November 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಾರಥ್ಯಕ್ಕೆ ಹೊಸ ತಂಡ  

ಅಧ್ಯಕ್ಷರಾಗಿ ಕೆ. ವಿಶ್ವಾಸ್ ಶೆಣೈ, ಸಂಚಾಲಕರಾಗಿ ನ್ಯಾಯವಾದಿ ಮಹೇಶ್ ಕಜೆ ಹಾಗೂ ಕೋಶಾಧಿಕಾರಿಯಾಗಿ ಸುರೇಷ್ ರೈ ಪಡ್ಡಂಬೈಲು ನೇಮಕ

ಪುತ್ತೂರು: ಶಿಕ್ಷಣ, ಸಂಸ್ಕಾರ ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಘಟಕ ಸಂಸ್ಥೆಯಾದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಚುಕ್ಕಾಣಿ ಇದೀಗ ನೂತನ ತಂಡದ ಕೈ ಸೇರಿದೆ. ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಜವಾಬ್ದಾರಿ ಹಸ್ತಾಂತರ ಸಮಾರಂಭ ನವೆಂಬರ್ 6ರಂದು ಕಾಲೇಜಿನ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು. ಉದ್ಯಮಿ ಕೆ. ವಿಶ್ವಾಸ್ ಶೆಣೈ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ನ್ಯಾಯವಾದಿ ಮಹೇಶ್ ಕಜೆ ಸಂಚಾಲಕರಾಗಿ ಹಾಗೂ ನ್ಯಾಯವಾದಿ ಸುರೇಶ್ ರೈ ಪಡ್ಡಂಬೈಲು ಕೋಶಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿದರು.

ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಮಹೇಶ್ ಕೆ. ಸವಣೂರು, ಡಾ. ಅರುಣ್ ಶ್ಯಾಮ್, ಮಾಧವ ಪೂಜಾರಿ, ವಿದ್ಯಾಗೌರಿ, ಶೋಭಾ ಕೊಳತ್ತಾಯ ಹಾಗೂ ಸಂತೋಷ್ ರೈ ಕೈಕಾರ ಆಯ್ಕೆಯಾಗಿದ್ದಾರೆ.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕಡಬ ಹಾಗೂ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಅವರು ನೂತನ ಆಡಳಿತ ಮಂಡಳಿಗೆ ಜವಾಬ್ದಾರಿಗಳನ್ನು ಹಸ್ತಾಂತರಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತೃ ಸಂಸ್ಥೆಯ ನಿರ್ದೇಶಕರಾದ ರವೀಂದ್ರ ರೈ, ರಮೇಶ್ಚಂದ್ರ, ಮಹಾಲಕ್ಷ್ಮೀ ಕೆ. ಹಾಗೂ ಕಾಲೇಜಿನ ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ ಜಿ., ಕೋಶಾಧಿಕಾರಿ ಯಶೋಧರ ಜೈನ್ ಮತ್ತು ಸದಸ್ಯರಾದ ಸುರೇಶ್ ರೈ ಪಡ್ಡಂಬೈಲು, ಅರುಣ್ ಬಿ.ಕೆ., ಚೇತನ್ ನಾಯಕ್, ಇಂದುಶೇಖರ್ ಹಾಗೂ ಪ್ರಮಿತಾ ಸಿ. ಹಾಸ್ ಉಪಸ್ಥಿತರಿದ್ದರು.

ಮಾತೃ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್ ಬೊಟ್ಯಾಡಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ, ಪ್ರಾಂಶುಪಾಲರಾದ ಡಾ. ಅಕ್ಷತಾ ಎ.ಪಿ., ಅಧ್ಯಾಪಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಅಭಿವೃದ್ಧಿಗೆ ಸಾಮೂಹಿಕ ಸಂಕಲ್ಪ:

ನಿರ್ಗಮಿತ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸಂಚಾಲಕರು ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ನೂತನ ತಂಡಕ್ಕೆ ಶುಭ ಹಾರೈಸಿದರು. ಜವಾಬ್ದಾರಿ ಸ್ವೀಕರಿಸಿದ ನೂತನ ಅಧ್ಯಕ್ಷರು ಹಾಗೂ ಸಂಚಾಲಕರು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ, ಅಭಿವೃದ್ಧಿ ಹಾಗೂ ಪ್ರಗತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವ ಅಗತ್ಯವನ್ನು ಒತ್ತಿಹೇಳಿದರು. ಮುಂದಿನ ದಿನಗಳಲ್ಲಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಮತ್ತು ಬೆಂಬಲವನ್ನು ಕೋರಿದರು.

ಹೊಸ ಜವಾಬ್ದಾರಿಯೊಂದಿಗೆ ಕಾರ್ಯಪ್ರವೃತ್ತವಾಗಿರುವ ನೂತನ ಆಡಳಿತ ಮಂಡಳಿಯು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶೈಕ್ಷಣಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸಿ, ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧನೆಗಳತ್ತ ಮುನ್ನಡೆಯಲಿ ಎಂಬ ಆಶಯ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

You may also like

News

ಮಧುಮೇಹಕ್ಕೆ ಕಡಿವಾಣ ಹಾಕಲು ಫಾದರ್ ಮುಲ್ಲರ್ ಆಸ್ಪತ್ರೆಯ ಆರೋಗ್ಯ ಅಭಿಯಾನ

ಬಂಟ್ವಾಳದಲ್ಲಿ ನವಂಬರ್ 14ರಂದು ಉಚಿತ ತಪಾಸಣಾ ಶಿಬಿರ ಬಂಟ್ವಾಳ: ಮಧುಮೇಹವೆಂಬ ಮೌನ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ, ಸೂಕ್ತ ಮುನ್ನೆಚ್ಚರಿಕೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ಅದನ್ನು
News

One of a Kind, State-Level Nursing Students Research Confluence at Father Muller

Father Muller College of Nursing, Mangaluru, organised AVENIR 2K26 – Student Research Confluence, a one-day state-level conference on the theme

You cannot copy content of this page