May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫೆಬ್ರವರಿ 14–15ರಂದು ಜಪ್ಪಿನಮೊಗರುವಿನಲ್ಲಿ 16ನೇ ವರ್ಷದ ಹೊನಲು ಬೆಳಕಿನ ಜಯ–ವಿಜಯ ಜೋಡುಕೆರೆ ಕಂಬಳ

ಮನ್ಕುತೋಟಗುತ್ತು ಹಾಗೂ ನಾಡಾಜೆಗುತ್ತು ಇವರ ಸ್ಮರಣಾರ್ಥ ನಗರದ ಜಪ್ಪಿನಮೊಗರುವಿನಲ್ಲಿ 16ನೇ ವರ್ಷದ ಹೊನಲು ಬೆಳಕಿನ ಜಯ–ವಿಜಯ ಜೋಡುಕೆರೆ ಕಂಬಳ ಫೆಬ್ರವರಿ 14 ಮತ್ತು 15ರಂದು ಭವ್ಯವಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಹಾಗೂ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಅವರು ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿ 14ರಂದು ಬೆಳಿಗ್ಗೆ 8.30ಕ್ಕೆ ಶ್ರೀ ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳ ಉದ್ಘಾಟನೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮಕ್ಕೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ನಟ–ನಟಿಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಈ ಬಾರಿ ಕಂಬಳದಲ್ಲಿ 150ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು, ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

ಸಮಿತಿಯ ಗೌರವ ಸಲಹೆಗಾರ ಜಪ್ಪುಗುಡ್ಡೆ ಗುತ್ತು ಭುಜಂಗ ಶೆಟ್ಟಿ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಮನ್ಕುತೋಟಗುತ್ತು ಅನಿಲ್ ಜೆ. ಶೆಟ್ಟಿ ಮಾತನಾಡಿ, ಕಂಬಳದಲ್ಲಿ ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜೋಡುಕೆರೆ ಕಂಬಳ ಹಾಗೂ ತಿರುವೈಲು ಕಂಬಳದಲ್ಲಿ ಸಮಯ ನಿಗದಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತರೆ ಕಂಬಳಗಳಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ವೀಣಾಮಂಗಳ, ಪ್ರವೀಣಚಂದ್ರ ಆಳ್ವ (ತಿರುವೈಲ್ ಗುತ್ತು), ಶಕೀನ್ ಶೆಟ್ಟಿ, ಸಂದೀಪ್ ಶೆಟ್ಟಿ, ನಿಶಾನ್ ಪೂಜಾರಿ, ಗೌರವ ಸಲಹೆಗಾರರಾದ ಭುಜಂಗ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಜೆ. ನಾಗೇಂದ್ರ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page