July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉರ್ದು ಚರ್ಚಾ ಚಾಂಪಿಯನ್‌ಶಿಪ್ ಟ್ರೋಫಿ- 2025ರ ಬಹುಮಾನ ವಿತರಣಾ ಸಮಾರಂಭ

ಉರ್ದು ಭಾಷೆ ಭಾರತದಲ್ಲೇ ಹುಟ್ಟಿ, ಬೆಳೆದು, ಶಿಖರಕ್ಕೇರಿದ್ದು, ಅದು ಗಂಗೆ- ಯಮುನೆಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಉರ್ದು ಭಾಷಿಗರು ಇದರ ಬಗ್ಗೆ ಹೆಮ್ಮೆಪಡಬೇಕು ಎಂದು ಮಂಗಳೂರು ಡಯೆಟ್‌ನ ಹಿರಿಯ ಪ್ರಾಧ್ಯಾಪಕಿ ಫಾತಿಮಾಬಿ ಟಿ.ಐ. ಹೇಳಿದರು. ಬೋಳಾರದ ಶಾದಿ ಮಹಲ್‌ನಲ್ಲಿ ನವೆಂಬರ್ 30ರಂದು ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅಂಜುಮನ್ ತರಖಿ-ಎ- ಉರ್ದು ಮತ್ತು ಅರೇಬಿಕ್ ಸಂಸ್ಥೆ ಆಯೋಜಿಸಿದ್ದ ಉರ್ದು ಚರ್ಚಾ ಚಾಂಪಿಯನ್‌ಶಿಪ್ ಟ್ರೋಫಿ- 2025ರ ಬಹುಮಾನ ವಿತರಣೆ ನೆರವೇರಿಸಿ ಅವರು ಮಾತನಾಡಿದರು. ಉರ್ದು ದೇಶದ ಮಣ್ಣಿನ ಭಾಷೆಯಾಗಿದ್ದು, ಅದರಲ್ಲಿ ಸಿಹಿತನ, ತಾಜಾತನ, ಸಂಸ್ಕೃತಿ, ಸಂಸ್ಕಾರದ ಸಮ್ಮಿಲನ ಹಾಗೂ ಹೃದಯವನ್ನು ತಟ್ಟುವ ಶಕ್ತಿ ಇದೆ. ಧಾರ್ಮಿಕ ವಿದ್ವಾಂಸರು, ಕವಿಗಳು, ಸಾಹಿತಿಗಳು ಉರ್ದುವನ್ನು ಬೆಳೆಸಿದ್ದಾರೆ. ಇದು ಇಡೀ ಭಾರತೀಯರಿಗೆ ಸೇರಿದ ಭಾಷೆಯಾಗಿದ್ದು, ಕೇವಲ ಒಂದು ಧರ್ಮದ ಜತೆ ಜೋಡಿಸುವುದು ದುರಂತ ಎಂದು ವಿಷಾದಿಸಿದರು.

ಮಾತೃ ಭಾಷೆಯಲ್ಲೇ ಶಿಕ್ಷಣ ಕಲಿಯಬೇಕು ಎಂಬುದು ನಿಯಮ. ಅದರಂತೆ ಪೋಷಕರು ತಮ್ಮ ಮಕ್ಕಳಿಗೆ ಉರ್ದು ಕಲಿಸಬೇಕು. ಮಕ್ಕಳು ಸ್ವರ್ಗದ ಹೂಗಳಂತೆ. ಆ ಹೂಗಳು ಬಾಡದಂತೆ, ಅವರ ವ್ಯಕ್ತಿತ್ವ ರೂಪಿಸಿ ಅರಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದು ಎಂದು ಅವರು ಹೇಳಿದರು. ಶಿವಮೊಗ್ಗ ಡಿಡಿಪಿಐ ಕಚೇರಿ ಸಿಇಒ ಡಾ. ಝಾಕಿರ್ ಮಾತನಾಡಿ, ರಾಜ್ಯದಲ್ಲಿ ಕನ್ನಡದ ಜತೆ ತಮಿಳು, ತೆಲುಗು ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಬಹುಭಾಷೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಶಾಲೆಗಳಲ್ಲಿ ಮಾತ್ರ ಉರ್ದು ಉಳಿದಿದೆ ಎನ್ನುವುದು ಬೇಸರದ ಸಂಗತಿ. ಅರೇಬಿಕ್ ಓದುವ ಮಕ್ಕಳು ಉರ್ದು ಓದಬಲ್ಲರು. ಸರಕಾರಿ ಶಾಲೆಗಳ 1-5 ತರಗತಿಯಲ್ಲಿ ಉರ್ದು ಕಲಿಸಲು ಅನುಮತಿ ಪಡೆಯುವ ಅಗತ್ಯವಿಲ್ಲ. ಇಂಗ್ಲಿಷ್, ಕನ್ನಡ ಅಥವಾ ಉರ್ದು ಆಯ್ಕೆಗೆ ಅವಕಾಶವಿದೆ. ಸ್ಯಾಟ್ಸ್ ನಲ್ಲಿ ನೋಂದಾಯಿಸಿದರೆ ಸರಕಾರ ಉಚಿತವಾಗಿ ಪುಸ್ತಕ ಪೂರೈಸುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸಲಾಮ್ ಮದನಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾದಿ ಮಹಲ್ ಉಪಾಧ್ಯಕ್ಷ ಎಸ್.ಎ. ಖಲೀಲ್ ಉಪಸ್ಥಿತರಿದ್ದರು. ಶಿಕ್ಷಕರಾದ ಮೊಹಮ್ಮದ್ ಸಲೀಂ ಮತ್ತು ಮೊಹಮ್ಮದ್ ಝಿಯಾವುಲ್ಲಾ ತೀರ್ಪುಗಾರರಾಗಿದ್ದರು. ಸಂಸ್ಥೆಯ ಸದಸ್ಯರಾದ ಆಬಿದ್ ಅಸ್ಗರ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಸ್ಟರ್ ಮೊಹಮ್ಮದ್ ಹನೀಫ್ ಪ್ರಾಸ್ತಾವಿಕ ಮಾತನಾಡಿದರು. ಇಕ್ರಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ವಂದಿಸಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page