October 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಯೋಧರ ತ್ಯಾಗವೇ ದೇಶದ ಧೈರ್ಯ, ಸ್ವಾತಂತ್ರ್ಯ ಮತ್ತು ಹೆಮ್ಮೆ – ಸಿಎಂ ಡಿ.ಕೆ. ಶಿವಕುಮಾರ್

ಕರ್ನಾಟಕ ರಕ್ಷಣಾ ಕ್ಷೇತ್ರದ ಬೆನ್ನೆಲುಬು – ಯೋಧರ ಕುಟುಂಬಗಳ ಹಿತ ಕಾಯಲು ಸರ್ಕಾರ ಬದ್ಧ

“ನಮ್ಮ ವೀರ ಯೋಧರ ತ್ಯಾಗವೇ ದೇಶದ ಧೈರ್ಯ, ಸ್ವಾತಂತ್ರ್ಯ ಮತ್ತು ಹೆಮ್ಮೆಯಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಪರಂಪರೆ ಎಂದಿಗೂ ಶಾಶ್ವತ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ನೆಹರೂ ತಾರಾಲಯದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಇಂದು ಜುಲಾಯಿ 26ರಂದು ಭಾನುವಾರ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

“27 ವರ್ಷಗಳ ಹಿಂದೆ ಹಿಮಾಲಯದ ತಪ್ಪಲಿನಲ್ಲಿ ನಮ್ಮ ವೀರ ಯೋಧರು ಶತ್ರುಗಳನ್ನು ಹಿಮ್ಮೆಟ್ಟಿಸಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ 527 ಯೋಧರು ಹುತಾತ್ಮರಾಗಿದ್ದು, ಅವರಲ್ಲಿ ಕರ್ನಾಟಕದ 13 ವೀರ ಯೋಧರೂ ಸೇರಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲ ಯೋಧರಿಗೆ ಹೃದಯಪೂರ್ವಕ ನಮನ ಸಲ್ಲಿಸುತ್ತೇನೆ” ಎಂದು ಹೇಳಿದರು.

ಭಾರತ-ಪಾಕಿಸ್ತಾನ ಯುದ್ಧವಾಗಲಿ, ಭಾರತ-ಚೀನಾ ಸಂಘರ್ಷವಾಗಲಿ ಅಥವಾ ಗಡಿ ಅತಿಕ್ರಮಣದಂತಹ ಪರಿಸ್ಥಿತಿಯಾಗಲಿ, ಭಾರತೀಯ ಸೈನಿಕರು ಪ್ರತಿಯೊಂದು ಸಂದರ್ಭದಲ್ಲೂ ಕೆಚ್ಚೆದೆಯಿಂದ ದೇಶದ ಗಡಿಯನ್ನು ರಕ್ಷಿಸಲು ಸಿದ್ಧರಾಗಿದ್ದಾರೆ. ಯೋಧರ ತ್ಯಾಗದಿಂದಲೇ ದೇಶದ ಜನರು ತಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ ಎಂದರು.

ರಕ್ಷಣಾ ಕ್ಷೇತ್ರದಲ್ಲಿ ಕರ್ನಾಟಕದ ಮಹತ್ವದ ಕೊಡುಗೆ:

ಭಾರತದ ರಕ್ಷಣಾ ಪಡೆಗೆ ಕರ್ನಾಟಕ ಬೆನ್ನೆಲುಬಿನಂತಿದೆ. ಬೆಮೆಲ್, ಡಿಆರ್‌ಡಿಒ, ಇಸ್ರೋ ಸೇರಿದಂತೆ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದ ಹಲವು ಪ್ರಮುಖ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತದ ಮೊದಲ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದರು.

“ಯೋಧರು, ಯುವಕರು, ಮಹಿಳೆಯರು, ರೈತರು ಮತ್ತು ತೆರಿಗೆದಾರರು ನಮ್ಮ ಕೈಯ ಐದು ಬೆರಳುಗಳಿದ್ದಂತೆ. ಇವೆಲ್ಲವೂ ಒಗ್ಗೂಡಿದಾಗ ದೇಶ ಬಲಿಷ್ಠ ಮುಷ್ಠಿಯಾಗುತ್ತದೆ. ಕಾರ್ಗಿಲ್ ವಿಜಯ ದಿವಸವು ದೇಶದ ಯುವಕರಿಗೆ ಸ್ಫೂರ್ತಿಯ ದಿನ. ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಏನು ಬೇಕಾದರೂ ಮಾಡಲು ಸಿದ್ಧ ಎಂಬುದನ್ನು ನಮ್ಮ ಯೋಧರು ಸಾಬೀತುಪಡಿಸಿದ್ದಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಯಾವುದೇ ದುಷ್ಟ ಶಕ್ತಿಗಳಿಂದ ಭಾರತ ಮಾತೆಗೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಹೊಂದಬೇಕು ಎಂದು ಅವರು ಹೇಳಿದರು.

ಯೋಧರ ಕುಟುಂಬಗಳ ಹಿತಕ್ಕೆ ಸರ್ಕಾರ ಬದ್ಧ:

ರಾಜ್ಯದಲ್ಲಿ ಲಕ್ಷಾಂತರ ಯೋಧರ ಕುಟುಂಬಗಳು ನೆಲೆಸಿದ್ದು, ಅವರ ಹಿತಾಸಕ್ತಿಗಳನ್ನು ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಯೋಧರ ಕುಟುಂಬಗಳ ಯಾವುದೇ ಸಲಹೆ, ಬೇಡಿಕೆಗಳಿದ್ದರೂ ಸರ್ಕಾರಕ್ಕೆ ತಿಳಿಸುವಂತೆ ಮನವಿ ಮಾಡಿದ ಮುಖ್ಯಮಂತ್ರಿ, ಅವುಗಳನ್ನು ಸ್ವೀಕರಿಸಿ ಸೂಕ್ತವಾಗಿ ಸ್ಪಂದಿಸಲು ಸರ್ಕಾರ ಮುಕ್ತವಾಗಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

You may also like

News

ಕಾಜೂರು ಮಖಾಂ ಉರೂಸ್‌ಗೆ ದಿನಾಂಕ ನಿಗದಿ – 2027ರ ಮಾರ್ಚ್ 19ರಿಂದ 28ರವರೆಗೆ

ಸಯ್ಯಿದ್ ಕುಂಬೋಳ್ ತಂಙಳ್ ಅವರಿಂದ ದಿನಾಂಕ ಘೋಷಣೆ – ಉರೂಸ್ ಪೋಸ್ಟರ್ ಬಿಡುಗಡೆ ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ
News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.

You cannot copy content of this page