May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ನಿವಾಸಿ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ನಿಧನ

ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದ ಸೇವೆಗೆ ಸಮರ್ಪಿತ ಜೀವನಕ್ಕೆ ಶಾಂತ ಅಂತ್ಯ

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿಯಾಗಿದ್ದ ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷ ಪ್ರಾಯದ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು ಇಂದು ಡಿಸೆಂಬರ್ 30ರಂದು ಮುಂಜಾನೆ ಅಸೌಖ್ಯದಿಂದ ನಿಧನ ಹೊಂದಿದರು. ಅವರ ನಿಧನದ ಸುದ್ದಿ ಸೂರಿಕುಮೇರು ಸೇರಿದಂತೆ ಧಾರ್ಮಿಕ ವಲಯದಲ್ಲಿ ತೀವ್ರ ದುಃಖ ಮತ್ತು ಶೋಕವನ್ನುಂಟುಮಾಡಿದೆ.

ಬೊನವೆಂಚರ್ ಪಿಂಟೊ ಮತ್ತು ಆಲಿಸ್ ಪಿಂಟೊ ದಂಪತಿಗಳಿಗೆ ಪುತ್ರರಾಗಿ 1968ರ ಫೆಬ್ರವರಿ 28ರಂದು ಜನಿಸಿದ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು, ಬಾಲ್ಯದಿಂದಲೇ ಧಾರ್ಮಿಕತೆ, ಶಿಸ್ತು ಹಾಗೂ ಸೇವಾಭಾವವನ್ನು ತಮ್ಮ ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡಿದ್ದರು. 2003ರ ಮೇ 1ರಂದು ಗುರುದೀಕ್ಷೆ ಪಡೆದ ಅವರು, ನಂತರ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಅನೇಕ ವರ್ಷಗಳ ಕಾಲ ನಿಷ್ಠೆಯಿಂದ ದೇವಜನರ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದರು.

ಸರಳ ಸ್ವಭಾವ, ಮೃದು ವಾಣಿ, ಪ್ರೀತಿ ಮತ್ತು ಕಾಳಜಿಯೊಂದಿಗೆ ಜನರ ಹೃದಯ ಗೆದ್ದ ಫಾದರ್ ಫೆಲಿಕ್ಸ್ ಪಿಂಟೊ ಅವರು, ಧರ್ಮೋಪದೇಶ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅನೇಕ ವಿಶ್ವಾಸಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಸೇವೆ ಸಲ್ಲಿಸಿದ ಪ್ರತಿಯೊಂದು ಸ್ಥಳದಲ್ಲಿಯೂ ತಮ್ಮ ವಿನಮ್ರತೆ ಹಾಗೂ ಆತ್ಮೀಯತೆಯಿಂದ ಆಳವಾದ ಗುರುತು ಮೂಡಿಸಿದ್ದರು.

ಮೃತರು ತಂದೆ ಬೊನವೆಂಚರ್ ಪಿಂಟೊ, ಸಹೋದರ ವಿಕ್ಟರ್ ಪಿಂಟೊ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಫಾದರ್ ಫೆಲಿಕ್ಸ್ ಪಿಂಟೊ ಅವರ ನಿಧನಕ್ಕೆ ಸೂರಿಕುಮೇರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ಎಲಿಯಾಸ್ ಪಿರೇರಾ, ಮಾಜಿ ಅಧ್ಯಕ್ಷ ತೊಮಸ್ ಲಸ್ರಾದೊ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. “ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರ ಸೇವಾಮಯ ಜೀವನ ಸದಾ ಸ್ಮರಣೀಯ” ಎಂದು ಅವರುಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರ ಅಂತಿಮ ವಿಧಿವಿಧಾನವು 2026ರ ಜನವರಿ 1ರಂದು ಗುರುವಾರ ಸಂಜೆ 3:30 ಗಂಟೆಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಭಗವಂತರು ಅವರ ಆತ್ಮಕ್ಕೆ ಶಾಶ್ವತ ಶಾಂತಿಯನ್ನು ನೀಡಲಿ ಹಾಗೂ ದುಃಖತಪ್ತ ಕುಟುಂಬಸ್ಥರಿಗೆ, ಬಂಧು-ಮಿತ್ರರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಮಸ್ತ ಭಕ್ತ ಸಮುದಾಯ ಪ್ರಾರ್ಥಿಸಿದೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page