ಮೈಸೂರು ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ಅಮಾನತು
ಅಕ್ರಮವಾಗಿ ಹಕ್ಕು ಪತ್ರ ಮಂಜೂರು ಮಾಡಿದ ಆರೋಪ – ಕರ್ತವ್ಯಲೋಪ ಸಾಬೀತು

RTI ಕಾರ್ಯಕರ್ತರು ಬಯಲಿಗೆಳೆದ ಮತ್ತೊಂದು ಅಕ್ರಮ

ಕ್ರಮಬದ್ಧವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಯ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ರವರನ್ನು ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತೆ ಲತಾರವರ ಆದೇಶದ ಮೇರೆಗೆ ಮುಡಾ ಆಯುಕ್ತರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಕ್ರಮ RTI ಕಾರ್ಯಕರ್ತ ಬಿ.ಎನ್. ನಾಗೇಂದ್ರ ನೀಡಿದ ದೂರಿನ ಅನ್ವಯ ಕೈಗೊಳ್ಳಲಾಗಿದೆ.
ದೂರಿನ ಹಿನ್ನೆಲೆ:
ಮೈಸೂರಿನ ಗೋಕುಲಂ ಬಡಾವಣೆ 3ನೇ ಹಂತದ ಮನೆ ಸಂಖ್ಯೆ 867 ಕ್ಕೆ ದಿನಾಂಕ 02-04-1982 ರಂದು ಲಿಲಿಯನ್ ಶಾರದಾ ಜೋಸೆಫ್ (W/O ಅನ್ನಿ ಜೋಸೆಫ್) ಎಂಬುವವರಿಗೆ ಮುಡಾ ವತಿಯಿಂದ 30×40 ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿತ್ತು.
ದಿನಾಂಕ 03-09-1983 ರಂದು ಲಿಲಿಯನ್ ಜೋಸೆಫ್ ನಿಧನ ಹೊಂದಿದರೂ, ಆ ಸ್ವತ್ತು ದಿನಾಂಕ 06-04-2024ರವರೆಗೆ ಯಾರಿಗೂ ವರ್ಗಾವಣೆಯಾಗಿರಲಿಲ್ಲ. ಆದರೆ ದಿನಾಂಕ 26-03-2024 ರಂದು ಕ್ರಮಬದ್ಧ ವಾರಸುದಾರರಲ್ಲದ ನೆವಿಲ್ ಮಾರ್ಕಸ್ ಜೋಸೆಫ್ ಎಂಬುವರ ಹೆಸರಿಗೆ ಕ್ರಮಬದ್ಧ ವಂಶವೃಕ್ಷ ಪಡೆಯದೆ ಪೌತಿಖಾತೆ ವರ್ಗಾವಣೆ ಮಾಡಿ, ತುಂಡು ಜಾಗ ಮಂಜೂರಿಸಿ ಹಕ್ಕುಪತ್ರ ನೀಡಲಾಗಿದೆ. ಈ ಅಕ್ರಮದ ಬಗ್ಗೆ RTI ಕಾರ್ಯಕರ್ತ ನಾಗೇಂದ್ರರವರು ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.


⚖️ ಪರಿಶೀಲನೆ ಮತ್ತು ಕ್ರಮ: ಪರಿಶೀಲನೆ ವೇಳೆ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮಸುಂದ್ರುರವರ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರದ ದುರುಪಯೋಗ: ಮುಡಾದಲ್ಲಿ ಕ್ರಯಪತ್ರ ನೀಡುವ ಅಧಿಕಾರ ಕಾರ್ಯದರ್ಶಿಗೆ ಮಾತ್ರ ನೀಡಲಾಗಿದ್ದರೂ, ಈ ಇಬ್ಬರು ಅಧಿಕಾರಿಗಳು ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ವ್ಯವಸ್ಥಾಪಕ ಸೋಮಸುಂದ್ರು ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ತಹಸೀಲ್ದಾರ್ ಕೆ.ವಿ. ರಾಜಶೇಖರ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದ ಕ್ರಮ: ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರ ಆದೇಶದಂತೆ, ಮುಡಾ ಆಯುಕ್ತರು ಕೆ.ವಿ. ರಾಜಶೇಖರ್ ರವರನ್ನು ಅಮಾನತ್ತಿನಲ್ಲಿ ಇಡುವಂತೆ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ RTI ಕಾರ್ಯಕರ್ತರು ಬಯಲಿಗೆಳೆದ ಮತ್ತೊಂದು ಮುಡಾ ಅಕ್ರಮದ ಪತ್ತೆ ಎಂದು ಪರಿಗಣಿಸಲಾಗಿದೆ.



