July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

25 ವರ್ಷಗಳ ಶಿಕ್ಷಣ ಸೇವೆ – ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಶಿಕ್ಷಕಿ ಸ್ಟೆಲ್ಲಾ

ಮಡಿಕೇರಿ ಮೂಲದ ಸ್ಟೆಲ್ಲಾ ದೀಪ್ತಿ ಬಿ. ಅವರು ಕಳೆದ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅಕ್ಷಯ ಸೇವೆ ಸಲ್ಲಿಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಬರ್ನಾಡ್ ಹಾಗೂ ಬ್ರಿಜಿಟ್ ದಂಪತಿಯ ಪುತ್ರಿಯಾದ ಅವರು TCH, MBA, M.A, B.Ed, LLB ಸೇರಿದಂತೆ ಉನ್ನತ ವಿದ್ಯಾಭ್ಯಾಸವನ್ನು ಪಡೆದು, ಶಿಕ್ಷಣ ವೃತ್ತಿಯನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ.

ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಮೈಸೂರಿನ ಸಂತ ಜೋಸೆಫರ ಶಾಲೆ, ಪ್ರಾಥಮಿಕ ಶಾಲೆ ಹಾಗೂ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಅವರು, ನಂತರ ಸಂಹಿತಾ ಅಕಾಡೆಮಿ ಶಾಲೆಯಲ್ಲಿ ಒಂದು ವರ್ಷ ವಿಶೇಷ ತರಬೇತಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಳಿಕ ಬೆಂಗಳೂರಿನ ಶಾಂತಿನಿಕೇತನ್ ಶಾಲೆಯಲ್ಲಿ ಏಳು ವರ್ಷಗಳ ಕಾಲ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. 2015ರಲ್ಲಿ ರಾಯನ್ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು, 2018ರಲ್ಲಿ “ಉತ್ತಮ ಶಿಕ್ಷಕಿ” ಪ್ರಶಸ್ತಿಯನ್ನು ಪಡೆದರು.

ವಿಬ್ಗ್ಯೋರ್ ಶಾಲೆ ಹಾಗೂ ಸೀಕ್ರೆಟ್ ಹಾರ್ಟ್ ಶಾಲೆಯಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿಯೂ, ಸ್ಲಂ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದ ಸ್ಟೆಲ್ಲಾ ದೀಪ್ತಿ ಬಿ. ಅವರು, ಹುಲುವಳ್ಳಿ ಲೀಡಿಂಗ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ 2023 ರಿಂದ 2024ರವರೆಗೆ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಗ್ಲೇನ್ ಟ್ರೀ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ನೀಡುತ್ತಿದ್ದಾರೆ. 25 ವರ್ಷಗಳ ಶಿಕ್ಷಣ ಸೇವೆಯಲ್ಲಿ ಅನೇಕ ಕಷ್ಟದ ಸಂದರ್ಭಗಳನ್ನೂ ಎದುರಿಸಿದರೂ, ಶಿಕ್ಷಣ ವೃತ್ತಿಯನ್ನು ಎಂದಿಗೂ ಕೈಬಿಡದೆ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಬಂದಿರುವುದು ಅವರ ಸಾಧನೆಯ ಮುಖ್ಯ ಅಂಶವಾಗಿದೆ. 2018ರಲ್ಲಿ ಉಚಿತ ಟ್ಯೂಷನ್ ಸೆಂಟರ್ ಆರಂಭಿಸಿ, ಶಾಲಾ ಪಠ್ಯದ ಎಲ್ಲಾ ವಿಷಯಗಳನ್ನು ತಾವೂ ಹಾಗೂ ಇತರ ಶಿಕ್ಷಕರ ಸಹಕಾರದಿಂದ ಉಚಿತವಾಗಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, 9 ಮತ್ತು 10ನೇ ತರಗತಿ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮ, ಮೊಬೈಲ್ ಬಳಕೆಯ ಅಪಾಯ, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜಾಗೃತಿ ಹಾಗೂ ಅಪರಾಧ ಮುನ್ನೆಚ್ಚರಿಕೆ ಕುರಿತು ಪೊಲೀಸ್ ಮತ್ತು ಮಾನಸಿಕ ತಜ್ಞರ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜೊತೆಗೆ ಪ್ರತಿವರ್ಷ ಬೇಸಿಗೆ ರಜೆಯಲ್ಲಿ ಯೋಗ, ಸಾಂಸ್ಕೃತಿಕ ಚಟುವಟಿಕೆಗಳು, ನೃತ್ಯ, ನಾಟಕ, ಸ್ಪೋಕನ್ ಇಂಗ್ಲಿಷ್, ಬರವಣಿಗೆ ಹಾಗೂ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಗೆ ಕನ್ನಡ ಕಲಿಸುವ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.

ಈ ಎಲ್ಲಾ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಅವರ ಕುಟುಂಬದ ಸಂಪೂರ್ಣ ಬೆಂಬಲವೇ ಪ್ರಮುಖ ಶಕ್ತಿಯಾಗಿದೆ. ಪತಿ ಸಹಾಯ ರಾಜ್ ಅವರು ಟ್ಯೂಷನ್ ಸೆಂಟರಿನ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಶೂ ಹಾಗೂ ಹಬ್ಬದ ಸಮಯದಲ್ಲಿ ಬಟ್ಟೆಗಳನ್ನು ಹಂಚುತ್ತಾ ಬರುತ್ತಿದ್ದಾರೆ. ಇವರ ಪುತ್ರ ಸಂಪ್ರೀತ್ ಸಹ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಪಾಠಗಳನ್ನು ಮಾಡುತ್ತಾ ಸಹಾಯ ಮಾಡುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಸಿವಿಲ್ ಪರೀಕ್ಷೆ ಬರೆಯುವ ಮೂಲಕ ಉತ್ತಮ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಹೊಂದಿದ್ದಾರೆ.

ಶಿಕ್ಷಕಿ ಮಾತ್ರವಲ್ಲದೆ ಸಾಹಿತ್ಯ ರಚನೆಯಲ್ಲೂ ತೊಡಗಿಸಿಕೊಂಡಿರುವ ಸ್ಟೆಲ್ಲಾ ದೀಪ್ತಿ ಬಿ. ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯಿಂದ “ಉತ್ತಮ ಸಹಾಯಕ ಶಿಕ್ಷಕಿ” ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಭೂತನ್ ಪ್ರಶಸ್ತಿ ಹಾಗೂ 2025ರ ನವೆಂಬರ್‌ನಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “ವಿದ್ಯಾರತ್ನ” ಪ್ರಶಸ್ತಿ ಲಭಿಸಿದ್ದು, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಂದ ಈ ಗೌರವವನ್ನು ಸ್ವೀಕರಿಸಿದ್ದಾರೆ.

“ನನ್ನಿಂದ ಆಗುವವರೆಗೆ ಮಕ್ಕಳಿಗೆ ಶಿಕ್ಷಣ ನೀಡುವ ಸೇವೆಯನ್ನು ಮುಂದುವರಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ. ಇಂತಹ ಸಮರ್ಪಿತ ಶಿಕ್ಷಕಿ ನಮ್ಮ ನಡುವೆ ಇರುವುದೇ ಹೆಮ್ಮೆಯ ವಿಷಯವಾಗಿದ್ದು, ಪ್ರೇರಣೆಯ ರೂಪವಾಗಿ ನಿಂತಿರುವ ಸ್ಟೆಲ್ಲಾ ದೀಪ್ತಿ ಬಿ. ಅವರಿಗೆ ಅಭಿನಂದನೆಗಳು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page