ಮಂಗಳೂರು ಧರ್ಮಕ್ಷೇತ್ರದ 2026–2028ರ ಧರ್ಮಕ್ಷೇತ್ರದ ಪಾಲನಾ ಪರಿಷತ್ ರಚನೆ
ಜೀಟಾ ಉಷಾ ಫೆರ್ನಾಂಡಿಸ್ ಕಾರ್ಯದರ್ಶಿ, ಆಲ್ವಿನ್ ಡಿಸೋಜ ಪಾನೀರ್ ಹಾಗೂ ಡೆನ್ನಿಸ್ ಡಿಸಿಲ್ವ ಕುಲ್ಶೇಕರ ಅವರು ಕ್ಯಾಥೊಲಿಕ್ ಕೌನ್ಸಿಲ್ ಆಫ್ ಕರ್ನಾಟಕ (CCK) ಪ್ರತಿನಿಧಿಗಳಾಗಿ ಆಯ್ಕೆ

‘ಪಾಸ್ಟೋರಲ್ ಪ್ಲ್ಯಾನ್ 3.0′ ಅನುಷ್ಠಾನಕ್ಕೆ ಬಿಷಪ್ ಸಲ್ಡಾನ್ಹಾ ಕರೆ

ಮಂಗಳೂರು ಧರ್ಮಕ್ಷೇತ್ರದ 2026–2028ನೇ ಸಾಲಿನ ಧರ್ಮಕ್ಷೇತ್ರದ ಪಾಲನಾ ಪರಿಷತ್ (Diocesan Pastoral Parishad – DPP) ನೂತನ ಸಮಿತಿಯ ಉದ್ಘಾಟನಾ ಸಭೆಯು ಜುಲಾಯಿ 30ರಂದು ಗುರುವಾರ ಕೊಡ್ಯಾಲ್‌ಬೈಲಿನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಹೊಸ ತ್ರೈವಾರ್ಷಿಕ ಅವಧಿಯ ಧ್ಯೇಯ-ದೃಷ್ಟಿಕೋನವನ್ನು ಮಂಡಿಸಿದರು. ಬೆಳಿಗ್ಗೆ 9.30ಕ್ಕೆ ಎಪಿಸ್ಕೋಪಲ್ ಸಿಟಿ ವಲಯದ ಪ್ರತಿನಿಧಿಗಳು ನಡೆಸಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಧರ್ಮಾಧ್ಯಕ್ಷರು ಸಭಿಕರನ್ನು ಸ್ವಾಗತಿಸಿ, ನೂತನ ಪರಿಷತ್ ಸದಸ್ಯರನ್ನು ಪರಿಚಯಿಸಿದರು.
ಧರ್ಮಕ್ಷೇತ್ರದ ಶ್ರೇಷ್ಠ ಗುರು Msgr. ಮ್ಯಾಕ್ಸಿಮ್ ಎಲ್. ನೊರೊನ್ಹಾ ಕಳೆದ ಅವಧಿಯ ಕಾರ್ಯಚಟುವಟಿಕೆಗಳ ವರದಿ ಹಾಗೂ ಮುಂದಿನ ಪಾಸ್ಟೋರಲ್ ಯೋಜನೆಗಳನ್ನು ಮಂಡಿಸಿದರು. ಬಳಿಕ 2026–2028ನೇ ಅವಧಿಯ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಸಲಾಯಿತು.


ಜೀಟಾ ಉಷಾ ಫೆರ್ನಾಂಡಿಸ್ ಕಾರ್ಯದರ್ಶಿ:
ಚುನಾವಣೆಯಲ್ಲಿ ಸಿಟಿ ವಲಯದ ನೀರ್ಮಾರ್ಗ ಚರ್ಚ್ ನ ಜೀಟಾ ಉಷಾ ಫೆರ್ನಾಂಡಿಸ್ ಅವರು ಧರ್ಮಕ್ಷೇತ್ರದ ಪಾಲನಾ ಪರಿಷತ್ ಇದರ ಕಾರ್ಯದರ್ಶಿಯಾಗಿ ಬಹುಮತದಿಂದ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ (Executive Committee):
- ಪುರುಷ ಪ್ರತಿನಿಧಿ: ಸಂತೋಷ್ ಡಿಕೋಸ್ಟಾ (ಕೆಲರಾಯಿ ಚರ್ಚ್ ಸಿಟಿ ವಲಯ)
- ಮಹಿಳಾ ಪ್ರತಿನಿಧಿ: ಡಾ. ಫ್ರೀಡಾ ಫ್ಲಾವಿಯಾ ಡಿಸೋಜ (ಬಳ್ಕುಂಜೆ ಚರ್ಚ್, ಕಿರೆಂ ವಲಯ)
ಕ್ಯಾಥೊಲಿಕ್ ಕೌನ್ಸಿಲ್ ಆಫ್ ಇಂಡಿಯಾ (CCI) ಪ್ರತಿನಿಧಿಗಳು:
- ಸಂತೋಷ್ ಡಿಸೋಜ
- ಲಿನೆಟ್ ಫೆರ್ನಾಂಡಿಸ್
ಕ್ಯಾಥೊಲಿಕ್ ಕೌನ್ಸಿಲ್ ಆಫ್ ಕರ್ನಾಟಕ (CCK) ಪ್ರತಿನಿಧಿಗಳು:
- ಅಲ್ವಿನ್ ಜೆರೊಮ್ ಡಿಸೋಜ ಪಾನೀರ್
- ಡೆನಿಸ್ ಡಿಸಿಲ್ವಾ ಕುಲ್ಶೇಕರ
‘ಪಾಸ್ಟೋರಲ್ ಪ್ಲಾನ್ 3.0’ ಅನುಷ್ಠಾನಕ್ಕೆ ಒತ್ತು:
ಚುನಾವಣೆಯ ಬಳಿಕ ಸಿಬಿಸಿಐ ಲಿಟರ್ಜಿ ಆಯೋಗದ ಪ್ರತಿನಿಧಿ ವಂದನೀಯ ಡಾ. ರುಡಾಲ್ಫ್ ರಾಜ್ ಪಿಂಟೊ, ಓಸಿಡಿ, “2026–2028ರ ಸಿನೋದ್ ಅನುಷ್ಠಾನದ ಮಾರ್ಗಸೂಚಿಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಧರ್ಮಕ್ಷೇತ್ರ, ವಲಯ ಹಾಗೂ ಚರ್ಚ್ ಹಂತದಲ್ಲಿ ಸಿನೋಡಲ್ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಮಾರ್ಗಸೂಚಿಗಳನ್ನು ಅವರು ವಿವರಿಸಿದರು.


ಸಿನೋಡಲ್ ಚರ್ಚ್ ನಿರ್ಮಾಣಕ್ಕೆ ಬಿಷಪ್ ಕರೆ:
ಅಧ್ಯಕ್ಷೀಯ ಭಾಷಣದಲ್ಲಿ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನೂತನ ಕಾರ್ಯದರ್ಶಿ ಹಾಗೂ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಧರ್ಮಕ್ಷೇತ್ರದಲ್ಲಿ ‘ಪಾಸ್ಟೋರಲ್ ಪ್ಲಾನ್ 3.0’ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಧರ್ಮಕ್ಷೇತ್ರ, ವಲಯ ಮತ್ತು ಚರ್ಚ್ ಹಂತದಲ್ಲಿ ವಿವಿಧ ಆಯೋಗಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಅವರು ಕರೆ ನೀಡಿದರು.



ಸಿನೋಡಲ್ ಚರ್ಚ್ ನಿರ್ಮಾಣದ ದೃಷ್ಟಿಯಿಂದ ದೇವರ ಕೃಪೆಗೆ ಆದ್ಯತೆ ನೀಡಿ, ಸಹಭಾಗಿತ್ವ, ಸಮಾಲೋಚನೆ ಮತ್ತು ಸಹಯಾತ್ರೆಯ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ ಅವರು, ಧರ್ಮಕ್ಷೇತ್ರದ ಎಲ್ಲಾ ಆಯೋಗಗಳು ಹಾಗೂ ವಿಶ್ವಾಸಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಜೀವಂತ ಕ್ರೈಸ್ತ ಸಮುದಾಯವನ್ನು ನಿರ್ಮಿಸಬೇಕೆಂದು ಹೇಳಿದರು.
ಸಭೆಯ ಕೊನೆಯಲ್ಲಿ ನೂತನ ಕಾರ್ಯದರ್ಶಿ ಜೀಟಾ ಉಷಾ ಫೆರ್ನಾಂಡಿಸ್ ವಂದನಾರ್ಪಣೆ ಸಲ್ಲಿಸಿದರು. ಬಳಿಕ ಧರ್ಮಾಧ್ಯಕ್ಷರು ಸಹಭೋಜನಕ್ಕೆ ಆಶೀರ್ವಾದ ನೀಡಿದರು. ಕಾರ್ಯಕ್ರಮವನ್ನು ವಂದನೀಯ ಫಾದರ್ ರೋಷನ್ ಡಿಕುನ್ಹಾ ನಿರೂಪಿಸಿದರು. ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ವಲಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ ಮತ್ತು ಫೋಟೊ
ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್
ನಿರ್ದೇಶಕರು, ಕೆನರಾ ಕಮ್ಯುನಿಕೇಷನ್ ಸೆಂಟರ್, ಮಂಗಳೂರು ಧರ್ಮಕ್ಷೇತ್ರ.



