲಿನ ಕರ್ತವ್ಯದಿಂದ ವಿಮುಕ್ತಿಗೊಳಿಸಲಾಗಿತ್ತು.

ಸೇವೆಯಲ್ಲಿ ವಿಳಂಬ, ಲಂಚದ ಬೇಡಿಕೆ ಸೇರಿದಂತೆ ಆರೋಪ:

ಅಧಿಕಾರ ದುರುಪಯೋಗ, ನಾಗರಿಕರಿಗೆ ನೀಡಬೇಕಾದ ಸೇವೆಯಲ್ಲಿ ವಿಳಂಬ, ಭ್ರಷ್ಟಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಬಂದಿರುವುದಾಗಿ ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ–2021ರ ನಿಯಮ 3ನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆರೋಪಗಳ ಕುರಿತು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಇದರೊಂದಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳ ಇಲಾಖಾ ವಾಹನಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವುದು, ಪೊಲೀಸ್ ತನಿಖೆಗೆ ಅಗತ್ಯವಿದ್ದ ಸಿಸಿಟಿವಿ ಮಾಹಿತಿಯನ್ನು ಒದಗಿಸುವಲ್ಲಿ ಅಸಹಕಾರ ತೋರಿರುವುದು ಸೇರಿದಂತೆ ಹಲವು ಆರೋಪಗಳೂ ಅವರ ವಿರುದ್ಧ ಕೇಳಿಬಂದಿದ್ದವು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತು.

ಅಮಾನತು ಆದೇಶ ಹೊರಬಿದ್ದ ಬೆನ್ನಲ್ಲೇ, ತಮ್ಮ ವಿರುದ್ಧ ದೂರು ನೀಡಿದ್ದ ಸಾರ್ವಜನಿಕರು ಈ ಕ್ರಮಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ವರ್ಗಾವಣೆಗೊಂಡ ಬಳಿಕವೂ ಉಪ್ಪಿನಂಗಡಿಯಲ್ಲಿ ಪ್ರಭಾರ ನೆಲೆಯಲ್ಲಿ ಮುಂದುವರಿಸಲು ಸಹಕರಿಸಿದ್ದರೆಂದು ಆರೋಪಿಸಿ ಪುತ್ತೂರು ತಾಲೂಕು ಪಂಚಾಯತ್‌ನ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧವೂ ಸರಕಾರದ ಮಟ್ಟದಲ್ಲಿ ದೂರು ಸಲ್ಲಿಸಲಾಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅಮಾನತು ಕ್ರಮದ ಬಳಿಕ ನಡೆಯಲಿರುವ ಇಲಾಖಾ ವಿಚಾರಣೆಯಲ್ಲಿ ಆರೋಪಗಳ ಕುರಿತು ಹೆಚ್ಚಿನ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.

You may also like

News

ಯುವ ಕವಿ–ಕಥೆಗಾರ ಗ್ಲ್ಯಾನಿಶ್ ಜ್ಯೂಡ್ ಮಾರ್ಟಿಸ್‌ ಅವರಿಗೆ 2026ರ ಕಿಟಾಳ್ ಯುವ ಪುರಸ್ಕಾರ

ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುವ 2026ನೇ ಸಾಲಿನ ಲಿಯೋ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಯುವ ಕವಿ, ಕಥೆಗಾರ
News

ರಮಾನಾಥ ರೈ ಅಪಘಾತದ ಪೋಸ್ಟ್‌ಗೆ ಅವಹೇಳನಕಾರಿ ಕಾಮೆಂಟ್ ಆರೋಪ – ಪ್ರಭಾಕರ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ರೀತಿಯ ಸಂದೇಶ ಪ್ರಕಟಿಸಿದ ಆರೋಪದಡಿ

You cannot copy content of this page