ಬಂಟ್ವಾಳದಲ್ಲಿ ಸಾಲದ ಹಣದ ವಿವಾದ: ಅಣ್ಣನಿಗೆ ಚಾಕು ಇರಿತ, ತಮ್ಮನ ಮೇಲೆ ಹಲ್ಲೆಗೆ ಯತ್ನ – ಆರೋಪಿ ಅಜಿತ್ ಪೊಲೀಸ್ ವಶಕ್ಕೆ
ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನಿಗೆ ಚಾಕುವಿನಿಂದ ಇರಿದು, ತಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್‌ನಲ್ಲಿ ಅಕ್ಟೋಬರ್ 17ರ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಉದಯ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಆರೋಪಿ 28 ವರ್ಷ ಪ್ರಾಯದ ಅಜಿತ್ ಕುಮಾರ್ ಶೆಟ್ಟಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳದ ಬಿ. ಮೂಡ ಗ್ರಾಮದ ನಿವಾಸಿ 27 ವರ್ಷ ಪ್ರಾಯದ ಲೋಕೇಶ್ ಅವರು ನೀಡಿದ ದೂರಿನ ಪ್ರಕಾರ, ಅವರ ಸಹೋದರ ಉದಯ ಅವರು ಪಲ್ಲಮಜಲು ನಿವಾಸಿ ಅಜಿತ್ ಕಲ್ಲಗುಡ್ಡೆ ಎಂಬಾತನಿಗೆ ಹಣ ನೀಡಿದ್ದರು. ಹಣವನ್ನು ವಾಪಸ್ ನೀಡುವಂತೆ ಉದಯ ಹಲವು ಬಾರಿ ಕೇಳಿಕೊಂಡಿದ್ದರು ಎನ್ನಲಾಗಿದೆ.
ಅಕ್ಟೋಬರ್ 17ರಂದು ರಾತ್ರಿ ಹಣ ಹಿಂದಿರುಗಿಸುವುದಾಗಿ ತಿಳಿಸಿದ ಆರೋಪಿ, ಉದಯ ಅವರನ್ನು ಪಲ್ಲಮಜಲು ಜಂಕ್ಷನ್‌ಗೆ ಬರುವಂತೆ ಕರೆದಿದ್ದಾನೆ. ಅದರಂತೆ ಉದಯ ಸ್ಥಳಕ್ಕೆ ತೆರಳಿದ್ದು, ತಮ್ಮ ಸಹೋದರ ಲೋಕೇಶ್ ಅವರಿಗೂ ಅಲ್ಲಿಗೆ ಬರುವಂತೆ ತಿಳಿಸಿದ್ದರು.

ಲೋಕೇಶ್ ಸ್ಥಳಕ್ಕೆ ತಲುಪಿದಾಗ ಆರೋಪಿ ಚಾಕುವಿನಿಂದ ಉದಯ ಅವರಿಗೆ ಇರಿಯುತ್ತಿರುವುದನ್ನು ಕಂಡಿದ್ದಾರೆ. ಸಹೋದರನನ್ನು ರಕ್ಷಿಸಲು ಮುಂದಾದಾಗ ಆರೋಪಿಯು ಲೋಕೇಶ್ ಅವರ ಮೇಲೂ ಹಲ್ಲೆಗೆ ಯತ್ನಿಸಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಉದಯ ಅವರನ್ನು ಸ್ಥಳೀಯರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 144/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 118(2), 109(1) ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಗಾಗಿ ಅಕ್ಟೋಬರ್ 18ರಂದು ಭಾನುವಾರ ಆರೋಪಿ ಅಜಿತ್ ಕುಮಾರ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



