ಸುರತ್ಕಲ್ MRPL ನಲ್ಲಿ ಭಾರಿ ಅವಘಡ – ಕೋಕರ್ ಹೈಡ್ರೋ ಟ್ರೀಟರ್ ಯುನಿಟ್‌ನಲ್ಲಿ ಸ್ಫೋಟ, ಓರ್ವ ಸಾವು, ಹಲವರಿಗೆ ಗಾಯ!
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ FIR ದಾಖಲು

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ 3ನೇ ಹಂತದ (Phase 3) ‘ಕೋಕರ್ ಹೈಡ್ರೋ ಟ್ರೀಟರ್ ಯುನಿಟ್’ನಲ್ಲಿ (Coker Hydro Treater Unit) ಭಾರಿ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟು ಹಲವರು ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.


ಘಟನೆಯ ವಿವರ:
ಇಂದು ಸೆಪ್ಟೆಂಬರ್ 30ರಂದು ಬುಧವಾರ ಮಧ್ಯಾಹ್ನ ಸುಮಾರು 12:15 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಘಟಕದ ಯಂತ್ರೋಪಕರಣ ಹಾಗೂ ಬಿಡಿಭಾಗಗಳು ಏಕಾಏಕಿ ಸ್ಪೋಟಗೊಂಡಿದ್ದರಿಂದ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆ ಸ್ಟಾರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಸಿಬ್ಬಂದಿ ಹಾಗೂ ಇತರ ಕಾರ್ಮಿಕರು ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮನೀಶ್ ಕರ್ಕಾಡ ಎಂಬ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ರಾಜೇಶ್ ಪ್ರಸಾದ್ ಹಾಗೂ ಇತರ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ.

ಪೊಲೀಸ್ ದೂರು ಹಾಗೂ FIR ದಾಖಲು:
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಮೂಲದ ರವಿ ಪೂಜಾರಿ ಎಂಬುವರು ನೀಡಿರುವ ದೂರಿನನ್ವಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ FIR (Crime No: 132/2026) ದಾಖಲಾಗಿದೆ. ಘಟಕದ ಮುಖ್ಯಸ್ಥರು ಹಾಗೂ MRPL ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. BNS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





