November 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಾಜ್ಯಮಟ್ಟದ ದಫ್ ಸ್ಪರ್ಧೆಯಲ್ಲಿ ಪೊಳಿಪು ತಂಡಕ್ಕೆ ಪ್ರಥಮ ಸ್ಥಾನ – 13 ತಂಡಗಳಿಂದ ಕಲಾ ಪ್ರದರ್ಶನ

ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ಪರಂಪರೆ ಹಾಗೂ ಕಲಾತ್ಮಕ ಪ್ರತಿಭೆಯ ಸಂಗಮಕ್ಕೆ ಸಾಕ್ಷಿಯಾದ ರಾಜ್ಯಮಟ್ಟದ ದಫ್ ಸ್ಪರ್ಧೆ, ದಫ್ ರಾತೀಬ್ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವು ಪುಣಚ–ಪರಿಯಾಲ್ತಡ್ಕದ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನವಂಬರ್ 7ರಂದು ಶನಿವಾರ ನಡೆಯಿತು.

ಪರಿಯಾಲ್ತಡ್ಕದ ರಿಫಾಯಿ ದಫ್ ಕಮಿಟಿಯ 54ನೇ ವಾರ್ಷಿಕೋತ್ಸವ ಹಾಗೂ ಬದ್ರಿಯಾ ಯಂಗ್ ಬಾಯ್ಸ್‌ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 13 ತಂಡಗಳು ದಫ್ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಯಾಲ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್. ಮಹಮ್ಮದ್ ಮಾತನಾಡಿ, ಇಸ್ಲಾಮಿನ ಸಾಂಸ್ಕೃತಿಕ ಕಲೆಯಾದ ದಫ್ ಮೂಲಕ ಶಾಂತಿ, ಸೌಹಾರ್ದತೆ, ಸಾಮರಸ್ಯ ಮತ್ತು ಮಾನವೀಯತೆಯ ಸಂದೇಶ ಸಾರಲಾಗುತ್ತಿದೆ. ಈ ಕಲೆ ಇಂದು ದೇಶದಾದ್ಯಂತ ಸರ್ವಧರ್ಮೀಯರ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಎಂದರು. ಸ್ಥಳೀಯ ಮಸೀದಿಯ ಖತೀಬ್ ಹಸೈನಾರ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.

ಪೊಳಿಪು ತಂಡಕ್ಕೆ ಪ್ರಥಮ ಬಹುಮಾನ:

13 ತಂಡಗಳ ನಡುವೆ ನಡೆದ ರೋಚಕ ಸ್ಪರ್ಧೆಯಲ್ಲಿ ಕಾಪು–ಪೊಳಿಪುವಿನ ಸಯ್ಯಿದ್ ಸಂಶುದ್ದೀನ್ ದಫ್ ತಂಡ ಪ್ರಥಮ ಸ್ಥಾನ, ದೇರಳಕಟ್ಟೆ–ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ದ್ವಿತೀಯ ಹಾಗೂ ಉಳ್ಳಾಲದ ಅಲ್ ಜಝೀರಾ ದಫ್ ತಂಡ ತೃತೀಯ ಸ್ಥಾನ ಗಳಿಸಿತು. ಪೊಳಿಪು ಮತ್ತು ರೆಂಜಾಡಿ ತಂಡಗಳು ಉತ್ತಮ ಹಾಡುಗಾರಿಕೆ ಪ್ರಶಸ್ತಿಯನ್ನೂ ಪಡೆದುಕೊಂಡವು.

ಕಾರ್ಯಕ್ರಮದಲ್ಲಿ ಕಮಾಲ್ ಆಂಡ್ ಕಂಪೆನಿ ಅಡ್ವಕೇಟ್ಸ್ ಪಾನ್ ಇಂಡಿಯಾದ ಸ್ಥಾಪಕ ಕಮಾಲ್, ಸೌದಿ ಅರೇಬಿಯಾದ ರೆಲ್ಕೋ ಅಧ್ಯಕ್ಷ ಬಶೀರ್ ಸಂಪ್ಯ, ಯೂಸುಫ್ ಗೌಸಿಯಾ, ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ಪುರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಎ.ಪಿ.ಎನ್. ವೆಲ್ಫೇರ್ ಅಸೋಸಿಯೇಷನ್ ಯುಎಇ ಅಧ್ಯಕ್ಷ ಅಬೂಬಕ್ಕರ್ ಅಜ್ಜಿನಡ್ಕ ಹಾಗೂ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು.

ರಿಫಾಯಿ ದಫ್ ಕಮಿಟಿ ಅಧ್ಯಕ್ಷ ಕಮರುದ್ದೀನ್ ಅವರ ಅಧ್ಯಕ್ಷತೆಯಲ್ಲಿ ಅಕ್ಕರಂಗಡಿ ಮಸೀದಿ ಖತೀಬ್ ಝುಬೈರ್ ದಾರಿಮಿ ಅವರ ನೇತೃತ್ವದಲ್ಲಿ ದಫ್ ರಾತೀಬ್ ನಡೆಯಿತು. ಕೇರಳದ ಕೊಲ್ಲಂನ ಶಫೀಕ್ ಬದ್ರಿ ಅಲ್ ಬಾಖವಿ ಹಾಗೂ ಕೊಡಗಿನ ಅಯ್ಯಂಗೇರಿಯ ರಾಫೀ ಹಿಮಮಿ ಖಾಮಿಲ್ ಸಖಾಫಿ ಧಾರ್ಮಿಕ ಪ್ರವಚನ ನೀಡಿದರು. ಮೌಲಿದ್ ಪಾರಾಯಣವೂ ನಡೆಯಿತು.

ಬದ್ರಿಯಾ ಯಂಗ್ ಬಾಯ್ಸ್ ಅಧ್ಯಕ್ಷ ಉಮ್ಮರ್ ಫಾರೂಕ್, ಪರಿಯಾಲ್ತಡ್ಕ ಎಂಜೆಎಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಅಬ್ದುಲ್ಲಾ ಹಾಜಿ, ಅಬೂಬಕ್ಕರ್ ಸಿದ್ದೀಕ್ ರಝ್ವಿ ಅಲ್ ಫುರ್ಖಾನಿ, ಸಯ್ಯಿದ್ ಸುಹೈಲ್ ಸುರೈಜಿ ಅಲ್ ಫಾಲಿಲಿ, ಮುಹಮ್ಮದ್ ನಿಝಾರ್ ಫೈಝಿ ಅಲ್ ಮಹ್‌ಬರಿ, ಪುಣಚ ಮಸೀದಿ ಖತೀಬ್ ಮುಹಮ್ಮದ್ ದಾರಿಮಿ, ಸುಫ್ಯಾನ್ ಮದನಿ ಅಜ್ಜಿನಡ್ಕ, ಅಬ್ದುಲ್ ಸಲಾಂ ಫೈಝಿ ಮಹ್‌ಬರಿ ನೀರ್ಕಜೆ ಹಾಗೂ ಯೂಸುಫ್ ಮಿಸ್ಬಾಹಿ ಪರಿಯಾಲ್ತಡ್ಕ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಫೈಸಾರಿ ಸ್ವಾಗತಿಸಿದರು. ಹಾಶಿರ್ ನಝೀರ್ ಸಖಾಫಿ ಕಿರಾಅತ್ ಪಠಿಸಿದರು. ಶಾಫಿ ದಾರಿಮಿ ಪರಿಯಾಲ್ತಡ್ಕ ವಂದಿಸಿದರು. ನೌಫಲ್ ಕುಡ್ತಮುಗೇರ್ ಮತ್ತು ಸುಹೈಬ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

You may also like

News

ದೀಪಾವಳಿಯ ನಿಜವಾದ ಬೆಳಕು ಶ್ರಮಜೀವಿಗಳ ಮುಖದಲ್ಲಿ – ಪೌರ ಕಾರ್ಮಿಕರನ್ನು ಮನೆಗೆ ಆಹ್ವಾನಿಸಿ ಗೌರವಿಸಿದ ನಂದನ್ ಮಲ್ಯ ಕುಟುಂಬದ ಹೃದಯಸ್ಪರ್ಶಿ ನಡೆ

ಹಬ್ಬದ ಸಂಭ್ರಮದಲ್ಲಿ ಶ್ರಮಜೀವಿಗಳನ್ನೂ ಪಾಲುದಾರರನ್ನಾಗಿಸಿದ ಮಾದರಿ ಕಾರ್ಯ ಮಂಗಳೂರು: ದೀಪಾವಳಿ ಎಂದರೆ ಕೇವಲ ಮನೆಗಳಲ್ಲಿ ದೀಪ ಬೆಳಗಿಸುವ, ಸಿಹಿ ಹಂಚುವ ಮತ್ತು ಪಟಾಕಿ ಸಿಡಿಸುವ ಹಬ್ಬವಷ್ಟೇ ಅಲ್ಲ;
News

ಸೇವಾ ಮನೋಭಾವದ ಕಾರ್ಯಕ್ಕೆ ವಲಯ ಮಟ್ಟದ ಗೌರವ

ಕಾಪು JCIಗೆ 2026ರ ಅತ್ಯುತ್ತಮ ಘಟಕ ಪ್ರಶಸ್ತಿ ನಿಷ್ಠಾವಂತ ನಾಯಕತ್ವ, ಪ್ರಾಮಾಣಿಕ ಕಾರ್ಯವೈಖರಿ ಹಾಗೂ ಸಮಾಜಸೇವೆಯ ಮೇಲಿನ ಬದ್ಧತೆಯಿಂದ ಗುರುತಿಸಿಕೊಂಡಿರುವ ಕಾಪು ಜೇಸಿಐ ಘಟಕಕ್ಕೆ 2026ನೇ ಸಾಲಿನ

You cannot copy content of this page