July 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಲಘು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ಸಿಪಿಆರ್ ನೀಡಿ ಜೀವ ಉಳಿಸಿದ ಬಂಟ್ವಾಳ ನಗರ ಠಾಣೆಯ ‘ನೈಟ್ ಬೀಟ್’ ಸಿಬ್ಬಂದಿಗಳು

ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಗಳಾದ ವಿನೋದ್ ಹಾಗೂ ಜಯಗಣೇಶ್

ರಾತ್ರಿ ಇಡೀ ಜಗತ್ತು ಮಲಗಿರುವಾಗ ಸಾರ್ವಜನಿಕರ ರಕ್ಷಣೆಗಾಗಿ ಗಸ್ತು ತಿರುಗುವ ಪೊಲೀಸರು, ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲದೇ ಮಾನವೀಯತೆಯಲ್ಲೂ ತಾವೇ ಮುಂದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಬಂಟ್ವಾಳ ನಗರ ಠಾಣೆಯ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ, ತೀವ್ರ ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಡುರಾತ್ರಿಯಲ್ಲಿ ಕೇಳಿದ ಆಕ್ರಂದನ:

ಗೂಡಿನಬಳಿ ನಿವಾಸಿ ಅಶ್ರಫ್ ಎಂಬುವವರಿಗೆ ನಡುರಾತ್ರಿಯಲ್ಲಿ ದಿಢೀರನೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ತೀವ್ರವಾಗಿ ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ಗಾಬರಿಗೊಂಡ ಕುಟುಂಬಸ್ಥರು ಸಹಾಯಕ್ಕಾಗಿ ಜೋರಾಗಿ ಬಾಗಿಲು ಬಡಿಯುತ್ತಾ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ವೇಳೆ ಆ ಪರಿಸರದಲ್ಲಿ ನೈಟ್ ಬೀಟ್ (ರಾತ್ರಿ ಗಸ್ತು) ತಿರುಗುತ್ತಿದ್ದ ಬಂಟ್ವಾಳ ನಗರ ಠಾಣೆಯ ಸಿಬ್ಬಂದಿಗೆ ಈ ಧ್ವನಿ ಕೇಳಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಯಾವುದೇ ತಡ ಮಾಡದೆ ಆಕ್ರಂದನ ಕೇಳಿಬಂದ ಮನೆಗೆ ಧಾವಿಸಿದ್ದಾರೆ.

ದೇವದೂತರಾದ ಪೊಲೀಸರು – ಸಕಾಲದಲ್ಲಿ ಸಿಕ್ಕ ಸಿಪಿಆರ್:

ಸ್ಥಳಕ್ಕೆ ತಲುಪಿದಾಗ ಅಶ್ರಫ್ ಅವರು ಲಘು ಹೃದಯಾಘಾತಕ್ಕೊಳಗಾಗಿ (Mild Heart Attack) ಒದ್ದಾಡುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಕ್ಷಣಮಾತ್ರದಲ್ಲಿ ಅರಿತ ಗಸ್ತು ಸಿಬ್ಬಂದಿ, ಆಂಬ್ಯುಲೆನ್ಸ್ ಬರುವವರೆಗೆ ಕಾಯದೆ ತಕ್ಷಣವೇ ಪ್ರಥಮ ಚಿಕಿತ್ಸೆ ಆರಂಭಿಸಿದ್ದಾರೆ. ಅಶ್ರಫ್ ಅವರಿಗೆ ಸಕಾಲದಲ್ಲಿ ಸಿಪಿಆರ್ (CPR – Cardio-Pulmonary Resuscitation) ನೀಡುವ ಮೂಲಕ ಪ್ರಾಣವಾಯು ನಿಲ್ಲದಂತೆ ನೋಡಿಕೊಂಡಿದ್ದಾರೆ. ಆ ಬಳಿಕ ಒಂದು ಕ್ಷಣವೂ ವ್ಯರ್ಥ ಮಾಡದೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಿದ್ದಾರೆ.

ಸಾರ್ವಜನಿಕರಿಂದ ಶ್ಲಾಘನೆಯ ಮಹಾಪೂರ:

ಬಂಟ್ವಾಳ ನಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ (ಹೋಮ್ ಗಾರ್ಡ್ಸ್) ಸಿಬ್ಬಂದಿ ಜಯಗಣೇಶ್ ಅವರೇ ಈ ಮಾನವೀಯ ಕಾರ್ಯ ಮಾಡಿದ ದೇವದೂತರು. ಇವರ ಅದ್ಭುತ ಸಮಯಪ್ರಜ್ಞೆ, ತುರ್ತು ಸ್ಪಂದನೆ ಮತ್ತು ಕರ್ತವ್ಯ ನಿಷ್ಠೆಯಿಂದಾಗಿ ಅಶ್ರಫ್ ಅವರ ಜೀವ ಉಳಿದಿದೆ. ಸದ್ಯ ಅಶ್ರಫ್ ಅವರು ಚೇತರಿಸಿಕೊಳ್ಳುತ್ತಿದ್ದು, ಪೊಲೀಸರ ಈ ಜೀವ ರಕ್ಷಕ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

You may also like

News

ಲಾವಣ್ಯ ಹತ್ಯೆ ಪ್ರಕರಣ – ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆರೋಪಿ ಚೇತನ್ 4 ದಿನ ಪೊಲೀಸ್ ಕಸ್ಟಡಿಗೆ!

ರಾಜ್ಯದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಬಿ.ಸಿ. ರೋಡ್‌ನ ಲಾವಣ್ಯ ಭೀಕರ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಘಟನೆ ನಡೆದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ
News

Saint Sebastian Church, Bendur Celebrates ‘Pavsa Gammat 2026’ with Traditional Flavours, Culture and Community Spirit

The Saint Sebastian Church, Bendur, came alive with colour, tradition and togetherness as it hosted ‘Pavsa Gammat 2026’, a vibrant

You cannot copy content of this page