November 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಕಲಿ ದಾಖಲೆಗಳ ಆಟ! MCC ಬ್ಯಾಂಕ್‌ಗೆ ಬರೋಬ್ಬರಿ ₹98.99 ಲಕ್ಷ ವಂಚನೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲು

ಬ್ಯಾಂಕ್ ವಸೂಲಾತಿ ಅಧಿಕಾರಿ ಸಂದೀಪ್ ಕ್ವಾಡ್ರಸ್ ಅವರಿಂದ ದೂರು

ಬೈಂದೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ ಟೊಯೋಟಾ ಕಾರು ಖರೀದಿ ಹಾಗೂ ಜಮೀನು ಅಡಮಾನ ಸಾಲದ ಹೆಸರಿನಲ್ಲಿ ಬೈಂದೂರಿನ MCC ಬ್ಯಾಂಕ್‌ಗೆ ಬರೋಬ್ಬರಿ ₹98.99 ಲಕ್ಷ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳು ಸ್ಥಳೀಯವಾಗಿ ಗಮನ ಸೆಳೆದಿವೆ.

ಉಡುಪಿಯ MCC Bank Ltd. ಮುಖ್ಯ ವ್ಯವಸ್ಥಾಪಕ ಹಾಗೂ ವಸೂಲಾತಿ ಅಧಿಕಾರಿ ಸಂದೀಪ್ ಕ್ವಾಡ್ರಸ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣಗಳು ದಾಖಲಾಗಿವೆ. ಬೈಂದೂರು ಯಡ್ತರೆ ಶಾಖೆಯಲ್ಲಿ ನಡೆದಿರುವ ಈ ವಂಚನೆ ಪ್ರಕರಣಗಳಲ್ಲಿ ನಕಲಿ ದಾಖಲೆಗಳನ್ನು ಅಸಲಿ ಎಂದು ನಂಬಿಸಿ ಸಾಲ ಪಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನೋವಾ ಕ್ರಿಸ್ಟಾ ಖರೀದಿ ಹೆಸರಿನಲ್ಲಿ ₹27.50 ಲಕ್ಷ ಸಾಲ:

ಮೊದಲ ಪ್ರಕರಣ : (FIR No. 155/2026)ದಲ್ಲಿ ಶಿರೂರಿನ ಜುಹಾ ಮಂಜಿಲ್ ನಿವಾಸಿ ಸಮೀರನ್ ಶೇಖ್ ಎಂಬಾತ ತನ್ನ ಜಾಮೀನುದಾರ ಅಸ್ನಾ ಶೇಖ್ ಅವರೊಂದಿಗೆ 2026ರ ಜುಲೈ 11ರಂದು ಬ್ಯಾಂಕ್‌ಗೆ ಹಾಜರಾಗಿ ಹೊಸ ಟೊಯೋಟಾ ಇನೋವಾ ಕ್ರಿಸ್ಟಾ ಕಾರು ಖರೀದಿಸುವುದಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ನಂದಿ ಟೊಯೋಟಾ ಕಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಜೂನ್ 29ರ ಕೊಟೇಶನ್ ಸಲ್ಲಿಸಿ ₹27.50 ಲಕ್ಷ ಸಾಲ ಪಡೆದಿದ್ದ. ಬಳಿಕ KA-20-ZZ-9876 ನೋಂದಣಿ ಸಂಖ್ಯೆಯ ವಾಹನದ ಆರ್‌ಸಿ, ಖರೀದಿ ಬಿಲ್, ವಿಮೆ ಹಾಗೂ ಬಿ-ಎಕ್ಸ್‌ಟ್ರಾಕ್ಟ್ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದ. ಎರಡು ತಿಂಗಳ ಕಂತುಗಳನ್ನೂ ಪಾವತಿಸಿದ್ದ. ಆದರೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳ ನೈಜತೆಯನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಬೆಳಕಿಗೆ ಬಂದಿದೆ.

ಫಾರ್ಚುನರ್ ಕಾರಿನ ಹೆಸರಿನಲ್ಲಿ ₹33.49 ಲಕ್ಷ ಸಾಲ:

ಎರಡನೇ ಪ್ರಕರಣ : (FIR No. 156/2026)ದಲ್ಲಿ ಗಂಗೊಳ್ಳಿಯ ಖಾರ್ವಿಕೇರಿ ನಿವಾಸಿ ಮಹಮದ್ ಹುಸೈನ್ ಅಜುಮುದ್ದೀನ್ ಎಂಬಾತ ತೆಕ್ಕಟ್ಟೆಯ ಜನತಾ ಕಾಲೋನಿ ನಿವಾಸಿ ಸಾನಾಬಿ ಅವರನ್ನು ಜಾಮೀನುದಾರರನ್ನಾಗಿ ಮಾಡಿಕೊಂಡು 2026ರ ಸೆಪ್ಟೆಂಬರ್ 22ರಂದು ಹೊಸ ಟೊಯೋಟಾ ಫಾರ್ಚುನರ್ ಕಾರು ಖರೀದಿಸುವುದಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ನಂದಿ ಟೊಯೋಟಾ ಕಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಸೆಪ್ಟೆಂಬರ್ 21ರ ಕೊಟೇಶನ್ ಆಧರಿಸಿ ₹33.49 ಲಕ್ಷ ಸಾಲಕ್ಕೆ ಮನವಿ ಮಾಡಿದ್ದ. ಸೆಪ್ಟೆಂಬರ್ 28ರಂದು ಸಾಲ ಮಂಜೂರಾಗಿತ್ತು. ಬಳಿಕ KA-04-MH-4174 ನೋಂದಣಿ ಸಂಖ್ಯೆಯ ವಾಹನದ ವಿಮಾ ಪಾಲಿಸಿಯನ್ನು ಬ್ಯಾಂಕ್‌ಗೆ ಸಲ್ಲಿಸಿ ಒಂದು ಕಂತನ್ನು ಪಾವತಿಸಿದ್ದ. ಆದರೆ ದಾಖಲೆಗಳ ಪರಿಶೀಲನೆಗಾಗಿ ಆರ್‌ಟಿಒ ಕಚೇರಿಯನ್ನು ಸಂಪರ್ಕಿಸಿದಾಗ ವಿಮಾ ಪಾಲಿಸಿಯಲ್ಲಿ ನಮೂದಿಸಿದ್ದ ವಾಹನದ ನೋಂದಣಿ ಸಂಖ್ಯೆ ನಕಲಿ ಎಂಬುದು ತಿಳಿದುಬಂದಿದೆ.

ಕಾರು ಮಾತ್ರವಲ್ಲ, ಜಮೀನು ಅಡಮಾನವಿಟ್ಟೂ ₹12 ಲಕ್ಷ ಸಾಲ!:

ಮೂರನೇ ಪ್ರಕರಣ : (FIR No. 157/2026)ದಲ್ಲಿ ಸಿದ್ದಾಪುರ ಗ್ರಾಮದ ಹೊಸಂಗಡಿ ನಿವಾಸಿ ಮಹಮದ್ ಸಲೀಂ ಎಂಬಾತ ಹೆಣ್ಣೆಬೈಲು ನಿವಾಸಿ ಅಲ್ ಶಕೀರಾ ಅವರನ್ನು ಜಾಮೀನುದಾರರನ್ನಾಗಿ ಮಾಡಿಕೊಂಡು 2026ರ ಜುಲೈ 15ರಂದು ಹೊಸ ಟೊಯೋಟಾ ಇನೋವಾ ಕ್ರಿಸ್ಟಾ ಖರೀದಿಸುವುದಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದ. ನಂದಿ ಟೊಯೋಟಾ ಕಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಜುಲೈ 14ರ ಕೊಟೇಶನ್ ಸಲ್ಲಿಸಿ ₹26 ಲಕ್ಷ ಸಾಲ ಪಡೆದಿದ್ದ. ಬಳಿಕ KA-20-AA-8888 ನೋಂದಣಿ ಸಂಖ್ಯೆಯ ವಾಹನದ ಆರ್‌ಸಿ, ಖರೀದಿ ಬಿಲ್, ವಿಮೆ ಹಾಗೂ ಬಿ-ಎಕ್ಸ್‌ಟ್ರಾಕ್ಟ್ ದಾಖಲೆಗಳನ್ನು ಸಲ್ಲಿಸಿದ್ದ. ಎರಡು ತಿಂಗಳ ಕಂತುಗಳನ್ನೂ ಪಾವತಿಸಿದ್ದ. ಆದರೆ ಬ್ಯಾಂಕ್ ಅಧಿಕಾರಿಗಳ ಪರಿಶೀಲನೆಯಲ್ಲಿ ಈ ದಾಖಲೆಗಳೂ ನಕಲಿ ಎಂಬುದು ಪತ್ತೆಯಾಗಿದೆ.

ಇಷ್ಟೇ ಅಲ್ಲದೆ, ಮಹಮದ್ ಸಲೀಂ ತನ್ನ ಹೆಸರಿನಲ್ಲಿರುವ ಹೊಸಂಗಡಿ ಗ್ರಾಮದ 45 ಸೆಂಟ್ಸ್ ಜಮೀನನ್ನು ಅಡಮಾನವಿಟ್ಟು ಹೆಚ್ಚುವರಿಯಾಗಿ ₹12 ಲಕ್ಷ ಸಾಲವನ್ನೂ ಪಡೆದಿದ್ದ. ಈ ಸಾಲ ಪಡೆಯುವ ಸಂದರ್ಭದಲ್ಲಿಯೂ ಆತ ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬುದು ಬ್ಯಾಂಕ್ ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಮೂರು ಪ್ರಕರಣಗಳಲ್ಲಿ ಒಟ್ಟು ₹98.99 ಲಕ್ಷ ವಂಚನೆ ಆರೋಪ:

ಟೊಯೋಟಾ ಇನೋವಾ ಕ್ರಿಸ್ಟಾ ಹಾಗೂ ಫಾರ್ಚುನರ್ ಕಾರುಗಳ ಖರೀದಿ ಹೆಸರಿನಲ್ಲಿ ಮತ್ತು ಜಮೀನು ಅಡಮಾನ ಸಾಲದ ಮೂಲಕ ಒಟ್ಟು ₹98.99 ಲಕ್ಷ ಸಾಲವನ್ನು ನಕಲಿ ದಾಖಲೆಗಳ ಆಧಾರದಲ್ಲಿ ಪಡೆದಿರುವ ಆರೋಪದಡಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಬ್ಯಾಂಕ್‌ನ ಹಣಕಾಸು ವ್ಯವಹಾರದಲ್ಲಿ ನಕಲಿ ದಾಖಲೆಗಳ ಬಳಕೆ ಬೆಳಕಿಗೆ ಬಂದಿರುವ ಈ ಪ್ರಕರಣಗಳ ಕುರಿತು ಬೈಂದೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

You may also like

News

ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಸಂಗೀತದ ಸಂಭ್ರಮ – ಗಿನ್ನೆಸ್ ದಾಖಲೆಗಾಗಿ 6,700 ಗಾಯಕರು ಸಜ್ಜು!

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಮಹಾಸಮ್ಮೇಳನಕ್ಕೆ ಚಾಲನೆ – 12 ದಿನಗಳ ನಿರಂತರ ಗಾಯನ ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ವೈಭವವನ್ನು ವಿಶ್ವದಾದ್ಯಂತ ಪಸರಿಸುವ
News

ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಆರೋಪ – ಪಂಪ್‌ವೆಲ್ ಫ್ಲ್ಯಾಟ್ ಮೇಲೆ ದಾಳಿ

₹15.30 ಲಕ್ಷದ MDMA ಸಹಿತ ಮಹಿಳೆ ಸೆರೆ ಮಂಗಳೂರು ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ 42 ವರ್ಷದ ಮಹಿಳೆಯೊಬ್ಬರನ್ನು

You cannot copy content of this page