October 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತೂರು ತಾಲೂಕಿನಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ MLC ಕಿಶೋರ್ ಕುಮಾರ್ ಪುತ್ತೂರುರವರು ಭೇಟಿ

ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮತ್ತು ಸಾರ್ವಜನಿಕರಿಂದ ಮನವಿ ಸ್ವೀಕಾರ

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಮತ್ತು ಬನ್ನೂರು ಗ್ರಾಮ ಪಂಚಾಯತಿಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಯ ಚುನಾಯಿತ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರು ಭೇಟಿ ನೀಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.

ಬಜತ್ತೂರು ಗ್ರಾಮ ಪಂಚಾಯತ್ ಭೇಟಿ

ಶಾಸಕರು ಮೊದಲು ಬಜತ್ತೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದರು. ಭೇಟಿಯ ವೇಳೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA), ಪ್ರಧಾನ ಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ (SBM), ಜಲಜೀವನ್ ಮಿಷನ್ (JJM) ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯನ್ನು ವಿಶ್ಲೇಷಿಸಲಾಯಿತು.
ಅದೇ ರೀತಿ ನಮೂನೆ 9, 11A, 11B ಪ್ರಮಾಣಪತ್ರ ವಿತರಣೆ, ಕಟ್ಟಡ ತೆರಿಗೆ ಸಂಗ್ರಹಣೆ, ವಾರ್ಡ್ ಮತ್ತು ಗ್ರಾಮ ಸಭೆ ಆಯೋಜನೆ, ಸ್ವಾಧೀನ ಪ್ರಮಾಣ ಪತ್ರ ನೀಡುವ ವಿಧಾನಗಳು, ಗ್ರಾಮ ಅಭಿವೃದ್ಧಿ ಅಡಚಣೆಗಳು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು. ಬಜತ್ತೂರು ಪಂಚಾಯತಿ MGNREGA ಮತ್ತು ಜಲಜೀವನ್ ಮಿಷನ್ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪಾರದರ್ಶಕತೆ ಮತ್ತು ಪ್ರಗತಿಯನ್ನು ಸಾಧಿಸಿದೆ ಎಂದು ಶಾಸಕರು ಪ್ರಶಂಸಿಸಿದರು. ಗ್ರಾಮದ ಎಲ್ಲಾ ಮನೆಗಳಿಂದ ಒಣಕಸದ ಸಂಗ್ರಹಣೆ ಮತ್ತು ವಿಲೇವಾರಿ ಕ್ರಮವನ್ನು ಮತ್ತಷ್ಟು ಬಲಪಡಿಸಿ SBM ಯೋಜನೆಯನ್ನು ಯಶಸ್ವಿಗೊಳಿಸಲು ಸೂಚಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರು, ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.


ಬನ್ನೂರು ಗ್ರಾಮ ಪಂಚಾಯತ್ ಭೇಟಿ

ನಂತರ ಶಾಸಕರು ಬನ್ನೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ MGNREGA, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್, ಜಲಜೀವನ್ ಮಿಷನ್, ಬಸವ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು.

ವಿನ್ಯಾಸ ನಕ್ಷೆ ಅನುಮೋದನೆ, ನಮೂನೆ 9, 11A, 11B ವಿತರಣೆ, ಕಟ್ಟಡ ತೆರಿಗೆ ಸಂಗ್ರಹಣೆ ಮತ್ತು ರಸ್ತೆ ಸ್ವಾಧೀನ ಅಡಚಣೆಗಳ ಕುರಿತೂ ಶಾಸಕರು ವಿಚಾರಿಸಿದರು.
ಬನ್ನೂರು ಪಂಚಾಯತಿ MGNREGA ಮತ್ತು 15ನೇ ಹಣಕಾಸು ಅನುದಾನದ ಅನುಷ್ಠಾನದಲ್ಲಿ ಸಾಧಿಸಿರುವ ಪಾರದರ್ಶಕ ಆಡಳಿತ ಮತ್ತು ಉತ್ಸಾಹದ ಕಾರ್ಯವೈಖರಿ ಕುರಿತು ಶಾಸಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಗ್ರಾಮೀಣ ನಾಗರಿಕರು ತಮ್ಮ ನಿವೇಶನಗಳ ವಿನ್ಯಾಸ ನಕ್ಷೆ ಅನುಮೋದನೆಗೆ ನಗರ ಯೋಜನಾ ಪ್ರಾಧಿಕಾರಕ್ಕೆ ಹೋಗಬೇಕಾದ ಅಸೌಕರ್ಯ ಮತ್ತು ಮಧ್ಯವರ್ತಿಗಳ ಹಾವಳಿ ಕುರಿತು ಮನವಿ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತಿಗಳೇ ನೀಡುವಂತಾಗುವಂತೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಅದೇ ರೀತಿ ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಶಾಸಕರು ನೇರವಾಗಿ ಸ್ವೀಕರಿಸಿ, ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯರು, ಮಾಜಿ ಸದಸ್ಯರು, ಗ್ರಂಥಪಾಲಕರು, ಗ್ರಾಮ ನಾಗರಿಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಸಕರ ಅಭಿಪ್ರಾಯ

“ನಾನು ಪ್ರತಿ ವಾರವೂ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಸರ್ಕಾರದ ವಿವಿಧ ಯೋಜನೆಗಳು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಸುತ್ತದೆ ಎಂಬುದನ್ನು ಪರಿಶೀಲಿಸುತ್ತಿದ್ದೇನೆ. ಸ್ಥಳೀಯ ಬೇಡಿಕೆ ಮತ್ತು ಪ್ರಾಮುಖ್ಯತೆ ಆಧಾರವಾಗಿ ಅನುದಾನಗಳನ್ನು ಒದಗಿಸುವ ಉದ್ದೇಶದಿಂದ ಈ ಭೇಟಿಗಳನ್ನು ಕೈಗೊಂಡಿದ್ದೇನೆ. ಸರ್ಕಾರದ ಯೋಜನೆಗಳು ಕೇವಲ ಕಡತಗಳಲ್ಲಿ ಉಳಿಯದೆ, ಜನರಿಗೆ ನೇರ ಪ್ರಯೋಜನ ನೀಡುವಂತೆ ನೋಡಿಕೊಳ್ಳುವುದು ನನ್ನ ಧ್ಯೇಯ.” ಪ್ರಧಾನ ಮಂತ್ರಿ ಸ್ವಚ್ಛ ಭಾರತ ಮಿಷನ್ ಕೇವಲ ಘೋಷಣೆಯಾಗಿರದೆ, ಪ್ರತಿ ಹಳ್ಳಿಯಲ್ಲಿ ಜನರು ಸ್ವಚ್ಛತೆಯ ಅರಿವು ಬೆಳೆಸಿಕೊಂಡಾಗ ಮಾತ್ರ ಅದು ನಿಜವಾದ ಚಳುವಳಿಯಾಗುತ್ತದೆ. ಕಸ ನಿರ್ವಹಣೆಯಿಂದ ಹಿಡಿದು ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣವರೆಗೆ – ಎಲ್ಲ ಹಳ್ಳಿಯೂ ‘ಸ್ವಚ್ಛ ಹಳ್ಳಿ’ ಎಂಬ ಮಾದರಿಯಾಗಬೇಕು. ಹಳ್ಳಿ ಸ್ವಚ್ಛವಾದರೆ ಜಿಲ್ಲೆ ಸ್ವಚ್ಛವಾಗುತ್ತದೆ, ಜಿಲ್ಲೆ ಸ್ವಚ್ಛವಾದರೆ ಭಾರತ ಸ್ವಚ್ಛವಾಗುತ್ತದೆ. ಗ್ರಾಮ ಪಂಚಾಯತಿಗಳು ಜನರೊಂದಿಗೆ ಕೈಜೋಡಿಸಿ ಕಸದ ವಿಲೇವಾರಿ, ಶೌಚಾಲಯ ನಿರ್ವಹಣೆ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಈ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ಪಂಚಾಯತಿಗಳಿಗೆ ಸರ್ಕಾರದ ವತಿಯಿಂದ ಹೆಚ್ಚುವರಿ ಅನುದಾನ ನೀಡಲು ನನ್ನಿಂದ ಪ್ರಯತ್ನ ಇರುತ್ತದೆ,” ಎಂದು ಶಾಸಕರು ಹೇಳಿದರು.

You may also like

News

ಬಿಕರ್ನಕಟ್ಟೆಯಲ್ಲಿ ವೋಟ್‌ ಚೋರ್‌ ಗದ್ದಿ-ಚೋಡ್‌ ಸಹಿ ಸಂಗ್ರಹ  ಅಭಿಯಾನ – MLC ಐವನ್‌ ಡಿಸೋಜ

ವೋಟ್‌ ಚೋರ್‌ ಗದ್ದಿ-ಚೋಡ್‌ ಈ ಅಭಿಯಾನ ಇಂದು ಅಕ್ಟೋಬರ್ 15ರಂದು ಬುಧವಾರ ಬಿಕರ್ನಕಟ್ಟೆಯಲ್ಲಿ  ನಡೆಸಲಾಯಿತು. ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ MLC ಐವನ್‌ ಡಿಸೋಜರವರು ಬಿಜೆಪಿ ಸರಕಾರ
News

World Mental Health Day 2025 – Inaugural at Father Muller

The Father Muller Medical College, in collaboration with the District Legal Services Authority, Dakshina Kannada District Administration, Zilla Panchayath, District

You cannot copy content of this page