ಕೆರೆಗೆ ಉರುಳಿದ ಕಾರು – ಮಗು ಸಹಿತ ಒಂದೇ ಕುಟುಂಬದ ಮೂವರ ದಾರುಣ ಅಂತ್ಯ
ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಅಕ್ಟೋಬರ್ 20ರಂದು ಮಂಗಳವಾರ ರಾತ್ರಿ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ, ಬಾಡಗ ಬಾಣಂಗಾಲ ಗ್ರಾಮದ ಎಲ್ಕ್ ಹಿಲ್ ತೋಟದಲ್ಲಿ ಕೆಲಸ ಮಾಡುತ್ತಿದ್ದ 36 ವರ್ಷ ಪ್ರಾಯದ ವಿಜೇಶ್, ಅವರ ಪತ್ನಿ 34 ವರ್ಷ ಪ್ರಾಯದ ಪಮಿತಾ ಹಾಗೂ ನಾಲ್ಕು ವರ್ಷದ ಪುತ್ರಿ ಲಿಯಾ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಕುಟುಂಬದವರು ಸಿದ್ದಾಪುರದಿಂದ ಬಾಡಗ ಬಾಣಂಗಾಲದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶಿಲ್ಪಿ ಎಸ್ಟೇಟ್ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕೆರೆಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಮೂವರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 21ರಂದು ಬುಧವಾರ ಬೆಳಗ್ಗೆ ತೋಟದ ಕೆರೆಯಲ್ಲಿ ಕಾರು ಬಿದ್ದಿರುವುದನ್ನು ಗಮನಿಸಿದ ಕಾರ್ಮಿಕರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದವರು ಕೆರೆಯಿಂದ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮಾಹಿತಿ ಪಡೆದ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಕುಟುಂಬದ ಮೂವರು ದುರಂತದಲ್ಲಿ ಮೃತಪಟ್ಟಿರುವ ಘಟನೆ ಬಾಡಗ ಬಾಣಂಗಾಲ ಹಾಗೂ ಸಿದ್ದಾಪುರ ಭಾಗದಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.



