ನೇಪಾಳದ ದುಃಖದಲ್ಲಿ ಮಂಗಳೂರು ಧರ್ಮಕ್ಷೇತ್ರವೂ ಭಾಗಿ – ವಿಶೇಷ ಪ್ರಾರ್ಥನೆಗೆ ಬಿಷಪ್ ಸಲ್ಡಾನ್ಹಾ ಕರೆ
ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಫಾದರ್ ರೂಪೇಶ್ ಮಾಡ್ತಾ ಹಾಗೂ ರೋಯ್ ಕ್ಯಾಸ್ತೆಲಿನೊ ಜಂಟಿ ಪತ್ರಿಕಾ ಪ್ರಕಟನೆ

ಮಂಗಳೂರು: ನೇಪಾಳದ ವಿವಿಧ ಭಾಗಗಳಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಅಪಾರ ಜೀವಹಾನಿ, ಆಸ್ತಿಪಾಸ್ತಿ ನಾಶ ಮತ್ತು ಮಾನವೀಯ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಧರ್ಮಕ್ಷೇತ್ರವು ತೀವ್ರ ದುಃಖ ಹಾಗೂ ಆಳವಾದ ಸಹಾನುಭೂತಿ ವ್ಯಕ್ತಪಡಿಸಿದೆ. ದುರಂತದಿಂದ ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬರ ನೋವಿನಲ್ಲಿ ಮಂಗಳೂರು ಧರ್ಮಕ್ಷೇತ್ರವು ಭಾಗಿಯಾಗಿ ನಿಲ್ಲಲಿದೆ ಎಂದು ತಿಳಿಸಿದೆ.

ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಮಾರ್ಗದರ್ಶನದಲ್ಲಿ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂದನೀಯ ಫಾದರ್ ರೂಪೇಶ್ ಅಶೋಕ್ ಮಾಡ್ತಾ ಹಾಗೂ ರೋಯ್ ಕ್ಯಾಸ್ತೆಲಿನೊ ಅವರು ಜಂಟಿ ಪತ್ರಿಕಾ ಪ್ರಕಟಣೆ ಆಗಸ್ಟ್ 28ರಂದು ಶುಕ್ರವಾರ ಬಿಡುಗಡೆ ಮಾಡಿ ನೇಪಾಳದ ದುರಂತ ಸಂತ್ರಸ್ತರೊಂದಿಗೆ ತಮ್ಮ ಪ್ರಾರ್ಥನಾಪೂರ್ವಕ ಐಕ್ಯತೆ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.


“ಪ್ರಕೃತಿ ವಿಕೋಪಗಳು ಧರ್ಮ, ಜಾತಿ, ಭಾಷೆ ಅಥವಾ ರಾಷ್ಟ್ರೀಯತೆಯ ಭೇದಭಾವ ಮಾಡುವುದಿಲ್ಲ. ಆದ್ದರಿಂದ ನಮ್ಮ ಮಾನವೀಯ ಕರುಣೆ ಮತ್ತು ಐಕ್ಯತೆಯೂ ಯಾವುದೇ ಗಡಿಗಳಿಗೆ ಸೀಮಿತವಾಗಿರಬಾರದು” ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಮಂಗಳೂರು ಧರ್ಮಕ್ಷೇತ್ರವು ಹೃತ್ಪೂರ್ವಕ ಸಂತಾಪ ಸೂಚಿಸಿದ್ದು, ನಾಪತ್ತೆಯಾಗಿರುವವರು ಶೀಘ್ರವಾಗಿ ಪತ್ತೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದೆ.


ಅಪಾಯಕಾರಿ ಹಾಗೂ ದುರ್ಗಮ ಹವಾಮಾನ ಪರಿಸ್ಥಿತಿಗಳ ನಡುವೆಯೂ ಜೀವ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿರುವ ರಕ್ಷಣಾ ಪಡೆಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ನಿಸ್ವಾರ್ಥ ಸೇವೆಯನ್ನು ಧರ್ಮಕ್ಷೇತ್ರವು ಶ್ಲಾಘಿಸಿದೆ.
ದುರಂತದಲ್ಲಿ ಮೃತಪಟ್ಟವರ ಆತ್ಮಗಳಿಗೆ ಶಾಂತಿ ದೊರಕಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಹಾಗೂ ಮನೆ-ಮಠ ಮತ್ತು ಜೀವನೋಪಾಯ ಕಳೆದುಕೊಂಡ ಜನರಿಗೆ ಹೊಸ ಬದುಕನ್ನು ಪುನರ್ನಿರ್ಮಿಸಿಕೊಳ್ಳುವ ಧೈರ್ಯ ಮತ್ತು ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವಂತೆ ಸಾರ್ವಜನಿಕರು ಹಾಗೂ ವಿಶ್ವಾಸಿಗಳಿಗೆ ಮಂಗಳೂರು ಧರ್ಮಕ್ಷೇತ್ರ ಮನವಿ ಮಾಡಿದೆ.

ನೇಪಾಳದ ಜನರು ಈ ಸಂಕಷ್ಟದ ಸಂದರ್ಭದಲ್ಲಿ ಒಂಟಿಯಲ್ಲ. ಅವರ ನೋವು ಮತ್ತು ದುಃಖದಲ್ಲಿ ಇಡೀ ಮಾನವಕುಲವೇ ಪಾಲ್ಗೊಂಡಿದೆ ಎಂಬ ಸಂದೇಶವನ್ನು ಮಂಗಳೂರು ಧರ್ಮಕ್ಷೇತ್ರವು ತನ್ನ ಜಂಟಿ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.
ಮಾನವೀಯತೆ ಗಡಿಗಳನ್ನು ಮೀರಬೇಕು; ಸಂಕಷ್ಟದಲ್ಲಿರುವವರೊಂದಿಗೆ ಪ್ರಾರ್ಥನೆ, ಕರುಣೆ ಮತ್ತು ಐಕ್ಯತೆಯ ಮೂಲಕ ನಿಲ್ಲುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಧರ್ಮಕ್ಷೇತ್ರ ತಿಳಿಸಿದೆ.



