ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಹೊಸ ಆಯುಕ್ತರ ನೇಮಕ

ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಡಾ. ಮಹೇಶ್ ವಾಲ್ವೇಕರ್ ಹಾಗೂ ವೆಂಕಟ್ ಸಿಂಗ್
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಖಾಲಿ ಇದ್ದ ಮೂವರು ಆಯುಕ್ತರ ಹುದ್ದೆಗಳನ್ನು ಅಕ್ಟೋಬರ್ 15ರಂದು ಬುಧವಾರ ಸರ್ಕಾರ ಭರ್ತಿ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಡಾ. ಮಹೇಶ್ ವಾಲ್ವೇಕರ್ ರವರನ್ನು ಬೆಂಗಳೂರು ಪೀಠಕ್ಕೆ ಮತ್ತು ವೆಂಕಟ್ ಸಿಂಗ್ ರವರನ್ನು ಕಲಬುರಗಿ ಪೀಠಕ್ಕೆ ನೇಮಕಗೊಂಡು ನಿಯೋಜಿಸಲಾಗಿದೆ ಎಂದು ಸರ್ಕಾರದಿಂದ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ — ಆಡಳಿತ ಹಾಗೂ ತಾಂತ್ರಿಕ ಜ್ಞಾನದಲ್ಲಿ ಪರಿಣತಿ
ನಿವೃತ್ತ ಐಎಎಸ್ ಅಧಿಕಾರಿ ಡಾ. ಡಿಸೋಜರವರು ಆಡಳಿತ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೀರ್ಘ ಅನುಭವ ಹೊಂದಿದ್ದು, ರಾಜ್ಯದ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ, ಬಿಬಿಎಂಪಿ ಸಂಯುಕ್ತ ಆಯುಕ್ತ, ಕೊಡಗು ಜಿಲ್ಲಾಧಿಕಾರಿ, ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಹಾಗೂ ರಾಜ್ಯ ಗೋದಾಮು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಯಾಂತ್ರಿಕ ಇಂಜಿನಿಯರ್ ಆಗಿರುವ ಅವರು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಎಂಬಿಎ ಹಾಗೂ “ಡ್ರೈವರ್ ಬಿಹೇವಿಯರ್” ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಬಿಬಿಎಂಪಿಯಲ್ಲಿ ಸೇವೆಯ ಸಮಯದಲ್ಲಿ ಕಸ ನಿರ್ವಹಣೆ ಮತ್ತು ಭೂ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೊಡಗು ಜಿಲ್ಲಾಧಿಕಾರಿಯಾಗಿದ್ದಾಗ 500ಕ್ಕೂ ಹೆಚ್ಚು ಜನ ಪಂಗಡ ಕುಟುಂಬಗಳಿಗೆ ಗೃಹ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಿದ್ದರು.
ಸಿವಿಲ್ ಸೇವೆಗೆ ಸೇರುವ ಮೊದಲು ಅವರು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಏರೋ ಇಂಜಿನಿಯರ್ ಆಗಿ ಕೆಲಸ ಮಾಡಿ, ಭಾರತದ ಅತ್ಯಂತ ಗೌರವದ “ತೇಜಸ್” ಯುದ್ಧ ವಿಮಾನ ಯೋಜನೆಗೆ ಕೊಡುಗೆ ನೀಡಿದ್ದರು.
ಡಾ. ಮಹೇಶ್ ವಾಲ್ವೇಕರ್ ಮತ್ತು ವೆಂಕಟ್ ಸಿಂಗ್ — ಆಡಳಿತದ ಅನುಭವಿಗಳು
ಡಾ. ಮಹೇಶ್ ವಾಲ್ವೇಕರ್ ರವರು ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ಸೇವೆ ಸಲ್ಲಿಸುತ್ತಿದ್ದರು. ಆಡಳಿತದಲ್ಲಿ ವಿಶಾಲ ಅನುಭವ ಹೊಂದಿರುವ ಅವರು ಮಾಹಿತಿ ಆಯೋಗಕ್ಕೆ ಹೊಸ ಶಕ್ತಿ ತುಂಬಲಿದ್ದಾರೆ.
ವೆಂಕಟ್ ಸಿಂಗ್ ರವರನ್ನು ಕಲಬುರಗಿ ಪೀಠದ ಆಯುಕ್ತರಾಗಿ ನೇಮಿಸಲಾಗಿದ್ದು, ಅವರು ಕೂಡ ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.