ಪೋಷಕರನ್ನು ಕಳೆದುಕೊಂಡ ಮಕ್ಕಳ ಬದುಕಿಗೆ ಸರ್ಕಾರದ ಆಸರೆಯ ಬೆಳಕು – ಶಿಕ್ಷಣದಿಂದ ಆರ್ಥಿಕ ನೆರವಿನವರೆಗೆ ಹಲವು ಸೌಲಭ್ಯ
ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ಮಾಹಿತಿ

ಮಂಗಳೂರು: ಕೋವಿಡ್ ಮಹಾಮಾರಿಯ ಕರಾಳ ಛಾಯೆಯಲ್ಲಿ ತಂದೆ-ತಾಯಿ ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡು ಅನಾಥತೆ ಹಾಗೂ ಅನಿಶ್ಚಿತತೆಯ ನಡುವೆ ಬದುಕುತ್ತಿರುವ ಮಕ್ಕಳಿಗೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ಆಸರೆಯಾಗಿದೆ. ಆರ್ಥಿಕ ನೆರವಿನಿಂದ ಹಿಡಿದು ಉಚಿತ ಶಿಕ್ಷಣ, ಉನ್ನತ ವಿದ್ಯಾಭ್ಯಾಸ, ಕೌಶಲ್ಯ ಅಭಿವೃದ್ಧಿ ಹಾಗೂ ಪುನರ್ವಸತಿಯವರೆಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮಕ್ಕಳ ಭವಿಷ್ಯ ಭದ್ರಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಪಿ.ಎಂ. ಕೇರ್ಸ್ ಫಾರ್ ಚಿಲ್ಡ್ರನ್ ಸೇರಿದಂತೆ ವಿವಿಧ ಯೋಜನೆಗಳು ನೆರವಾಗುತ್ತಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ಅವರು ತಿಳಿಸಿದ್ದಾರೆ.
ಅವರು ನವಂಬರ್ 12ರಂದು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಮತ್ತು ಮಕ್ಕಳ ರಕ್ಷಣಾ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.



ತಿಂಗಳಿಗೆ ₹3,500 ಆರ್ಥಿಕ ನೆರವು:
ಕೋವಿಡ್-19 ಕಾರಣದಿಂದ ಇಬ್ಬರು ಪೋಷಕರನ್ನು ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು ತಲಾ ₹3,500 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಮಗು ಮತ್ತು ಮಗುವಿನ ಕಾನೂನುಬದ್ಧ ಪೋಷಕರ ಜಂಟಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯಡಿ ಇದುವರೆಗೆ 11 ಮಕ್ಕಳು ಸೌಲಭ್ಯ ಪಡೆಯಲು ನೋಂದಾಯಿಸಿಕೊಂಡಿದ್ದಾರೆ.
ಹತ್ತು ವರ್ಷದೊಳಗಿನ ಮಕ್ಕಳ ಪಾಲನೆಗೆ ವಿಸ್ತೃತ ಕುಟುಂಬದ ಸದಸ್ಯರು ಲಭ್ಯವಿಲ್ಲದಿದ್ದರೆ, ಅಂತಹ ಮಕ್ಕಳನ್ನು ರಕ್ಷಣೆ ಮತ್ತು ಪಾಲನೆಗಾಗಿ ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಿಸಲಾಗುತ್ತದೆ. ರಾಜ್ಯ ಸರ್ಕಾರದ ಮಾದರಿ ವಸತಿ ಶಾಲೆಗಳಲ್ಲಿ ಲಭ್ಯವಿರುವ ತರಗತಿಗಳಿಗೆ ಯಾವುದೇ ಪ್ರವೇಶ ಪರೀಕ್ಷೆಯಿಲ್ಲದೆ ನೇರ ಪ್ರವೇಶ ಕಲ್ಪಿಸಿ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.
SSLC ಪೂರ್ಣಗೊಳಿಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್ಟಾಪ್ ಅಥವಾ ಟ್ಯಾಬ್ ವಿತರಿಸಲಾಗುತ್ತದೆ. ಹೆಣ್ಣು ಮಕ್ಕಳಿಗೆ 21 ವರ್ಷ ಪೂರ್ಣಗೊಂಡ ಬಳಿಕ ವಿವಾಹ, ಉನ್ನತ ಶಿಕ್ಷಣ ಅಥವಾ ಸ್ವಯಂ ಉದ್ಯೋಗಕ್ಕಾಗಿ ತಲಾ ₹1 ಲಕ್ಷ ಆರ್ಥಿಕ ನೆರವು ನೀಡುವ ಸೌಲಭ್ಯವೂ ಇದೆ ಎಂದು ಅವರು ವಿವರಿಸಿದರು.



29 ಮಕ್ಕಳಿಗೆ ಪುನರ್ವಸತಿ ನೆರವು:
ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾಗಿ 18 ವರ್ಷ ಮೀರಿದ ಅರ್ಹ ಮಕ್ಕಳಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗುವವರೆಗೆ ಅಥವಾ ಗರಿಷ್ಠ ಮೂರು ವರ್ಷಗಳ ಅವಧಿಗೆ ಮಾಸಿಕ ₹5,000 ನೆರವು ನೀಡಲಾಗುತ್ತದೆ. ಉಪಕಾರ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ಫಲಾನುಭವಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ದತ್ತು ಸ್ವೀಕಾರಕ್ಕೆ ಕಾನೂನುಬದ್ಧ ಪ್ರಕ್ರಿಯೆ ಕಡ್ಡಾಯ:
ಮಕ್ಕಳ ಹಿತದೃಷ್ಟಿಯಿಂದ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಕಾನೂನು ನಿಯಮಗಳ ಬಗ್ಗೆಯೂ ರಶ್ಮಿ ನೆಕ್ರಾಜೆ ಮಾಹಿತಿ ನೀಡಿದರು. ದಂಪತಿ ಅಥವಾ ಏಕ ಪೋಷಕರು ಮಕ್ಕಳನ್ನು ದತ್ತು ಪಡೆಯಲು ಅವಕಾಶವಿದೆ. ಮಲತಂದೆ ಅಥವಾ ಮಲತಾಯಿ ಕೂಡ ತಮ್ಮ ಹಿಂದಿನ ವಿವಾಹದಿಂದ ಜನಿಸಿದ ಮಗುವನ್ನು ಕಾನೂನುಬದ್ಧವಾಗಿ ದತ್ತು ಪಡೆಯುವುದು ಅಗತ್ಯವಾಗಿದೆ.
ಮಗುವಿನ ತಂದೆ ಅಥವಾ ತಾಯಿಯ ಸಹೋದರ, ಸಹೋದರಿ ಹಾಗೂ ತಾತ-ಅಜ್ಜಿಯಂತಹ ಕಾನೂನಿನಲ್ಲಿ ಗುರುತಿಸಲ್ಪಟ್ಟ ಸಂಬಂಧಿಕರೂ ಮಗುವನ್ನು ದತ್ತು ಪಡೆಯಬಹುದು. ಇದಕ್ಕೆ ಜೈವಿಕ ಪೋಷಕರ ಒಪ್ಪಿಗೆ, ಸಂಬಂಧದ ಪುರಾವೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಗದಿತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ದತ್ತು ನಿಯಮಾವಳಿಗಳ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ದತ್ತು ಆದೇಶ ಪಡೆದ ಬಳಿಕವೇ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ವಿವರಿಸಿದರು.


15 ಮಕ್ಕಳಿಗೆ ಪೋಷಕತ್ವ ಯೋಜನೆಯ ಆಸರೆ:
ಕುಟುಂಬದೊಂದಿಗೆ ಪುನಃ ಸೇರ್ಪಡೆಗೊಳ್ಳಲು ಸಾಧ್ಯವಾಗದ 7ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪೋಷಕತ್ವ ಯೋಜನೆಯ ಮೂಲಕ ಪರ್ಯಾಯ ಕುಟುಂಬದ ವಾತಾವರಣದಲ್ಲಿ ಬೆಳೆಯಲು ಅವಕಾಶ ಕಲ್ಪಿಸಲಾಗುತ್ತದೆ. ಜೈವಿಕ ಪೋಷಕರಲ್ಲದ ಕುಟುಂಬಗಳು ಇಂತಹ ಮಕ್ಕಳ ಆರೈಕೆ, ಆರೋಗ್ಯ ಹಾಗೂ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತವೆ. ಮಕ್ಕಳ ರಕ್ಷಣಾ ಘಟಕವು ನಿರಂತರ ಮೇಲ್ವಿಚಾರಣೆ ನಡೆಸುತ್ತದೆ. ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಮಕ್ಕಳು ಸೇರ್ಪಡೆಯಾಗಿದ್ದಾರೆ. ಪೋಷಕತ್ವ ಮತ್ತು ದತ್ತು ಸ್ವೀಕಾರ ಎರಡೂ ವಿಭಿನ್ನ ಕಾನೂನು ಪ್ರಕ್ರಿಯೆಗಳಾಗಿದ್ದು, ಪೋಷಕತ್ವದಡಿ ಮಗುವನ್ನು ಆರೈಕೆ ಮಾಡುವ ಕುಟುಂಬಕ್ಕೆ ಮುಂದಿನ ಹಂತದಲ್ಲಿ ಕಾನೂನುಬದ್ಧವಾಗಿ ದತ್ತು ಪಡೆಯುವ ಅವಕಾಶವೂ ಇರುತ್ತದೆ ಎಂದು ತಿಳಿಸಿದರು.

503 ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯ ನೆರವಿನ ನಿರೀಕ್ಷೆ:
ಪೋಷಕರಿಲ್ಲದ ಅಥವಾ ವಿವಿಧ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾಗಿರುವ ಮಕ್ಕಳನ್ನು ಮಕ್ಕಳ ಪಾಲನಾ ಸಂಸ್ಥೆಗಳ ವಾತಾವರಣದಿಂದ ದೂರವಿಟ್ಟು ಕುಟುಂಬದ ಪ್ರೀತಿ, ಮಮತೆ ಹಾಗೂ ಸುರಕ್ಷತೆಯಲ್ಲಿ ಬೆಳೆಸುವ ಉದ್ದೇಶದಿಂದ ಪ್ರಾಯೋಜಕತ್ವ ಕಾರ್ಯಕ್ರಮ ಜಾರಿಯಲ್ಲಿದೆ. ಈ ಯೋಜನೆಯಡಿ ಅರ್ಹ ಮಗುವಿಗೆ ಮಾಸಿಕ ₹4,000 ಆರ್ಥಿಕ ನೆರವು ನೀಡಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 503 ಮಕ್ಕಳನ್ನು ಈ ಯೋಜನೆಯಡಿ ಫಲಾನುಭವಿಗಳನ್ನಾಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2025ರಲ್ಲಿ 1,035 ಮಕ್ಕಳು ಹಾಗೂ 2024ರಲ್ಲಿ 176 ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದರು ಎಂದು ರಶ್ಮಿ ಅಶೋಕ್ ನೆಕ್ರಾಜೆ ಮಾಹಿತಿ ನೀಡಿದರು.


ಮಕ್ಕಳು ಶೋಷಣೆ, ನಿರ್ಲಕ್ಷ್ಯ ಹಾಗೂ ಅಸುರಕ್ಷಿತ ವಾತಾವರಣಕ್ಕೆ ತುತ್ತಾಗದಂತೆ ತಡೆಯುವುದು, ಅವರಿಗೆ ಕುಟುಂಬದ ಪ್ರೀತಿ ಮತ್ತು ಭದ್ರತೆಯನ್ನು ಒದಗಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ. ಅರ್ಹ ಮಕ್ಕಳು ಹಾಗೂ ಕುಟುಂಬಗಳು ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಹರೀಶ್ ರೈ ಹಾಗೂ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




