ಬೈಂದೂರು ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲು

ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲು ಎಂಬಲ್ಲಿ ಅಕ್ಟೋಬರ್ 14ರಂದು ಮಂಗಳವಾರ ಸಂಜೆ ನಡೆದಿದೆ.
ಹೊಸಹಿತ್ಲು ಮಕ್ಕಿತಾರು ನಿವಾಸಿಗಳಾದ ಉದಯ ದೇವಾಡಿಗ ಎಂಬುವವರ ಪುತ್ರ 15 ವರ್ಷ ಪ್ರಾಯದ ಆಶಿಶ್ ದೇವಾಡಿಗ, ಮಾರುತಿ ಪೂಜಾರಿ ಅವರ ಪುತ್ರ 16 ವರ್ಷ ಪ್ರಾಯದ ಸೂರಜ್ ಪೂಜಾರಿ, ಸುಧಾಕರ ದೇವಾಡಿಗ ಅವರ ಪುತ್ರ 18 ವರ್ಷ ಪ್ರಾಯದ ಸಂಕೇತ್ ದೇವಾಡಿಗ ಮೃತ ದುರ್ದೈವಿಗಳು. ಇನ್ನೋರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಿವರ: ನಾಲ್ವರು ವಿದ್ಯಾರ್ಥಿಗಳು ಸಂಜೆಯ ವೇಳೆಗೆ ಈಜಲು ತೆರಳಿದ್ದು ಈ ವೇಳೆ ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿಹೋಗಿದ್ದು ಸ್ಥಳೀಯರು ಹಾಗೂ ಮೀನುಗಾರರ ಸಹಕಾರದಿಂದ ಮೃತದೇಹಗಳನ್ನು ಪತ್ತೆಮಾಡಲಾಗಿತ್ತು. ಮೃತಪಟ್ಟ ವಿದ್ಯಾರ್ಥಿಗಳಾದ ಆಶಿಶ್ ದೇವಾಡಿಗ ಕಿರಿಮಂಜೇಶ್ವರ ಹೈಸ್ಕೂಲಿನಲ್ಲಿ 9ನೇ ತರಗತಿ, ಸೂರಜ್ ಪೂಜಾರಿ 10 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸಂಕೇತ್ ದೇವಾಡಿಗ ಬೈಂದೂರು ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದರು. ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿದ್ದಾರೆ.