ಬಂಟ್ವಾಳ ವೃದ್ಧೆ ಬೆನೆಡಿಕ್ಟ್ ಕಾರ್ಲೋ ಬರ್ಬರ ಕೊಲೆ ಪ್ರಕರಣ – ಆರೈಕೆಗಿದ್ದ ಯುವತಿ ಏಲ್ಮಾ ಬರೆಟ್ಟೊ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ಇನ್ಸ್ ಪೆಕ್ಟರ್ T.D. ನಾಗರಾಜ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿ

ಚಿನ್ನಾಭರಣಕ್ಕಾಗಿ ಆರೈಕೆ ಮಾಡುತ್ತಿದ್ದ ವೃದ್ಧೆಯನ್ನೇ ಉಸಿರುಗಟ್ಟಿಸಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳಿಗೆ ಮಂಗಳೂರಿನ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.



ಘಟನೆಯ ಹಿನ್ನೆಲೆ:
ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿಯಾದ 73 ವರ್ಷ ಪ್ರಾಯದ ಬೆನಡಿಕ್ಟ್ ಕಾರ್ಲೋ ಎಂಬ ವೃದ್ಧೆಯ ಆರೈಕೆಗಾಗಿ ಬಂಟ್ವಾಳ ಅಮ್ಟಾಡಿ ನಿವಾಸಿ 23 ವರ್ಷ ಪ್ರಾಯದ ಏಲ್ಮಾ ಪ್ರೆಶ್ಚಿತ್ ಬರೆಟ್ಟೊ ಎಂಬಾಕೆಯನ್ನು ನಿಯೋಜಿಸಲಾಗಿತ್ತು. ವೃದ್ಧೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚುವ ದುರಾಸೆಯಿಂದ, ಏಲ್ಮಾ ತನ್ನ ಸ್ನೇಹಿತರಾದ ಬಂಟ್ವಾಳ ನರಿಕೊಂಬು ನಿವಾಸಿ 28 ವರ್ಷ ಪ್ರಾಯದ ಸತೀಶ ನಾಯಕ್ ಹಾಗೂ 31 ವರ್ಷ ಪ್ರಾಯದ ಚರಣ್ ಕುಮಾರ್ ಅವರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.
ಆರಂಭದಲ್ಲಿ ವೃದ್ಧೆಗೆ ನೀಡುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಲಾಗಿತ್ತು. ಆದರೆ ಆ ಪ್ರಯತ್ನ ವಿಫಲವಾದಾಗ, ದಿನಾಂಕ 25-01-2021 ರ ರಾತ್ರಿ ಆರೋಪಿಗಳು ವೃದ್ಧೆಯನ್ನು ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದರು. ಬಳಿಕ ಅವರ ಬಳಿಯಿದ್ದ ಸುಮಾರು ₹3 ಲಕ್ಷ ಮೌಲ್ಯದ 61.070 ಗ್ರಾಂ ತೂಕದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು.


ತನಿಖೆ ಮತ್ತು ನ್ಯಾಯಾಲಯದ ತೀರ್ಪು:
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಅ.ಕ್ರ. 22/2021, ಕಲಂ: 302, 392, 120(ಬಿ), 201 ಹಾಗೂ 34 ಐಪಿಸಿ ರಂತೆ ದಾಖಲಾಗಿತ್ತು.
* ಪೊಲೀಸ್ ತನಿಖೆ: ಆಗಿನ ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಪ್ರಸನ್ನ ಎಮ್.ಎಸ್. ರವರು ಆರೋಪಿಗಳನ್ನು ಬಂಧಿಸಿದ್ದರೆ, ಆಗಿನ ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
* ಶಿಕ್ಷೆಯ ವಿವರ: ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ದಿನಾಂಕ 28-07-2026 ರಂದು ಮಾನ್ಯ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಮೂವರೂ ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ರವರು ಯಶಸ್ವಿಯಾಗಿ ವಾದ ಮಂಡಿಸಿದ್ದರು.



