300 ಗಂಟೆಗಳ ಕೊಂಕಣಿ ಗಾಯನ ಮ್ಯಾರಥಾನ್‌ಗೆ ಗಿನ್ನಿಸ್ ಗರಿ ಸಿಗಲಿ – ಶಾಸಕ ವೇದವ್ಯಾಸ ಕಾಮತ್ ಶುಭಹಾರೈಕೆ
ಕೊಂಕಣಿ ಭಾಷೆ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದ ಪ್ರಮುಖ ಆಕರ್ಷಣೆಯಾದ 300 ಗಂಟೆಗಳ ನಿರಂತರ ಕೊಂಕಣಿ ಗಾಯನ ಮ್ಯಾರಥಾನ್‌ಗೆ ಶಾಸಕ ವೇದವ್ಯಾಸ ಕಾಮತ್ ಮೆಚ್ಚುಗೆ ವ್ಯಕ್ತಪಡಿಸಿ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುತ್ತಿರುವ ಈ ಮಹತ್ವದ ಸಂಗೀತ ಸಮ್ಮೇಳನಕ್ಕೆ ಭೇಟಿ ನೀಡಿದ ಶಾಸಕರು, ಸಂಗೀತ ಮ್ಯಾರಥಾನ್‌ನಲ್ಲಿ ಭಾಗವಹಿಸಿರುವ ಗಾಯಕರು ಹಾಗೂ ಸಂಘಟಕರ ಪ್ರಯತ್ನವನ್ನು ಶ್ಲಾಘಿಸಿದರು.
300 ತಂಡಗಳು, 6,700ಕ್ಕೂ ಅಧಿಕ ಗಾಯಕರು ಮತ್ತು 4,500ಕ್ಕೂ ಹೆಚ್ಚು ಹಾಡುಗಳ ಮೂಲಕ 300 ಗಂಟೆಗಳ ಕಾಲ (12 ದಿನ, 12 ಗಂಟೆ ಮತ್ತು 12 ನಿಮಿಷ) ಯಾವುದೇ ವಿರಾಮವಿಲ್ಲದೆ ನಡೆಯುತ್ತಿರುವ ಈ ಗಾಯನ ಸಾಹಸ ಕೊಂಕಣಿ ಸಂಗೀತ ಲೋಕದಲ್ಲಿ ಅಪೂರ್ವ ಪ್ರಯತ್ನವಾಗಿದೆ. ‘ಶಾಶ್ವತ ಕೊಂಕಣಿ – ಜಗತ್ತಿನ ಅಂತ್ಯದವರೆಗೆ’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನವು ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಂಗೀತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿವಿಧ ದೇಶಗಳಿಂದ ಆಗಮಿಸಿರುವ ತಂಡಗಳು ತಮ್ಮ ಸಂಗೀತ ಪ್ರತಿಭೆಯ ಮೂಲಕ ಪ್ರೇಕ್ಷಕರ ಮನಸೂರೆಗೊಳ್ಳುತ್ತಿವೆ. ಸ್ಥಳೀಯ ಸಂಗೀತಾಸಕ್ತರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಹಗಲು-ರಾತ್ರಿ ನಿರಂತರವಾಗಿ 300 ಗಂಟೆಗಳ ಕಾಲ ಗಾಯನ ನಡೆಸುವುದು ಸುಲಭದ ಸಾಧನೆಯಲ್ಲ. ಇಂತಹ ಸವಾಲಿನ ಪ್ರಯತ್ನಕ್ಕೆ ಕೈಹಾಕಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಹಾದಿಯನ್ನು ಕ್ರಮಿಸಿರುವ ಮಾಂಡ್ ಸೊಭಾಣ್ ಸಂಸ್ಥೆಯ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಕೊಂಕಣಿ ಭಾಷೆಯ ಶ್ರೀಮಂತಿಕೆ, ಸಂಗೀತದ ವೈವಿಧ್ಯತೆ ಮತ್ತು ಕಲಾವಿದರ ಒಗ್ಗಟ್ಟನ್ನು ಜಗತ್ತಿಗೆ ಸಾರುತ್ತಿರುವ ಈ ವಿಶಿಷ್ಟ ಪ್ರಯತ್ನ ಗಿನ್ನಿಸ್ ವಿಶ್ವ ದಾಖಲೆಯಾಗಿ ಮೂಡಿಬರಲಿ ಎಂದು ಅವರು ಹಾರೈಸಿದರು.
ನೂರಾರು ತಂಡಗಳು, ಸಾವಿರಾರು ಗಾಯಕರು ಹಾಗೂ ಸಾವಿರಾರು ಹಾಡುಗಳ ಸಂಗಮದೊಂದಿಗೆ ನಡೆಯುತ್ತಿರುವ ಈ 300 ಗಂಟೆಗಳ ಗಾಯನ ಮ್ಯಾರಥಾನ್ ಕೊಂಕಣಿ ಸಂಗೀತ ಇತಿಹಾಸದಲ್ಲಿ ಸ್ಮರಣೀಯ ಮೈಲಿಗಲ್ಲಾಗುವ ನಿರೀಕ್ಷೆ ಮೂಡಿಸಿದೆ.




