ಸಮಾಜಸೇವೆಯ ಹಾದಿಗೆ ರಾಷ್ಟ್ರೀಯ ಕಿರೀಟ – ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’
ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಪ್ರತಿಷ್ಠಿತ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.


ಆರ್ಯಭಟ ಎಜುಕೇಶನಲ್ ಟ್ರಸ್ಟ್ ಹಾಗೂ ಕರ್ನಾಟಕ ಚೇತನ ಫೌಂಡೇಷನ್, ಧಾರವಾಡ ಇವರ ವತಿಯಿಂದ ಸೆಪ್ಟೆಂಬರ್ 6ರಂದು ಬೆಂಗಳೂರಿನ ಎನ್.ಆರ್. ಕಾಲೋನಿಯ ಬಿ.ಎಂ. ಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ‘ಸಾಧಕರ ಸಮಾಗಮ’ ಕಾರ್ಯಕ್ರಮದಲ್ಲಿ ಅವರಿಗೆ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಶಿಕ್ಷಕ, ಸಮಾಜಸೇವಕ ಹಾಗೂ ಗಂಧದ ಗುಡಿ ಕನ್ನಡ ಸಂಘದ ಗೌರವಾಧ್ಯಕ್ಷ ಬಿ. ರಂಗಸ್ವಾಮಿ ಉದ್ಘಾಟಿಸಲಿದ್ದು, ನವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಎಂ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ.


ಈ ಸಮಾರಂಭದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಗಣ್ಯರಿಗೆ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ಸಾಧಕರಿಗೆ ಡಾ. ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಕರ್ನಾಟಕ ಚೇತನ ಫೌಂಡೇಷನ್ ಅಧ್ಯಕ್ಷ ಹಾಗೂ ಜನತಾ ಪ್ರಭ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಮಾಡಲಗೇರಿ ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರಿಗೆ ದೊರೆಯುತ್ತಿರುವ ಈ ರಾಷ್ಟ್ರೀಯ ಗೌರವವು ಅವರ ಸಮಾಜಮುಖಿ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗೆ ಸಂದ ಮಹತ್ವದ ಮಾನ್ಯತೆಯಾಗಿದೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಪ್ರೇರಣೆಯಾಗಲಿ ಎಂದು ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್. ಶಶಿಧರ್ ನಾಯ್ಕ್, ಅಖಿಲ ಕರ್ನಾಟಕ ಕೋಟೆಗಾರ್ ಸಂಘದ ಅಧ್ಯಕ್ಷ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಸೇರಿದಂತೆ ಅನೇಕ ಗಣ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.




