ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ: ಭಜನೆಯಿಂದ ಆರೋಗ್ಯ, ಸಾಮರಸ್ಯ ಹಾಗೂ ಸದ್ಗುಣ ವೃದ್ಧಿ – ವಿವೇಕ್ ಪಾಯಸ್
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನದ ಶಿಬಿರ ಸೆಪ್ಟೆಂಬರ್ 29ರಂದು ಮಂಗಳವಾರ ನಡೆಯಿತು.


ಸಂಗೀತ ವಿದುಷಿ ಉಷಾ ಹೆಬ್ಬಾರ್, ಮಣಿಪಾಲ ಅವರು ಶಿಬಿರಾರ್ಥಿಗಳಿಗೆ ಭಜನಾ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಭಜನಾ ಕಮ್ಮಟ ಪರಿಷತ್‌ನ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಐಶ್ವರ್ಯ ನಿಶ್ಚಲ್ ಜೈನ್ ಉಪಸ್ಥಿತರಿದ್ದರು.


ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಅವರು “ಆರೋಗ್ಯ ರಕ್ಷಣೆಗೆ ಭಜನೆ ಅತಿ ಮುಖ್ಯ ಹಾದಿಯಾಗಿದ್ದು, ಬದುಕಿನ ಸುಗಮ ದಾರಿಯೇ ಭಜನೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಭಜನೆಯಿಂದ ಸಾಮಾಜಿಕ ಪರಿವರ್ತನೆ, ಕೌಟುಂಬಿಕ ಸಾಮರಸ್ಯ ಹಾಗೂ ಉತ್ತಮ ನಡತೆ ಬೆಳೆದು, ಸಮಾಜದಲ್ಲಿನ ಹಲವು ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಭವಿಷ್ಯದ ಹಾದಿಯನ್ನು ತಪ್ಪಿಸುವ ದುಶ್ಚಟಗಳನ್ನು ತ್ಯಜಿಸಿ, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಭಜನೆ ಪ್ರೇರಣೆ ನೀಡುತ್ತದೆ ಎಂದು ಅವರು ತಿಳಿಸಿದರು.

ಪೂಜ್ಯ ಹೆಗ್ಗಡೆ ದಂಪತಿಗಳು ವಿವಿಧ ಜನಜಾಗೃತಿ ಕಾರ್ಯಕ್ರಮಗಳು, ಮಧ್ಯವರ್ಜನ ಶಿಬಿರ ಹಾಗೂ ಭಜನಾ ಕಮ್ಮಟಗಳ ಮೂಲಕ ಸಾವಿರಾರು ಜನರಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ಅವರು ಶ್ಲಾಘಿಸಿದರು.

ಭಜನಾ ಕಮ್ಮಟದ ಮುಖ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಪರಿಷತ್‌ನ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.



