ಬಂಟ್ವಾಳ ಲೋಕ ಅದಾಲತ್ – 12,400 ಪ್ರಕರಣ ಇತ್ಯರ್ಥ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಂಟ್ವಾಳದ ಬಿ.ಸಿ. ರೋಡ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 13,223 ಪ್ರಕರಣಗಳನ್ನು ಪರಿಗಣಿಸಿ, 12,400 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಮೂಲಕ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೆ ರಾಜಿ ಹಾಗೂ ಸೌಹಾರ್ದಯುತ ಪರಿಹಾರದ ದಾರಿ ತೆರೆದಿದೆ.

ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಅನಿಲ್ ಪ್ರಕಾಶ್ ಎಂ.ಪಿ., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ.ಎಸ್. ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆಯವರಾದ ಸೌಂದರ್ಯ ಎಂ. ಅವರ ಮಾರ್ಗದರ್ಶನದಲ್ಲಿ ಲೋಕ ಅದಾಲತ್ ನಡೆಯಿತು.
ಸಿವಿಲ್ ಪ್ರಕರಣಗಳ ವಿಭಾಗದಲ್ಲಿ 90 ಪ್ರಕರಣಗಳನ್ನು ಪರಿಗಣಿಸಲಾಗಿದ್ದು, 47 ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಲ್ಲಿ ₹49,37,035 ಮೊತ್ತದ ಇತ್ಯರ್ಥ ದಾಖಲಾಗಿದೆ.
ಕ್ರಿಮಿನಲ್ ಪ್ರಕರಣಗಳ ಪೈಕಿ 302 ಪ್ರಕರಣಗಳನ್ನು ಪರಿಗಣಿಸಿ, 194 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹27,18,356 ಮೊತ್ತದ ಇತ್ಯರ್ಥವಾಗಿದೆ.

ದಾವಾ ಪೂರ್ವ (ಪ್ರೀ-ಲಿಟಿಗೇಶನ್) ಪ್ರಕರಣಗಳಲ್ಲಿ 12,831 ಪ್ರಕರಣಗಳನ್ನು ಪರಿಗಣಿಸಲಾಗಿದ್ದು, 12,159 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ವಿಭಾಗದಲ್ಲಿ ₹1,66,01,029 ಮೊತ್ತದ ಇತ್ಯರ್ಥ ದಾಖಲಾಗಿದೆ.
ಒಟ್ಟಾರೆ ಮೂರು ವಿಭಾಗಗಳಲ್ಲಿ 13,223 ಪ್ರಕರಣಗಳ ಪೈಕಿ 12,400 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹2,42,56,420 ಮೊತ್ತದ ವಿವಾದಗಳಿಗೆ ಪರಿಹಾರ ದೊರೆತಿದೆ.

ಲೋಕ ಅದಾಲತ್ ಮೂಲಕ ನ್ಯಾಯಾಲಯದ ದೀರ್ಘ ಪ್ರಕ್ರಿಯೆ, ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಿಕೊಂಡು ಪರಸ್ಪರ ಒಪ್ಪಿಗೆಯ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಪರಿಹರಿಸಿಕೊಳ್ಳಲು ಅರ್ಹರು ಮುಂದಿನ ಲೋಕ ಅದಾಲತ್‌ಗಳ ಸದುಪಯೋಗ ಪಡೆಯುವಂತೆ ಕಾನೂನು ಸೇವಾ ಸಮಿತಿ ತಿಳಿಸಿದೆ.




