ಸತ್ಯದ ಆಧಾರದಲ್ಲಿ ಸೃಜನೇತರ ಬರೆವಣಿಗೆ – ಬೆಂಗಳೂರು ಉತ್ತರ ವಿ.ವಿ.ಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ

ಸೃಜನಶೀಲ ಹಾಗೂ ಸೃಜನೇತರ ಬರೆವಣಿಗೆಯಲ್ಲಿ ವ್ಯತ್ಯಾಸವಿದೆ. ಬರಹಗಾರನ ಕಲ್ಪನೆಯಲ್ಲಿ ಮೂಡಿಬರುವ ಕಥೆ, ಕವನಗಳು ಸೃಜನಶೀಲ ಬರೆವಣಿಗೆಯಾದರೆ, ಸತ್ಯದ ಆಧಾರದಲ್ಲಿ ನೇರವಾಗಿ ಬರೆಯುವುದು ಸೃಜನೇತರ ಬರೆವಣಿಗೆಯಾಗಿ ಗುರುತಿಸಲ್ಪಟ್ಟಿದೆ ಎಂದು ಬೆಂಗಳೂರು ಉತ್ತರ ವಿ.ವಿ.ಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಮಂಗಳಗಂಗೆ ವಾರ್ಷಿಕ ಸಂಚಿಕೆ ವತಿಯಿಂದ ಅಕ್ಟೋಬರ್ 17ರಂದು ಶುಕ್ರವಾರ ವಿ.ವಿ. ಕಾಲೇಜಿನ ಶಿವರಾಮ ಕಾರಂತ್ ಸಭಾಂಗಣದಲ್ಲಿ ನಡೆದ ಸೃಜನೇತರ ಬರೆವಣಿಗೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬರೆವಣಿಗೆ ಒಂದು ಕಲೆ. ಅಕ್ಷರ ಕಲಿತವರೆಲ್ಲ ಬರಗಾರರಾಗಲು ಸಾಧ್ಯವಿಲ್ಲ. ಅದಕ್ಕೆ ವಿಷಯ ಗ್ರಹಿಕೆ, ಸೃಜನಶೀಲತೆ, ತಪಸ್ಸು ಎಲ್ಲವೂ ಮುಖ್ಯ. ಇಂತಹ ಕಾರ್ಯಾಗಾರಗಳು ಬರೆವಣಿಗೆ ಕಲೆಯನ್ನು ಉದ್ದೀಪನಗೊಳಿಸಲು ಪೂರಕವಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಯ ಕುಲಸಚಿವರಾದ ಕೆ.ರಾಜು ಮೊಗವೀರ ಮಾತನಾಡಿ ‘ ಬರೆವಣಿಗೆಯ ಸಾಧ್ಯತೆ ಮತ್ತು ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು. ವಿ.ವಿ.ಕಾಲೇಜು ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಅಭಾಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು. ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ, ಜತೆ ಕಾರ್ಯದರ್ಶಿ ಶ್ರೀಲಕ್ಷ್ಮಿ ಮಠದಮೂಲೆ, ಸಮಿತಿ ಸದಸ್ಯರಾದ ಡಾ. ಸುರೇಶ್ ನೆಗಳಗುಳಿ, ಗೀತಾ ಲಕ್ಷ್ಮೀಶ, ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ, ಉಪನ್ಯಾಸಕರಾದ ಜಯವಂತ ನಾಯಕ್, ಡಾ. ಸುಧಾ ಎನ್.ವೈದ್ಯ ಉಪಸ್ಥಿತರಿದ್ದರು.
ಮಂಗಳಗಂಗೆ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ. ಮಾಧವ ಎಂ.ಕೆ. ಸ್ವಾಗತಿಸಿ, ಅಭಾಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದುಷಿ ಸುಮಂಗಳಾ ರತ್ನಾಕರ್ ವಂದಿಸಿದರು. ಉಪನ್ಯಾಸಕಿ ಸಿಂಧು ಕಾರ್ಯಕ್ರಮ ನಿರೂಪಿಸಿದರು.