ಬಂಟ್ವಾಳದ ಅಬ್ದುಲ್ ರಹಮಾನ್ ಕೊಲೆ ಪ್ರಕರಣ – ಭರತ್ ಕುಮ್ದೇಲ್ ಸೇರಿ 8 ಮಂದಿಗೆ ಕೋಕಾ ಕೋರ್ಟ್ ಜಾಮೀನು
ಪ್ರಖ್ಯಾತ ಹಾಗೂ ಪ್ರತಿಷ್ಠಿತ ನ್ಯಾಯವಾದಿ ಮಹೇಶ್ ಕಜೆ ಅವರ ಪರಿಣಾಮಕಾರಿ ವಾದ

ಬಂಟ್ವಾಳದ ಅಬ್ದುಲ್ ರಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮ್ದೇಲ್ ಸೇರಿದಂತೆ ಎಂಟು ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳಾಗಿ ಸೇರಿಸಿ, ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ಹಾಗೂ ವಾದ-ಪ್ರತಿವಾದಗಳು ನಡೆದವು.

ಭರತ್ ಕುಮ್ದೇಲ್ ಸೇರಿದಂತೆ ಎಂಟು ಮಂದಿಯ ಪರವಾಗಿ ಪುತ್ತೂರು ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ಹಾಗೂ ಪ್ರತಿಷ್ಠಿತ ನ್ಯಾಯವಾದಿಯವರಾದ ಮಹೇಶ್ ಕಜೆ ಅವರು ಸುದೀರ್ಘವಾಗಿ ವಾದ ಮಂಡಿಸಿದರು. ಆರೋಪಿಗಳ ವಿರುದ್ಧದ ಪ್ರಕರಣದಲ್ಲಿ ಅವರ ನೇರ ಪಾತ್ರ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುವುದಿಲ್ಲ ಹಾಗೂ ತನಿಖೆಯಲ್ಲಿನ ಅಂಶಗಳನ್ನು ಪರಿಗಣಿಸುವಂತೆ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಭರತ್ ಕುಮ್ದೇಲ್ ಸೇರಿದಂತೆ ಎಂಟು ಮಂದಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ಅವರೊಂದಿಗೆ ನ್ಯಾಯವಾದಿಗಳಾದ ರಾಘವೇಂದ್ರ ಮೈಸೂರು ಹಾಗೂ ಪ್ರಸಾದ್ ಕುಮಾರ್ ಬಿ.ಸಿ. ರೋಡ್ ಅವರು ವಕಾಲತ್ತು ವಹಿಸಿದ್ದರು.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್, ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ನಿರಪರಾಧಿಗಳನ್ನು ಬಂಧಿಸಿ ಹಿಂದೂ ಸಂಘಟನೆಯ ಪ್ರಮುಖರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಕಾ ನ್ಯಾಯಾಲಯದ ಜಾಮೀನು ಆದೇಶವು ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.



