UPI ಶುಲ್ಕ ಪ್ರಸ್ತಾವನೆ ಕೈಬಿಡಲಿ – ಪದ್ಮರಾಜ್ ಪೂಜಾರಿ
ಮಂಗಳೂರು: UPI ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸಿ, ಡಿಜಿಟಲ್ ಪಾವತಿ ವ್ಯವಸ್ಥೆಗೆ ಯಾವುದೇ ಹೊರೆ ಬೀಳದಂತೆ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಆಗ್ರಹಿಸಿದ್ದಾರೆ.
‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಅನುಗುಣವಾಗಿ ದೇಶದಲ್ಲಿ ಉಚಿತ ಹಾಗೂ ಸರಳ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಿದ ಬಳಿಕ ಇದೀಗ ಶುಲ್ಕ ವಿಧಿಸುವ ಕ್ರಮ ಕೈಗೊಳ್ಳುವುದು ನೀತಿಯಲ್ಲಿನ ವಿರೋಧಾಭಾಸಕ್ಕೆ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

UPI ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಗ್ರಾಹಕರಿಂದ ನೇರವಾಗಿ ಪಡೆಯದಿದ್ದರೂ, ವ್ಯಾಪಾರಿಗಳ ಮೇಲಿನ ಹೆಚ್ಚುವರಿ ವೆಚ್ಚವು ಅಂತಿಮವಾಗಿ ಸರಕು ಮತ್ತು ಸೇವೆಗಳ ಬೆಲೆಗಳ ಮೂಲಕ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇಂತಹ ಶುಲ್ಕ ವ್ಯವಸ್ಥೆಯಿಂದ ಸಣ್ಣ ವ್ಯಾಪಾರಿಗಳಲ್ಲಿ ಗೊಂದಲ ಉಂಟಾಗಿ, ಕೆಲವರು ಡಿಜಿಟಲ್ ಪಾವತಿಯ ಬದಲಿಗೆ ನಗದು ವಹಿವಾಟಿನತ್ತ ಮರಳುವ ಸಾಧ್ಯತೆಯಿದೆ. ಇದರಿಂದ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಹಿನ್ನಡೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.
UPI ನಂತಹ ವೇಗದ, ಸರಳ ಹಾಗೂ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬದಲು ಹೆಚ್ಚುವರಿ ವೆಚ್ಚದ ಹೊರೆ ಹೇರುವುದು ಸೂಕ್ತವಲ್ಲ. ಜನಸಾಮಾನ್ಯರು ಹಾಗೂ ಸಣ್ಣ ವ್ಯಾಪಾರಿಗಳ ಹಿತದೃಷ್ಟಿಯಿಂದ UPI ವಹಿವಾಟಿನ ಮೇಲಿನ ಯಾವುದೇ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಪದ್ಮರಾಜ್ ಆರ್. ಪೂಜಾರಿ ಒತ್ತಾಯಿಸಿದ್ದಾರೆ.




