ಪ್ರಖ್ಯಾತ ಗಾಯಕ ರೋನಿ ಕ್ರಾಸ್ತಾ ಅವರ ಪುತ್ರಿ ರಿಶಾಲ್ ಮೆಲ್ಬಾ ಅವರಿಗೆ ಕೊಂಕಣಿ ಗಾಯನದಲ್ಲಿ ಹ್ಯಾಟ್ರಿಕ್ ಕಿರೀಟ!
ಸತತ 3 ವರ್ಷ ಪ್ರಥಮ ಸ್ಥಾನ – ‘ಇಂಡಿಯನ್ ಐಡಲ್’ ವೇದಿಕೆ ಏರುವ ಕನಸು

ಪ್ರಖ್ಯಾತ ಗಾಯಕ ಕುಲ್ಶೇಕರದ ರೋನಿ ಕ್ರಾಸ್ತಾ ಅವರ ಪುತ್ರಿ ರಿಶಾಲ್ ಮೆಲ್ಬಾ ಕ್ರಾಸ್ತಾ ಅವರು ಮಂಗಳೂರಿನ ಕೊಂಕಣಿ ನಾಟಕ ಸಭಾ (ರಿ.) ಆಯೋಜಿಸಿದ್ದ ಕೊಂಕಣಿ ಗಾಯನ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.



2024, 2025 ಹಾಗೂ 2026ನೇ ಸಾಲಿನಲ್ಲಿ 15ರಿಂದ 45 ವರ್ಷ ವಯೋಮಾನದ ವಿಭಾಗದಲ್ಲಿ ಸತತವಾಗಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಿಶಾಲ್ ಮೆಲ್ಬಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದೇ ವೇಳೆ ದ್ವಂದ್ವ ಗಾಯನ (Duet Singing) ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.



ತಮ್ಮ ಸಂಗೀತದ ಪಯಣದಲ್ಲಿ ಈ ಸಾಧನೆಗೆ ಸಹಕರಿಸಿದ ಎಲ್ಲಾ ತೀರ್ಪುಗಾರರಿಗೆ ರಿಶಾಲ್ ಕೃತಜ್ಞತೆ ಸಲ್ಲಿಸಿದ್ದಾರೆ. ತೀರ್ಪುಗಾರರಿಂದ ದೊರೆತ ಅಮೂಲ್ಯ ಸಲಹೆ, ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ತಮ್ಮ ಗಾಯನದಲ್ಲಿ ನಿರಂತರ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರೊಂದಿಗೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಆತ್ಮೀಯ ಸ್ನೇಹಿತರ ಸಹಕಾರ ಮತ್ತು ಪ್ರೋತ್ಸಾಹವೂ ತಮ್ಮ ಈ ಹಂತದ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.
ತಂದೆ ರೋನಿ ಕ್ರಾಸ್ತಾ ಅವರು ತಮ್ಮ ಸಂಗೀತದ ಮೊದಲ ಗುರು, ಕೋಚ್ ಹಾಗೂ ಮಾರ್ಗದರ್ಶಕ ಎಂದು ಹೇಳಿರುವ ರಿಶಾಲ್, ಸಂಗೀತ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆಗೆ ತಂದೆಯ ಮಾರ್ಗದರ್ಶನ ಮತ್ತು ಪರಿಶ್ರಮ ಬಹುಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ‘ಇಂಡಿಯನ್ ಐಡಲ್’ ಹಾಗೂ ‘ಸಾ ರೇ ಗಾ ಮಾ ಪಾ’ ಸೇರಿದಂತೆ ಜನಪ್ರಿಯ ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದು ತಮ್ಮ ಮಹತ್ವಾಕಾಂಕ್ಷೆಯಾಗಿದೆ. ವಿದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನೀಡಬೇಕು ಎಂಬುದು ತಮ್ಮ ಕನಸು ಎಂದು ಅವರು ಹೇಳಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹದಲ್ಲಿರುವ ರಿಶಾಲ್ ಮೆಲ್ಬಾ, ತಮ್ಮ ಕನಸುಗಳನ್ನು ನನಸಾಗಿಸಲು ಎಲ್ಲರ ಬೆಂಬಲ, ಆಶೀರ್ವಾದ, ಪ್ರೋತ್ಸಾಹ ಹಾಗೂ ಶುಭಹಾರೈಕೆಗಳನ್ನು ಕೋರಿದ್ದಾರೆ.



