ಮಿಜಾರಿನಲ್ಲಿ ಸಿಲಿಂಡರ್ ಸ್ಫೋಟ – ಒಂದೇ ಕುಟುಂಬದ ಮೂವರಿಗೆ ಸುಟ್ಟ ಗಾಯ
ಮೂಡುಬಿದಿರೆಯ ಮಿಜಾರ್ ಸಮೀಪ ಬಾಡಿಗೆ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಸುಟ್ಟ ಗಾಯಗೊಂಡ ಘಟನೆ ಇಂದು ಆಗಸ್ಟ್ 11ರಂದು ಮಂಗಳವಾರ ಬೆಳಗ್ಗೆ ನಡೆದಿದೆ. ಮಿಜಾರ್ ಸಮೀಪ ಬೆಳಗ್ಗೆ ಸುಮಾರು 6.30ರ ವೇಳೆಗೆ ಈ ಘಟನೆ ಸಂಭವಿಸಿದೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 31 ವರ್ಷ ಪ್ರಾಯದ ಶಿವರಾಮ, ಅವರ ಪತ್ನಿ 25 ವರ್ಷ ಪ್ರಾಯದ ಗಂಗಾ ಹಾಗೂ ಅವರ ಪುತ್ರ 6 ವರ್ಷ ಪ್ರಾಯದ ಆದರ್ಶ್ ಸಿಲಿಂಡರ್ ಸ್ಫೋಟದಿಂದ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.

ಶಿವರಾಮ ಅವರು ಆಳ್ವಾಸ್ ಕಾಲೇಜಿನಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದು, ಸ್ಫೋಟದಲ್ಲಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರ ಪತ್ನಿ ಹಾಗೂ ಪುತ್ರನಿಗೂ ಸುಟ್ಟ ಗಾಯಗಳಾಗಿವೆ. ಸಿಲಿಂಡರ್ ಸ್ಫೋಟದ ಪರಿಣಾಮ ಮನೆಯೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ.

ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪೊಲೀಸರು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.




