ಸ್ಪೀಕರ್ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ – ಹಾಲಿ ನ್ಯಾಯಾಧೀಶರಿಂದಲೇ ತನಿಖೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ
ಜನರ ತೆರಿಗೆ ಹಣದ ದುಂದುವೆಚ್ಚದಿಂದ ಭ್ರಷ್ಟಾಚಾರದ ವಾಸನೆ

ಸ್ಪೀಕರ್ ಹುದ್ದೆಯನ್ನು ಲಾಭದಾಯಕವಾಗಿಸಿದ ಕೀರ್ತಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ.





ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಕಚೇರಿಯಿಂದ ಅನಗತ್ಯವಾಗಿ ಯಾವುದೇ ಟೆಂಡರ್ ಇಲ್ಲದೆ ಶಾಸಕರ ಭವನಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದ ಪೀಠೋಪಕರಣ ಖರೀದಿ ಮಾಡಲಾಗಿದೆ. ಈ ವೆಚ್ಚಕ್ಕೆ 4ಜಿ ರಿಯಾಯಿತಿ ಯಾಕಾಗಿ? ನಾವ್ಯಾರೂ ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಲಾಕರ್, ಐಷಾರಾಮಿ ಪೀಠೋಪಕರಣ ಕೇಳಿಲ್ಲ, ಹಾಗಿದ್ದರೂ ಕೊಟ್ಟಿದ್ದಾರೆ. ಎಲ್ಲಾ ಕಾರುಗಳ ಚೇರ್ ಅಪ್ ಹೋಲೆಸ್ಟ್ರಿ ಬದಲಾಯಿಸಿದ್ದಾರೆ ಎಂದರು.


ಇಲ್ಲಿ ಜನರ ತೆರಿಗೆ ಹಣದ ದುಂದುವೆಚ್ಚ ಒಂದೆಡೆಯಾದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇರುವ ವಸ್ತುಗಳಿಗೆ ದುಬಾರಿ ಹಣ ತೋರಿಸಲಾಗಿದ್ದು, ಭ್ರಷ್ಟಾಚಾರದ ವಾಸನೆ ಎದ್ದಿದೆ. ಹಾಗಾಗಿ ಈ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಬೇಕು ಎಂದು ಡಾ. ಭರತ್ ಶೆಟ್ಟಿ ಒತ್ತಾಯಿಸಿದರು.




