November 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಸಂಗೀತದ ಸಂಭ್ರಮ – ಗಿನ್ನೆಸ್ ದಾಖಲೆಗಾಗಿ 6,700 ಗಾಯಕರು ಸಜ್ಜು!

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಮಹಾಸಮ್ಮೇಳನಕ್ಕೆ ಚಾಲನೆ – 12 ದಿನಗಳ ನಿರಂತರ ಗಾಯನ

ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ವೈಭವವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಇಂದು ನವಂಬರ್ 3ರಂದು ಮಂಗಳವಾರ ಮುಂಜಾನೆ 5 ಗಂಟೆಗೆ ಪುರಭವನದಲ್ಲಿ ಅದ್ದೂರಿ ಚಾಲನೆ ದೊರೆಯಿತು. ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ನ 40ನೇ ವರ್ಷದ ಸಂಭ್ರಮದ ಅಂಗವಾಗಿ ನವೆಂಬರ್ 3ರಿಂದ 15ರ ತನಕ ಆಯೋಜಿಸಿರುವ ಈ ಅಂತಾರಾಷ್ಟ್ರೀಯ ಮಹಾಸಮ್ಮೇಳನವು ವಿಶ್ವದ ವಿವಿಧ ಭಾಗಗಳ ಕೊಂಕಣಿ ಭಾಷಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ.

ಗೋವಾ ಮುಖ್ಯಮಂತ್ರಿ ಸನ್ಮಾನ್ಯ ಡಾ. ಪ್ರಮೋದ್ ಸಾವಂತ್ ಅವರು ಮಹಾಸಮ್ಮೇಳನವನ್ನು ಉದ್ಘಾಟಿಸಿದರು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಆಶೀರ್ವಚನ ನೀಡಿದರು.

12 ದಿನಗಳ ನಿರಂತರ ಗಾಯನ: ಗಿನ್ನೆಸ್ ದಾಖಲೆ ಗುರಿ:

ಮಹಾಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣಿ ನಿರಂತರಿ – ಸಂಸಾರ್ ಸರಾಸರಿ’ (ಕೊಂಕಣಿ ನಿರಂತರವಾಗಲಿ – ಜಗದ ಕೊನೆತನಕ ಉಳಿಯಲಿ) ಎಂಬ ಪರಿಕಲ್ಪನೆಯಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸತತ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ಆಯೋಜಿಸಲಾಗಿದೆ.

ಸುಮಾರು 300 ಗಾಯನ ತಂಡಗಳು ಸರದಿಯಂತೆ ಭಾಗವಹಿಸಲಿದ್ದು, ಜಗತ್ತಿನ ವಿವಿಧ ಭಾಗಗಳಿಂದ 6,700ಕ್ಕೂ ಅಧಿಕ ಗಾಯಕರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಇದರಲ್ಲಿ ಗೋವಾದ 53 ತಂಡಗಳೂ ಸೇರಿವೆ. ವಿವಿಧ ಕೊಂಕಣಿ ಉಪಭಾಷೆಗಳು, ಸಮುದಾಯಗಳು ಮತ್ತು ಸಂಗೀತ ಪರಂಪರೆಗಳನ್ನು ಪ್ರತಿನಿಧಿಸುವ 4,500ಕ್ಕೂ ಅಧಿಕ ಹಾಡುಗಳನ್ನು ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ.

ಕೊಂಕಣಿ ಭಾಷೆಯ ಭಾವನೆ ಒಂದೇ – ಡಾ. ಪ್ರಮೋದ್ ಸಾವಂತ್:

ಗಿನ್ನೆಸ್ ದಾಖಲೆ ಪ್ರಯತ್ನಕ್ಕೆ ಚಾಲನೆ ನೀಡಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಸನ್ಮಾನ್ಯ ಡಾ. ಪ್ರಮೋದ್ ಸಾವಂತ್ ಅವರು, ಮಾಂಡ್ ಸೊಭಾಣ್ ಹಾಗೂ ಸ್ವಾಗತ ಸಮಿತಿಯ ಪರಿಶ್ರಮ ಮತ್ತು ಕಾರ್ಯವನ್ನು ಶ್ಲಾಘಿಸಿದರು. ಕೊಂಕಣಿ ಭಾಷೆಯಲ್ಲಿ ವಿವಿಧ ಉಪಭಾಷೆಗಳಿದ್ದರೂ, ಕೊಂಕಣಿ ಜನರ ಹೃದಯ ಮತ್ತು ಭಾಷೆಯ ಭಾವನೆ ಒಂದೇ ಆಗಿದೆ ಎಂದು ಹೇಳಿದರು.

ಗೋವಾದಲ್ಲಿ ಕೊಂಕಣಿ ಅಧಿಕೃತ ಭಾಷೆಯಾಗಿದ್ದು, ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಮಂಗಳೂರಿನ ಕೊಂಕಣಿ ಭಾಷಿಕರು ಯಾವುದೇ ಸರ್ಕಾರಿ ವ್ಯವಸ್ಥೆಗಳ ನೆರವಿಲ್ಲದೆ ತಮ್ಮ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾಷೆಯನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೋವಾದ ಹೊರಗಿರುವ ಕೊಂಕಣಿ ಸಾಧಕರನ್ನೂ ಗೋವಾ ಸರ್ಕಾರ ತನ್ನ ಅಧಿಕೃತ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸುತ್ತದೆ ಎಂದರು.

ಗೋವಾ ಮತ್ತು ಕರಾವಳಿ ಕರ್ನಾಟಕದ ರಾಜ್ಯ ಗಡಿಗಳು ಬೇರೆಬೇರೆಯಾಗಿದ್ದರೂ, ಎರಡೂ ಪ್ರದೇಶಗಳು ಒಂದೇ ಕರಾವಳಿ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಹಂಚಿಕೊಂಡಿವೆ. ಈ ಸಾಂಸ್ಕೃತಿಕ ಬಾಂಧವ್ಯ ಸದಾಕಾಲ ಮುಂದುವರಿಯಲಿ ಎಂದು ಆಶಿಸಿದರು.

ಎರಿಕ್ ಒಝಾರಿಯೊ ಅವರ ಕೊಡುಗೆ ಸ್ಮರಣೆ:

ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಾದ ಕ್ಯಾಲಂಗುಟ್ ಕ್ಷೇತ್ರದ ಶಾಸಕರಾದ ಮೈಕಲ್ ಲೋಬೋ ಅವರು, ದಿವಂಗತ ಎರಿಕ್ ಒಝಾರಿಯೊ ಅವರು ಕೊಂಕಣಿ ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಜೀವಮಾನದ ಕೊಡುಗೆಯನ್ನು ಸ್ಮರಿಸಿದರು. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವಲ್ಲಿ ಅವರು ವಹಿಸಿದ ಪಾತ್ರ ಮಹತ್ವದ್ದಾಗಿದೆ ಎಂದರು. ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡಗಳಿಗೆ ಶುಭ ಹಾರೈಸಿದ ಅವರು, ಗೋವಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಮಹಾಸಮ್ಮೇಳನವನ್ನು ಮಾಂಡ್ ಸೊಭಾಣ್‌ನ ಸ್ಥಾಪಕ ಹಾಗೂ ದೂರದೃಷ್ಟಿಯ ನಾಯಕ ದಿವಂಗತ ಎರಿಕ್ ಒಝಾರಿಯೊ ಅವರ ಸ್ಮರಣೆಗೆ ಸಮರ್ಪಿಸಲಾಗಿದೆ.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೋವಾದ ಶಾಸಕರಾದ ಮೈಕಲ್ ಲೋಬೋ ಮತ್ತು ದೆಲಿಲಾ ಲೋಬೋ, ಸ್ವಾಗತ ಸಮಿತಿ ಸದಸ್ಯ ಡಾಲ್ಫಿ ಪ್ರಶಾಂತ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಜಾಯ್ಸ್ ಒಝಾರಿಯೊ, ರಾಯ್ ಕ್ಯಾಸ್ಟೆಲಿನೊ, ಪ್ರಕಾಶ್ ಶೆಟ್ಟಿ ಮಂಗಳೂರು, ಎರಿಕ್ ಕೊರೆಯಾ, ರೊನಾಲ್ಡ್ ಸಿಲ್ವನ್ ಡಿಸೋಜ ಹಾಗೂ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. ಪಿಂಟೊ ಅವರು ಗಣ್ಯರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ರೈನೆಲ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಸರಿಯಾಗಿ 6 ಗಂಟೆಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಗುಮಟ ವಾದ್ಯ ನುಡಿಸುವ ಮೂಲಕ ನಿರಂತರ ಗಾಯನ ಮ್ಯಾರಥಾನ್‌ಗೆ ಅಧಿಕೃತ ಚಾಲನೆ ನೀಡಿದರು. ಕೊಂಕಣಿ ಸಂಗೀತದ ವೈವಿಧ್ಯ, ಭಾಷೆಯ ಶ್ರೀಮಂತಿಕೆ ಮತ್ತು ಜಾಗತಿಕ ಕೊಂಕಣಿ ಸಮುದಾಯದ ಒಗ್ಗಟ್ಟನ್ನು ಸಾರುವ ಈ ಮಹಾಸಮ್ಮೇಳನವು ಮಂಗಳೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆಯುವ ನಿರೀಕ್ಷೆಯಿದೆ.

You may also like

News

ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಆರೋಪ – ಪಂಪ್‌ವೆಲ್ ಫ್ಲ್ಯಾಟ್ ಮೇಲೆ ದಾಳಿ

₹15.30 ಲಕ್ಷದ MDMA ಸಹಿತ ಮಹಿಳೆ ಸೆರೆ ಮಂಗಳೂರು ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ 42 ವರ್ಷದ ಮಹಿಳೆಯೊಬ್ಬರನ್ನು
News

ಕರ್ತವ್ಯನಿಷ್ಠೆ, ಸರಳತೆ ಹಾಗೂ ಆತ್ಮೀಯತೆಯ ಪ್ರತೀಕ ಅರುಣಕಾಂತ್

26 ವರ್ಷಗಳ ಸೇವೆಗೆ ವಾರ್ತಾ ಇಲಾಖೆಯಿಂದ ಗೌರವದ ಬೀಳ್ಕೊಡುಗೆ ಸರ್ಕಾರಿ ಸೇವೆ ಎಂದರೆ ಕೇವಲ ಕರ್ತವ್ಯ ನಿರ್ವಹಣೆಯಲ್ಲ, ಅದು ಸಮರ್ಪಣೆ, ಶಿಸ್ತು ಮತ್ತು ಜವಾಬ್ದಾರಿಯ ಪ್ರತಿಬಿಂಬ. ಇಂತಹ

You cannot copy content of this page