ಹನೂರು ಶೂಟೌಟ್ ಪ್ರಕರಣ – SIT ತನಿಖೆ ಹಾಗೂ ₹1 ಕೋಟಿ ಪರಿಹಾರಕ್ಕೆ MLC ಐವನ್ ಡಿಸೋಜ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಮಾಯಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಘಟನೆಯ ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಆಗಸ್ಟ್ 18ರಂದು ಮಂಗಳವಾರ ಮನವಿ ಸಲ್ಲಿಸಿದರು.







ಅರಣ್ಯ ಪ್ರದೇಶಕ್ಕೆ ದನಕರು ಹಾಗೂ ಮೇಕೆಗಳನ್ನು ಹುಡುಕಲು ಹೋಗಿ, ಸುಸ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ನಾಲ್ವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಮೃತಪಟ್ಟವರು ಬೇಟೆಯಾಡಲು ತೆರಳಿದ್ದರೆಂಬ ಮಾತನ್ನು ಸ್ಥಳೀಯರು ಹಾಗೂ ಕ್ರೈಸ್ತ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.





ಪ್ರಮುಖ ಬೇಡಿಕೆಗಳು:
* SIT ತನಿಖೆಗೆ ಆಗ್ರಹ: ಘಟನೆಯ ಹಿಂದೆ ಅಡಗಿರುವ ಸತ್ಯಾಂಶ ಹೊರಬರಲು ಕೇವಲ SIT ರಚನೆಯಿಂದ ಮಾತ್ರ ಸಾಧ್ಯ, ಹೀಗಾಗಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು.
* ₹1 ಕೋಟಿ ಪರಿಹಾರ: ಮೃತರ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದಿಂದ ಕನಿಷ್ಠ ₹1 ಕೋಟಿ ಪರಿಹಾರ ಧನ ನೀಡಬೇಕು.
* ಉದ್ಯೋಗ ಮತ್ತು ಶಿಕ್ಷಣ: ಸಂತ್ರಸ್ತ ಕುಟುಂಬದ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಹಾಗೂ ಮೃತರ ಸಣ್ಣ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
* ಶಾಶ್ವತ ನೆರವು: ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸುರಕ್ಷತೆ ಹಾಗೂ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕು.

ಈ ಕುರಿತು ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನೂ ಭೇಟಿ ಮಾಡಿದ ಅವರು ಮನವಿ ಪತ್ರವನ್ನು ಹಸ್ತಾಂತರಿಸಿದರು. ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ಘಟನೆಯ ಕುರಿತು ಪರಿಶೀಲಿಸಿ ಸೂಕ್ತ ಹಾಗೂ ನ್ಯಾಯಯುತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.





