November 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರುವಿನಲ್ಲಿ ಹಾಡಹಗಲೇ ಸರಗಳ್ಳರ ಅಟ್ಟಹಾಸ

ಚಿನ್ನವೆಂದು ಭಾವಿಸಿ ನಕಲಿ ಸರ ಕದ್ದ ದುಷ್ಕರ್ಮಿಗಳು

ಮಾಣಿ: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾದ ಘಟನೆ ನವಂಬರ್ 12ರಂದು ಗುರುವಾರ ಸೂರಿಕುಮೇರು ಸಮೀಪದ ಕಾಯರಡ್ಕ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಬರಿಮಾರು ರಸ್ತೆಯ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮುಖಕ್ಕೆ ಮಾಸ್ಕ್ ಧರಿಸಿದ್ದರು ಎನ್ನಲಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಬಳಿ ದಾರಿ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಆಕೆಯ ಕೊರಳಲ್ಲಿದ್ದ ಸರವನ್ನು ಕಸಿದುಕೊಂಡು ಅದೇ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ.

ಕೃತ್ಯ ಎಸಗಿದವರು ಬರಿಮಾರು ರಸ್ತೆ ಮೂಲಕ ಬಿ.ಸಿ.ರೋಡ್, ಮಂಗಳೂರು ಹಾಗೂ ಉಪ್ಪಿನಂಗಡಿ ಕಡೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಪರಾರಿಯಾಗಿರುವ ಸಾಧ್ಯತೆ ಇದೆ. ಸಮೀಪದ ಹೊಸ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆಯ ದೃಶ್ಯಗಳು ದಾಖಲಾಗಿವೆ ಎನ್ನಲಾಗಿದೆ. ಇದರಿಂದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗುವ ನಿರೀಕ್ಷೆಯಿದೆ.

ಚಿನ್ನವೆಂದು ಭಾವಿಸಿ ಸರ ಕದ್ದ ಕಳ್ಳರು!:

ಈ ಘಟನೆಯಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ದುಷ್ಕರ್ಮಿಗಳು ಕಸಿದುಕೊಂಡ ಸರ ನಿಜವಾದ ಚಿನ್ನದ್ದಾಗಿರದೆ ನಕಲಿ ಸರವಾಗಿತ್ತು ಎನ್ನಲಾಗಿದೆ. ಚಿನ್ನವೆಂದು ಭಾವಿಸಿ ಸರ ಕಸಿದುಕೊಂಡ ಕಳ್ಳರು ಕೊನೆಗೆ ತಾವೇ ಮೋಸ ಹೋದಂತಾಗಿದೆ.

ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ:

ಇತ್ತೀಚಿನ ದಿನಗಳಲ್ಲಿ ಹಾಡಹಗಲೇ ನಡೆಯುತ್ತಿರುವ ಸರಗಳ್ಳತನದಂತಹ ಘಟನೆಗಳು ಸಾರ್ವಜನಿಕರಲ್ಲಿ, ವಿಶೇಷವಾಗಿ ವೃದ್ಧ ಮಹಿಳೆಯರಲ್ಲಿ ಆತಂಕ ಮೂಡಿಸುತ್ತಿವೆ. ಒಂಟಿಯಾಗಿ ಸಂಚರಿಸುವ ಮಹಿಳೆಯರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಘಟನೆಯ ಕುರಿತು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

You may also like

News

SIGNIS Karnataka Charts New Path for Catholic Communication in AI Era; Felicitates SIGNIS Asia President Fr Victor Vijay Lobo

Exploring the changing dimensions of communication in the digital age and reaffirming the importance of human values in an increasingly
News

ಪೋಷಕರನ್ನು ಕಳೆದುಕೊಂಡ ಮಕ್ಕಳ ಬದುಕಿಗೆ ಸರ್ಕಾರದ ಆಸರೆಯ ಬೆಳಕು – ಶಿಕ್ಷಣದಿಂದ ಆರ್ಥಿಕ ನೆರವಿನವರೆಗೆ ಹಲವು ಸೌಲಭ್ಯ

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ಮಾಹಿತಿ ಮಂಗಳೂರು: ಕೋವಿಡ್ ಮಹಾಮಾರಿಯ ಕರಾಳ ಛಾಯೆಯಲ್ಲಿ ತಂದೆ-ತಾಯಿ ಅಥವಾ ಒಬ್ಬ ಪೋಷಕರನ್ನು

You cannot copy content of this page