May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಎಚ್‌ಐವಿ ಸೋಂಕಿತರ ವಿರುದ್ಧ ತಾರತಮ್ಯ ಬೇಡ” – ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಜೈಬುನ್ನಿಸಾ

ಹೆಚ್‌ಐವಿ ಒಂದು ಸೂಕ್ಷ್ಮ ರೋಗಾಣುವಿನಿಂದ ಉಂಟಾಗುವ ಸೋಂಕಾಗಿದ್ದು, ಸೋಂಕಿತರನ್ನು ಸಮಾಜದಲ್ಲಿ ತಾರತಮ್ಯಕ್ಕೆ ಒಳಪಡಿಸುವುದು ಅವರ ಬದುಕುವ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಆದ್ದರಿಂದ ಎಚ್‌ಐವಿ ನಿಯಂತ್ರಣ ಮತ್ತು ತಡೆ ಕಾಯ್ದೆ–2017ರ ಪ್ರಕಾರ ಸೋಂಕಿತರ ಮಾನವೀಯ ಹಾಗೂ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಜೈಬುನ್ನಿಸಾ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಂಗಣ, ಮಂಗಳೂರಿನಲ್ಲಿ ಡಿಸೆಂಬರ್ 5ರಂದು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಹೆಚ್‌ಐವಿ ಪರೀಕ್ಷೆ, ಚಿಕಿತ್ಸೆ ಅಥವಾ ಸಂಶೋಧನೆ ನಡೆಸುವಂತಿಲ್ಲ. ಹೆಚ್‌ಐವಿ ಸೋಂಕಿತರು ಅಥವಾ ಪೀಡಿತರ ಬಗ್ಗೆ ಕಳಂಕ ಹಾಗೂ ತಾರತಮ್ಯ ಬೇಡ, ಅವರಿಗೂ ಸಮಾನವಾಗಿ ಸಮಾಜದಲ್ಲಿ ಬದುಕುವ ಅವಕಾಶ ನೀಡಬೇಕೆಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಅವರು, ಹದಿಹರೆಯದ ಯುವಜನರಲ್ಲಿ ಮಾನಸಿಕ ಗೊಂದಲಗಳು ಸಹಜವಾಗಿದ್ದು, ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನ ದೊರೆತರೆ ಆರೋಗ್ಯಕರ ಮತ್ತು ಸದೃಢ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು. ಸುರತ್ಕಲ್‌ನ ಜಿಲ್ಲಾ ತರಬೇತಿ ಕೇಂದ್ರದ  ಪ್ರಾಂಶುಪಾಲರಾದ ಡಾ. ಕಿಶೋರ್ ಕುಮಾರ್ ಎಂ., ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಮೂಲಕ ಹೆಚ್‌ಐವಿ/ಏಡ್ಸ್ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಂಡ ಮೌಲ್ಯಗಳು ಜೀವನಪೂರ್ತಿ ಮಾರ್ಗದರ್ಶಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಿ.ಎ. ಶಾಂತಾರಾಮ್ ಶೆಟ್ಟಿ ಅವರು, ಹೆಚ್‌ಐವಿ/ಏಡ್ಸ್ ತಡೆಗಟ್ಟಲು ಮುಂಜಾಗ್ರತೆ ಅತ್ಯಗತ್ಯ. ಯುವಜನರು, ಮಹಿಳೆಯರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಬೇಕು. ರೆಡ್ ಕ್ರಾಸ್ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳು ಮತ್ತು ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿತ ರಕ್ತವು ಹೆರಿಗೆಯ ಸಂದರ್ಭದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಉಪಯುಕ್ತವಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಅವರು ಪ್ರಸ್ತಾವಿಕ ಭಾಷಣದಲ್ಲಿ ವಿಶ್ವ ಏಡ್ಸ್ ದಿನದ ಮಹತ್ವ ಮತ್ತು ಹೆಚ್‌ಐವಿ/ಏಡ್ಸ್ ಕುರಿತು ಜಾಗೃತಿ ಅಗತ್ಯವನ್ನು ವಿವರಿಸಿದರು.

ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತ ವೈದ್ಯಕೀಯ ಅಧಿಕಾರಿ ಡಾ. ರೋಹನ್ ಮೋನಿಸ್ ಅವರು, 2025ರ ವಿಶ್ವ ಏಡ್ಸ್ ದಿನದ ಧ್ಯೇಯ ವಾಕ್ಯದ ಹಿನ್ನೆಲೆಯಲ್ಲಿ KSAPS ಹಾಗೂ NACO ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ–ಖಾಸಗಿ ಪಾಲುದಾರಿಕೆಯ ಮೊದಲ ART ಕೇಂದ್ರ ಸ್ಥಾಪನೆಯ ಕುರಿತು ವಿವರಿಸಿ, ಸಹಕಾರ ನೀಡಿದ ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಖತೀಜಾ ದಿಲ್‌ಷದ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ತಾರಾನಾಥ ವಂದನಾರ್ಪಣೆ ಸಲ್ಲಿಸಿದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page