ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಸವರಾಜು ಅವರಿಗೆ ಮಂಗಳೂರು ವಕೀಲರ ಸಂಘದಿಂದ ಆತ್ಮೀಯ ಬೀಳ್ಕೊಡುಗೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜು ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಕೀಲರ ಸಂಘದ ವತಿಯಿಂದ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಂಗಳೂರು ಬಾರ್ ಅಸೋಸಿಯೇಷನ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇನವ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಅಶೋಕ್ ಅರಿಗ, ಪ್ರಧಾನ ಜಿಲ್ಲಾ ಸರ್ಕಾರಿ ವಕೀಲ ಎಂ.ಪಿ. ನೊರೊನ್ಹಾ, ಪ್ರಧಾನ ಕಾರ್ಯದರ್ಶಿ ಗೌತಮ್ ಬಿ.ಪಿ., ಕೋಶಾಧಿಕಾರಿ ರೇಖಾ, ಜೊತೆ ಕಾರ್ಯದರ್ಶಿ ರವಿಕುಮಾರ್ ವಿ. ಸೇರಿದಂತೆ ನ್ಯಾಯಾಧೀಶರು ಹಾಗೂ ಹಿರಿಯ–ಕಿರಿಯ ವಕೀಲರು ಉಪಸ್ಥಿತರಿದ್ದರು.

ನ್ಯಾಯಾಂಗ ಕ್ಷೇತ್ರದಲ್ಲಿ ಬಸವರಾಜು ಅವರು ಸಲ್ಲಿಸಿದ ಸೇವೆ ಹಾಗೂ ವಕೀಲರು ಮತ್ತು ನ್ಯಾಯಾಂಗದ ನಡುವಿನ ಉತ್ತಮ ಬಾಂಧವ್ಯವನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ನಿವೃತ್ತಿ ಜೀವನವು ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ವಕೀಲರ ಸಂಘದ ವತಿಯಿಂದ ಶುಭ ಹಾರೈಸಲಾಯಿತು.


ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಧೀಶರು ಹಾಗೂ ಅಪಾರ ಸಂಖ್ಯೆಯ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿ ಬಸವರಾಜು ಅವರಿಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು.



