August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಜಮೀಯ್ಯತುಲ್ ಫಲಾಹ್ ಮಹಿಳಾ ವಸತಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು ನಗರದ ಮಿಶನ್ ಕಂಪೌಂಡ್‌ನಲ್ಲಿ ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ವತಿಯಿಂದ ನಿರ್ಮಿಸಲಾಗುವ ಜಮೀಯ್ಯತುಲ್ ಫಲಾಹ್ ಮಹಿಳಾ ವಸತಿ ನಿಲಯ ಕಟ್ಟಡಕ್ಕೆ ಡಿಸೆಂಬರ್ 21ರಂದು ಭಾನುವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು. ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು, ಜಮೀಯ್ಯತುಲ್ ಫಲಾಹ್ ಸಂಸ್ಥೆ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಹಿಂದುಳಿಯಲು ಹಾಸ್ಟೆಲ್ ಹಾಗೂ ಮೂಲಸೌಕರ್ಯಗಳ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಇಂತಹ ಸಂದರ್ಭದಲ್ಲಿ ಸುಸಜ್ಜಿತ ಮಹಿಳಾ ವಸತಿ ನಿಲಯ ನಿರ್ಮಾಣ ಯೋಜನೆ ಶ್ಲಾಘನೀಯವಾಗಿದೆ ಎಂದರು. ಈ ಯೋಜನೆಗೆ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರೂಪಾಯಿ 2 ಕೋಟಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ವೈ. ಅಬ್ದುಲ್ ಕುಂಞಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿವೇತನದ ಮೂಲಕ ಜಮೀಯ್ಯತುಲ್ ಫಲಾಹ್ ಮುಸ್ಲಿಂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದರು. ಹಾಸ್ಟೆಲ್ ಕೊರತೆಯಿಂದಾಗಿ ಅನೇಕ ಪ್ರತಿಭಾವಂತ ಹೆಣ್ಣು ಮಕ್ಕಳು ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಗಿರುವ ಪರಿಸ್ಥಿತಿ ಇನ್ನೂ ಇದೆ. ಈ ಸಮಸ್ಯೆಗೆ ಪರಿಹಾರವಾಗಿ ಹೆಣ್ಣು ಮಕ್ಕಳಿಗೂ ಉದ್ಯೋಗಸ್ಥ ಮಹಿಳೆಯರಿಗೂ ಸುರಕ್ಷಿತ ಹಾಗೂ ಸುಸಜ್ಜಿತ ವಸತಿ ನಿಲಯ ನಿರ್ಮಿಸುವ ಯೋಜನೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಅಲಿ, ಜುಬೈಲ್ ಎಕ್ಸ್‌ಪರ್ಟೈಸ್ ಗ್ರೂಪ್‌ನ ಸಿಇಒ ಕೆ.ಎಸ್. ಶೇಖ್ ಕರ್ನಿರೆ, ಜಮೀಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜುಬೈಲ್‌ನ ಅಲ್‌ಮುಝೈನ್ ಗ್ರೂಪ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಬಿಸಿಸಿಐ) ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಮನಪಾ ಮಾಜಿ ಸದಸ್ಯ ನವೀನ್ ಡಿಸೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಾಸ್ಟೆಲ್ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ರಿಯಾಝ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಸೈಯ್ಯದ್ ಅಶ್ಫಾಕ್ ಅಹ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಹನೀಫ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ತಿಯಾಝ್ ಖತೀಬ್ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

You may also like

News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.
News

“ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ – ಸಮಿತಿ ರಚನೆಗೆ ಸಿಜೆ ಭರವಸೆ”

ಬೆಂಗಳೂರು: ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು

You cannot copy content of this page