May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸುರತ್ಕಲ್‌ – ನಂತೂರು – ಬಿ.ಸಿ. ರೋಡ್‌ ಹೆದ್ದಾರಿ ವ್ಯಾಪ್ತಿ NHAIಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟರವರ ನಿರಂತರ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್ – ನಂತೂರು – ಬಿ.ಸಿ. ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಅನುಮೋದನೆ ನೀಡಿದೆ. ಆ ಮೂಲಕ ಹಲವು ವರ್ಷಗಳಿಂದ ದಕ್ಷಿಣ ಕನ್ನಡದ ಸಂಪರ್ಕ ಜಾಲ ಸುಧಾರಿಸುವಲ್ಲಿ ಪ್ರಮುಖ ಬೇಡಿಕೆಯಾಗಿದ್ದ ಎನ್‌ಎಂಪಿಟಿ ವ್ಯಾಪ್ತಿಯ ಈ ಹೆದ್ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕ್ಯಾಪ್ಟನ್ ಚೌಟರವರ ಪರಿಶ್ರಮ ದೊಡ್ಡ ಫಲ ನೀಡಿದೆ.

ಹೆದ್ದಾರಿ ಪ್ರಾಧಿಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮಂಗಳೂರಿನ ಅತ್ಯಂತ ನಿರ್ಣಾಯಕ ರಸ್ತೆ ಕಾರಿಡಾರ್‌ಗಳಲ್ಲಿ ಒಂದಾದ ಸುರತ್ಕಲ್‌ – ನಂತೂರು – ಬಿ.ಸಿ. ರೋಡ್‌ ಹೆದ್ದಾರಿಯ ಸಮರ್ಪಕ ನಿರ್ವಹಣೆ ಮತ್ತು ಸುಧಾರಣೆಗೆ ಕಾಯಕಲ್ಪ ದೊರೆಯುವ ಮೂಲಕ ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಮಂಗಳೂರಿನ ಈ ಬಂದರು ಸಂಪರ್ಕ ಹೆದ್ದಾರಿಯು ತೀರಾ ಹದಗೆಟ್ಟಿದ್ದು ಸರಕು ವಾಹನ ಹಾಗೂ ದೈನಂದಿನ ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆ ಎದುರಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸಂಸದ ಕ್ಯಾಪ್ಟನ್ ಚೌಟರವರು ಕಳೆದೊಂದು ವರ್ಷದಿಂದ ಸುರತ್ಕಲ್‌ – ಮಂಗಳೂರು – ಬಿ.ಸಿ. ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು NHAI ವ್ಯಾಪ್ತಿಗೆ ಹಸ್ತಾಂತರಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಸುರತ್ಕಲ್ – ನಂತೂರು – ಬಿ.ಸಿ. ರೋಡ್ ರಸ್ತೆಯು ಪ್ರಸ್ತುತ ವಿಶೇಷ ಉದ್ದೇಶದ ಘಟವಾಗಿ ರಚಿಸಲಾದ ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್ (ಎನ್‌ಎಚ್‌ಎಲ್‌ಎಂಎಲ್‌) ವ್ಯಾಪ್ತಿಗೆ ಬರುತ್ತದೆ.  ಈ ರಸ್ತೆ ನಿರ್ವಹಣೆಗೆ ನಿರ್ದಿಷ್ಟ ಎಜೆನ್ಸಿ ಇಲ್ಲದಿರುವುದು, ನಿಧಿಯ ಕೊರತೆ ಹಾಗೂ ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದು ಈ ಹೆದ್ದಾರಿ ದುಸ್ಥಿತಿಗೆ ಪ್ರಮುಖ ಕಾರಣವಾಗಿತ್ತು. ಈ ವಿಚಾರವಾಗಿ ಗಂಭೀರವಾಗಿ ಪರಿಗಣಿಸಿದ್ದ ಕ್ಯಾಪ್ಟನ್ ಚೌಟರವರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದಕ್ಕೆ ಮುಂದಾಗಿದ್ದರು.

ಅದರಂತೆ 2024ರ ಜುಲೈ 23ರಂದು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನಯ್ ಕುಮಾರ್ ರವರನ್ನು ಭೇಟಿ ಮಾಡಿ, ಸುರತ್ಕಲ್ – ಬಿ.ಸಿ. ರೋಡ್ ರಸ್ತೆಯಲ್ಲಿ ಭಾರೀ ಸರಕು ಸಾಗಾಟ, ಸರ್ವಿಸ್ ರಸ್ತೆಯ ಕೊರತೆ, ಅಪಘಾತ ವಲಯಗಳು, ಅಸಮರ್ಪಕವಾಗಿರುವ ಒಳಚರಂಡಿ ಇತ್ಯಾದಿ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಮನವಿ ಕೂಡ ಸಲ್ಲಿಸಿದ್ದರು. ಈ ಆರಂಭಿಕ ಮಧ್ಯಸ್ಥಿಕೆಯು ಈ ಮಾರ್ಗದ ಸುಧಾರಣೆಗಾಗಿ ₹28.58 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿತ್ತು.

ಈ ನಡುವೆ ಕ್ಯಾಪ್ಟನ್ ಚೌಟರವರು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿಯವರನ್ನು ಕೂಡ ಹಲವು ಸಂದರ್ಭದಲ್ಲಿ ಭೇಟಿ ಮಾಡಿ ಬಂದರು ವ್ಯಾಪ್ತಿಯ ಈ ಹೆದ್ದಾರಿಯನ್ನು ಎನ್‌ಎಚ್‌ಎಲ್‌ಎಂಎಲ್‌ನಿಂದ ಎನ್‌ಎಚ್‌ಎಐಗೆ ಹಸ್ತಾಂತರಿಸುವುದಕ್ಕೆ ಮನವಿ ಮಾಡಿದ್ದರು. ಕಳೆದ ಜೂನ್ 26ರಂದು ಸಚಿವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದರು. ಇದಾದ ಬಳಿಕ ಕಳೆದ ಮುಂಗಾರು ಅಧಿವೇಶನದಲ್ಲಿ ಮತ್ತೊಮ್ಮೆ ಸಚಿವ ನಿತಿನ್‌ ಗಡ್ಕರಿಯವರನ್ನು ಖುದ್ದು ಭೇಟಿಯಾಗಿ, ಈ ಹೆದ್ದಾರಿ ವ್ಯಾಪ್ತಿಯನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ನೀಡುವುದರಿಂದ ಮಂಗಳೂರು ಬಂದರು ಕಾರ್ಯ-ಚಟುವಟಿಕೆಗಳಿಗೆ ಹೇಗೆ ಅನುಕೂಲವಾಗಲಿದೆ; ಆ ಮೂಲಕ ಕರಾವಳಿ ಭಾಗದ ಸರಕು ಸಾಗಣೆ ಜಾಲದಲ್ಲಿ ಗಮನಾರ್ಹ ಸುಧಾರಣೆ ತರಬಹುದೆಂದು ಮನವರಿಕೆ ಮಾಡಿದ್ದರು.

ಹೀಗೆ, ಸಂಸದ ಕ್ಯಾಪ್ಟನ್ ಚೌಟರವರ ಸತತ ಪ್ರಯತ್ನದ ಫಲವಾಗಿ ಹೆದ್ದಾರಿ ಸಚಿವಾಲಯವು ಸುರತ್ಕಲ್‌ನಿಂದ ಬಿ.ಸಿ. ರೋಡ್‌ವರೆಗಿನ ಬಂದರು ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಸ್ತಾಂತರಿಸಿ ಆದೇಶ ಮಾಡಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿರುವ ಸಚಿವಾಲಯವು, ಆದಷ್ಟು ಬೇಗ ಸುರತ್ಕಲ್‌-ಬಿ.ಸಿ. ರೋಡ್‌ ಹೆದ್ದಾರಿ ಸುಧಾರಣೆ ಹಾಗೂ ರಸ್ತೆ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸೃತ್ತ ಯೋಜನಾ ವರದಿ(ಡಿಪಿಆರ್‌) ತಯಾರಿಸುವಂತೆ ಸೂಚಿಸಿದೆ. ಅಲ್ಲದೆ, ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಕಾರಿಡಾರ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆ-ತಡೆ, ಸವಾಲು ಹಾಗೂ ಬಲವರ್ಧನೆಗೆ ಕ್ರಮ ಕೈಗೊಳ್ಳುವ ಮೂಲಕ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಿದೆ.

ಹೆದ್ದಾರಿ ಸಚಿವಾಲಯದ ಈ ಮಹತ್ವದ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾಪ್ಟನ್ ಚೌಟರವರು ಸುರತ್ಕಲ್‌ – ನಂತೂರು – ಬಿ.ಸಿ. ರೋಡ್‌ ಹೆದ್ದಾರಿಯನ್ನು ಎನ್‌ಎಚ್‌ಎಲ್‌ಎಂಎಲ್‌ನಿಂದ ಎನ್‌ಎಚ್‌ಎಐಗೆ ಹಸ್ತಾಂತರಿಸಿ ಆದೇಶ ಹೊರಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರ್‌ ಹಾಗೂ ಎಲ್ಲ ಅಧಿಕಾರಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ದಕ್ಷಿಣ ಕನ್ನಡದಲ್ಲಿ ಸರಕು ಸುಧಾರಣೆ ಹಾಗೂ ಜಿಲ್ಲೆಯ ಆರ್ಥಿಕ ಚಟುವಟಿಕೆ ಬಲವರ್ಧನೆಗೆ ಇದೊಂದು ಐತಿಹಾಸಿಕ ನಿರ್ಧಾರ. ಈ ಹೆದ್ದಾರಿಯನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಸ್ತಾಂತರಿಸಬೇಕೆಂಬುದು ಹಲವು ವರ್ಷಗಳ ಬಹಳ ದೊಡ್ಡ ಬೇಡಿಕೆಯಾಗಿತ್ತು. ಆದರೆ, ಸಂಸದನಾದ ಬಳಿಕ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಆದ್ಯತೆ ಮೇರೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೆ. ಆದರೆ, ನಮ್ಮ ಈ ನಿರಂತರ ಪರಿಶ್ರಮಕ್ಕೆ ಈಗ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಈ ಹೆದ್ದಾರಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಸುವುದರಿಂದ ಈ ರಸ್ತೆಯನ್ನು ಬಳಸುವ ದೈನಂದಿನ ಪ್ರಯಾಣಿಕರು, ಉದ್ದಿಮೆದಾರರಿಗೆ ಹೆಚ್ಚಿನ ಅನುಕೂವಾಗುವ ಜತೆಗೆ ಎನ್‌ಎಂಪಿಟಿ ಬಂದರಿನ ಪರಿಸರ ವ್ಯವಸ್ಥೆ ಮತ್ತಷ್ಟು ಸುಧಾರಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page