October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿಯಲ್ಲಿರುವ ಭಾರತೀಯರಿಗೆ ತುರ್ತು ಎಚ್ಚರಿಕೆ

‘ಸುರಕ್ಷಿತ ಸ್ಥಳದಲ್ಲಿರಿ, ದೃಢೀಕರಿಸದ ವಿಡಿಯೋ–ಸುದ್ದಿ ಹಂಚಿಕೊಳ್ಳಬೇಡಿ’ ಎಂದು ರಾಯಭಾರ ಕಚೇರಿ ಸೂಚನೆ

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಯೆಮೆನ್‌ನ ಹೌತಿ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ವರದಿಯಾಗಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ಪ್ರಜೆಗಳಿಗೆ ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ತುರ್ತು ಮುನ್ನೆಚ್ಚರಿಕೆ ನೀಡಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೌದಿ ಅರೇಬಿಯಾದಲ್ಲಿರುವ ಭಾರತೀಯರು ತೀವ್ರ ಜಾಗರೂಕರಾಗಿರಬೇಕು ಹಾಗೂ ಅಗತ್ಯವಿದ್ದಲ್ಲಿ ಮನೆಯೊಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಎಂದು ರಾಯಭಾರ ಕಚೇರಿ ಸಲಹೆ ನೀಡಿದೆ. ಸೌದಿ ಸರ್ಕಾರ ಹಾಗೂ ಸ್ಥಳೀಯ ಆಡಳಿತದಿಂದ ಹೊರಡಿಸಲಾಗುವ ಅಧಿಕೃತ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.

ದಾಳಿ ದೃಶ್ಯ, ದೃಢೀಕರಿಸದ ಸುದ್ದಿಗಳನ್ನು ಹಂಚಿಕೊಳ್ಳದಂತೆ ಸೂಚನೆ:

ದಾಳಿಗೆ ಸಂಬಂಧಿಸಿದ ವಿಡಿಯೋಗಳು, ಚಿತ್ರಗಳು ಅಥವಾ ದೃಢೀಕರಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅಥವಾ ಮರುಹಂಚಿಕೆ ಮಾಡದಂತೆ ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ.

ಸೌದಿ ಅರೇಬಿಯಾದಲ್ಲಿ ಸೈಬರ್ ಕಾನೂನುಗಳು ಕಠಿಣವಾಗಿರುವ ಹಿನ್ನೆಲೆಯಲ್ಲಿ, ದೃಢೀಕರಿಸದ ಮಿಲಿಟರಿ ಮಾಹಿತಿ ಅಥವಾ ದಾಳಿಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಕಾನೂನು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕೃತ ಮೂಲಗಳಿಂದ ಲಭ್ಯವಾಗುವ ಮಾಹಿತಿಯನ್ನಷ್ಟೇ ನಂಬುವಂತೆ ಸೂಚಿಸಲಾಗಿದೆ.

ಸೌದಿ ಸಿವಿಲ್ ಡಿಫೆನ್ಸ್ ಹಾಗೂ ಭದ್ರತಾ ಸಂಸ್ಥೆಗಳು ನೀಡುವ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮತ್ತು ವದಂತಿಗಳಿಗೆ ಕಿವಿಗೊಡದಂತೆ ರಾಯಭಾರ ಕಚೇರಿ ಮನವಿ ಮಾಡಿದೆ.

ತುರ್ತು ನೆರವಿಗೆ ಸಹಾಯವಾಣಿ:

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಲಾಗಿದೆ. ತುರ್ತು ನೆರವಿಗಾಗಿ ಭಾರತೀಯ ಸಹಾಯ ಕೇಂದ್ರದ ಟೋಲ್-ಫ್ರೀ ಸಂಖ್ಯೆ 8002471234 ನಿರಂತರವಾಗಿ ಲಭ್ಯವಿರಲಿದೆ.

ವಿಮಾನ ಪ್ರಯಾಣಿಕರಿಗೂ ಮುನ್ನೆಚ್ಚರಿಕೆ:

ರಿಯಾದ್‌ಗೆ ವಿಮಾನ ಪ್ರಯಾಣ ಕೈಗೊಳ್ಳಲಿರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನದ ವೇಳಾಪಟ್ಟಿ ಹಾಗೂ ಸೇವೆಯ ಸ್ಥಿತಿಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಅಧಿಕೃತ ಮೂಲಗಳಲ್ಲಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆಲವು ವಿಮಾನ ಸೇವೆಗಳಲ್ಲಿ ವ್ಯತ್ಯಯ ಅಥವಾ ರದ್ದತಿ ಉಂಟಾಗುವ ಸಾಧ್ಯತೆಯಿರುವುದರಿಂದ ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ನಾಗರಿಕರ ಮೇಲಿನ ದಾಳಿಗೆ ಭಾರತ ಖಂಡನೆ:

ರಿಯಾದ್ ಹಾಗೂ ಅಭಾ ವಿಮಾನ ನಿಲ್ದಾಣಗಳ ಮೇಲಿನ ದಾಳಿಯನ್ನು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ನಾಗರಿಕರು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಈ ಸಂದರ್ಭದಲ್ಲಿ ಸೌದಿ ಅರೇಬಿಯಾ ಸರ್ಕಾರದೊಂದಿಗೆ ಭಾರತ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

You may also like

News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the
News

ಆಲ್ಬರ್ಟ್ ರೇಗೊ ಸಾವು ನಿಗೂಢ – ಎರಡು ತಿಂಗಳ ಬಳಿಕ ಶವ ಹೊರತೆಗೆದು FSL ಪರೀಕ್ಷೆ!

ಮಂಗಳೂರಿನಲ್ಲಿ ಅಪರೂಪದ ಪ್ರಕರಣ – ಮಗಳ ವಿರುದ್ಧ ದೂರು, ದೆರೆಬೈಲ್ ಚರ್ಚ್ ಆವರಣದ ದಫನಭೂಮಿಯಲ್ಲಿ ಪೊಲೀಸ್ ತನಿಖೆ ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು,

You cannot copy content of this page