April 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ನಗರ ಪೊಲೀಸ್–ಮೇಕ್ ಎ ಚೇಂಜ್ ಫೌಂಡೇಶನ್‌ನ ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಚಾಲನೆ – ಸಮಾಜದ ಸಹಭಾಗಿತ್ವಕ್ಕೆ ಧರ್ಮಗುರುಗಳ ಕರೆ

ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸರ ಜತೆಗೆ ಸಮಾಜದ ಸಕ್ರಿಯ ಸಹಭಾಗಿತ್ವ ಅಗತ್ಯವಿದೆ ಎಂಬ ಸಂದೇಶದೊಂದಿಗೆ ಮಂಗಳೂರು ನಗರ ಪೊಲೀಸ್ ಹಾಗೂ ಮೇಕ್ ಎ ಚೇಂಜ್ ಫೌಂಡೇಶನ್ ವತಿಯಿಂದ ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಡಿಸೆಂಬರ್ 27ರಂದು ಶನಿವಾರ ಚಾಲನೆ ನೀಡಲಾಯಿತು. ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಯನ್ ಸೆಂಟರ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ಮಠದ ಯುಗೇಶಾನಂದ ಸ್ವಾಮೀಜಿ, ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ, ಎಸ್ಸೆಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಸೇರಿದಂತೆ ವಿವಿಧ ಧರ್ಮಗುರುಗಳು ಮತ್ತು ಗಣ್ಯರು ಭಾಗವಹಿಸಿ ಡ್ರಗ್ಸ್ ವಿರುದ್ಧದ ಅಭಿಯಾನದ ಮಹತ್ವವನ್ನು ಸಾರಿದರು.

ಯುಗೇಶಾನಂದ ಸ್ವಾಮೀಜಿ ಅವರು ಮಾತನಾಡಿ, ಕ್ಷಣಿಕ ಸಂತೋಷ ಹಾಗೂ ಕೃತಕ ‘ಕಿಕ್’’ಗಾಗಿ ಯುವ ಪೀಳಿಗೆ ಡ್ರಗ್ಸ್‌ನಂತಹ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದೆ. ಆದರೆ ಇವು ದೇಹ–ಮನಸ್ಸಿನ ಮೇಲೆ ಗಂಭೀರ ದುಷ್ಪರಿಣಾಮ ಬೀರುವುದರಿಂದ ಯುವಕರು ಜಿಮ್, ನೃತ್ಯ, ಸಂಗೀತದಂತಹ ಆರೋಗ್ಯಕರ ಚಟುವಟಿಕೆಗಳತ್ತ ಮನಸ್ಸು ಹರಿಸಬೇಕು ಎಂದು ಹೇಳಿದರು.

ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಮಾತನಾಡಿ, ಮಂಗಳೂರು ಐಟಿ ನಗರವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಮಾದಕ ನಶೆಯಷ್ಟೇ ಅಲ್ಲದೆ ಅಧಿಕಾರ, ಮೋಜು–ಮಸ್ತಿಯ ನಶೆಯಿಂದಲೂ ಸಮಾಜವನ್ನು ಮುಕ್ತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಖಾಲಿಯಾದ ಹೃದಯಗಳಲ್ಲಿ ಆಧ್ಯಾತ್ಮಿಕತೆ, ದೇವರ ಮೇಲಿನ ಪ್ರೀತಿ ಮತ್ತು ನಿಜ ಜೀವನದ ಅರ್ಥವನ್ನು ತುಂಬಬೇಕಾಗಿದೆ ಎಂದು ಹೇಳಿದರು.

ಎಸ್ಸೆಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಅವರು ಮಾತನಾಡಿ, ಬದಲಾವಣೆ ಇಂದಿನಿಂದಲೇ ಆರಂಭವಾಗಬೇಕು ಎಂಬ ದೃಢ ನಿರ್ಧಾರದಿಂದ ಡ್ರಗ್ಸ್ ಮುಕ್ತ ಸಮಾಜದತ್ತ ಸಾಗಬೇಕು. ಎಲ್ಲಾ ಧರ್ಮಗಳು ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೋಧಿಸುತ್ತವೆ. ಮಾನವೀಯತೆ ನೆಲೆಸಬೇಕಾದರೆ ಅಸಹಿಷ್ಣುತೆ ಮೀರಿದ ಸಮಾಜ ನಿರ್ಮಾಣ ಅಗತ್ಯ ಎಂದರು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್‌ನ ಸಂಸ್ಥಾಪಕ ಸುಹೇಲ್ ಕಂದಕ್, ನಶೆ ಮುಕ್ತ ಮಂಗಳೂರು ಅಭಿಯಾನದಡಿ 102 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜಿಲ್ಲಾಡಳಿತ, ವಿವಿಧ ಧಾರ್ಮಿಕ ಮುಖಂಡರು, ಶಿಕ್ಷಣ ಸಂಸ್ಥೆಗಳು ಹಾಗೂ ತುಳುನಾಡಿನ ಪ್ರಸಿದ್ಧ ನಟರು ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಮಾತನಾಡಿ, ಮಂಗಳೂರಿನ ಸಾಧನೆಗಳ ಬಗ್ಗೆ ಹೆಮ್ಮೆ ಇದ್ದರೂ, ಡ್ರಗ್ಸ್ ಸೇವನೆ ಹಾಗೂ ಮಾರಾಟ ಪ್ರಕರಣಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಪಿಯು ಸೇರಿದಂತೆ ವಿದ್ಯಾರ್ಥಿಗಳು ಸಿಕ್ಕಿಬೀಳುತ್ತಿರುವುದು ನೋವಿನ ಸಂಗತಿ ಎಂದರು. ಡ್ರಗ್ಸ್ ಸೇವನೆ–ಮಾರಾಟದಿಂದ ದೂರ ಉಳಿಯುವ ಜತೆಗೆ, ಇಂತಹ ಕೃತ್ಯಗಳು ಕಂಡುಬಂದರೆ ದೂರು ನೀಡುವಂತೆ ಅವರು ಮನವಿ ಮಾಡಿದರು.

ಈ ಸಂಬಂಧ ಎಲ್ಲಾ ಶಾಲಾ–ಕಾಲೇಜುಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದ್ದು, ಮಾಹಿತಿ ನೀಡುವವರ ವಿವರಗಳು ಸಂಪೂರ್ಣ ಗೌಪ್ಯವಾಗಿರುತ್ತವೆ. ಕ್ಯೂಆರ್ ಕೋಡ್ ಮೂಲಕ ಬಂದ ಮಾಹಿತಿಯ ಆಧಾರದಲ್ಲೇ ಕಳೆದ ಒಂದು ವಾರದಲ್ಲಿ 25 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ ಆರು ತಿಂಗಳಲ್ಲಿ 10,000 ವಿದ್ಯಾರ್ಥಿಗಳನ್ನು ಡ್ರಗ್ಸ್ ಟೆಸ್ಟ್‌ಗೆ ಒಳಪಡಿಸಲಾಗಿದ್ದು, 50 ಮಂದಿಯಲ್ಲಿ ಡ್ರಗ್ಸ್ ಸೇವನೆ ಪತ್ತೆಯಾಗಿದೆ ಎಂದೂ ಹೇಳಿದರು. ಪಾಸಿಟಿವ್ ಕಂಡುಬಂದವರಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ನಟ ರೂಪೇಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಧರ್ಮ, ವೆನ್‌ಲಾಕ್ ಆಸ್ಪತ್ರೆಯ ಮುಖ್ಯಸ್ಥ ಡಾ. ಶಿವಪ್ರಕಾಶ್, ಎಸ್ಸೆಸ್ಸೆಸ್ಸೆಫ್ ರಾಜ್ಯ ಅಧ್ಯಕ್ಷ ಹಫೀಝ್ ಸುಫಿಯಾನ್, ಉದ್ಯಮಿ ಡಿಯೋನ್ ಮೊಂತೆರೋ, ಡಿಸಿಪಿಗಳಾದ ಮಿಥುನ್ ಹಾಗೂ ರವಿಶಂಕರ್, ಸೈಕೋಲಾಜಿಸ್ಟ್ ಡಾ. ರುಕ್ಸಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂತಿಮವಾಗಿ ಮಾತನಾಡಿದ ಅನೀಸ್ ಕೌಸರಿ, ಡ್ರಗ್ಸ್ ವ್ಯಸನಕ್ಕೆ ಬಲಿಯಾದವರಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ-ಅಡಿಕ್ಷನ್ ಸೆಂಟರ್ ಅಗತ್ಯವಿದ್ದು, ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

You may also like

News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ
News

Saint Theresa’s School Mangaluru Records 22nd Consecutive Year of 100% Success in ICSE Class X Exams 2025–26

Principal Sr Lourdes  and faculty congratulate students on their success MANGALURU: In a resounding celebration of intellectual brilliance and disciplined

You cannot copy content of this page