November 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

NITK 24ನೇ ಘಟಿಕೋತ್ಸವದಲ್ಲಿ ಸಾಧನೆಯ ಸಂಭ್ರಮ – 1,986 ಪದವಿಗಳ ಪ್ರದಾನ

46 ಪ್ರತಿಭಾವಂತರಿಗೆ ಚಿನ್ನದ ಪದಕ – ಭಾರತದ ಭವಿಷ್ಯ ರೂಪಿಸಲು ಯುವ ಇಂಜಿನಿಯರ್‌ಗಳಿಗೆ ಗಣ್ಯರ ಕರೆ

ಜ್ಞಾನ, ಪರಿಶ್ರಮ, ಸಾಧನೆ ಮತ್ತು ಹೊಸ ಕನಸುಗಳ ಸಂಭ್ರಮಕ್ಕೆ ಸಾಕ್ಷಿಯಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (NITK), ಸುರತ್ಕಲ್‌ನ 24ನೇ ವಾರ್ಷಿಕ ಘಟಿಕೋತ್ಸವವು ಇಂದು ನವಂಬರ್ 14ರಂದು ಶನಿವಾರ ಸಂಸ್ಥೆಯ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಉನ್ನತ ಶಿಕ್ಷಣದ ಹಂತವನ್ನು ಯಶಸ್ವಿಯಾಗಿ ಪೂರೈಸಿ ವೃತ್ತಿಜೀವನದ ಹೊಸ ಪಯಣಕ್ಕೆ ಸಜ್ಜಾದ ವಿದ್ಯಾರ್ಥಿಗಳ ಪಾಲಿಗೆ ಇದು ಸ್ಮರಣೀಯ ಕ್ಷಣವಾಗಿದ್ದು, ಒಟ್ಟು 1,986 ಪದವಿಗಳನ್ನು ಪ್ರದಾನ ಮಾಡುವ ಮೂಲಕ ಸಂಸ್ಥೆಯ ಶೈಕ್ಷಣಿಕ ಸಾಧನೆಯ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಾಗಿದೆ.

ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ (INAE) ಅಧ್ಯಕ್ಷರು ಹಾಗೂ ಇನ್-ಸ್ಪೇಸ್ (IN-SPACe) ಮಂಡಳಿ ಸದಸ್ಯರಾದ ಜೆ.ಡಿ. ಪಾಟೀಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. NITK ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ಮುರುಗಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಪ್ರೊ. ಬಿ. ರವಿ, ಉಪನಿರ್ದೇಶಕ ಪ್ರೊ. ಸುಭಾಷ್ ಸಿ. ಯಾರಗಲ್, ಆಡಳಿತ ಮಂಡಳಿ ಮತ್ತು ಸೆನೆಟ್ ಸದಸ್ಯರು ಉಪಸ್ಥಿತರಿದ್ದರು.

ಎರಡು ಅಧಿವೇಶನಗಳಲ್ಲಿ ನಡೆದ ಘಟಿಕೋತ್ಸವದಲ್ಲಿ ಪೂರ್ವಾಹ್ನ ಸ್ನಾತಕೋತ್ತರ ಹಾಗೂ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮತ್ತು ಅಪರಾಹ್ನ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಒಟ್ಟು 967 ಬಿ.ಟೆಕ್., 680 ಎಂ.ಟೆಕ್., 12 ಎಂ.ಟೆಕ್. (ರಿಸರ್ಚ್), 66 ಎಂಸಿಎ, 74 ಎಂಬಿಎ, 68 ಎಂ.ಎಸ್ಸಿ. ಹಾಗೂ 119 ಪಿಎಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಯಿತು. ಶೈಕ್ಷಣಿಕ ಸಾಧನೆಯಲ್ಲಿ ಅತ್ಯುತ್ತಮ ಪ್ರತಿಭೆ ಮೆರೆದ 11 ಬಿ.ಟೆಕ್. ಹಾಗೂ 35 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 46 ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಸಂಸ್ಥೆಗಳ ಪ್ರಾಯೋಜಿತ ಪದಕಗಳನ್ನು ನೀಡಿ ಗೌರವಿಸಲಾಯಿತು.

ಭಾರತದ ಅಭಿವೃದ್ಧಿಗೆ ಯುವಶಕ್ತಿಯ ಕೊಡುಗೆ ಅಗತ್ಯ – ಎಂ.ಎಂ. ಮುರುಗಪ್ಪನ್:

ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ಮುರುಗಪ್ಪನ್, ಪದವೀಧರರು, ಪೋಷಕರು ಮತ್ತು ಅಧ್ಯಾಪಕರನ್ನು ಅಭಿನಂದಿಸಿ, “ಕಲಿಕೆ ಎನ್ನುವುದು ಪದವಿ ಪಡೆಯುವುದರೊಂದಿಗೆ ಮುಗಿಯುವ ಪ್ರಕ್ರಿಯೆಯಲ್ಲ; ಅದು ಜೀವನಪರ್ಯಂತ ಮುಂದುವರಿಯಬೇಕಾದ ಪಯಣ ಎಂದು ಅಭಿಪ್ರಾಯಪಟ್ಟರು. ತರಗತಿಯ ನಾಲ್ಕು ಗೋಡೆಗಳಾಚೆ ಪಡೆಯುವ ಅನುಭವ ಮತ್ತು ಜ್ಞಾನವು ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತದೆ” ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಎನ್ಐಟಿಕೆ ರೂಪಿಸಿರುವ ಐಡಿಯಾ ಫ್ಯಾಕ್ಟರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿಗಳ ಉದ್ಯಾನ (STEP) ಸೌಲಭ್ಯಗಳನ್ನು ಉಲ್ಲೇಖಿಸಿದ ಅವರು, ಈವರೆಗೆ 150ಕ್ಕೂ ಹೆಚ್ಚು ಕಂಪನಿಗಳು ಸಂಸ್ಥೆಯ ಮೂಲಕ ಪೋಷಣೆ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿಗಳ ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಸಂಸ್ಥೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಜಾಗತಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಭಾರತ ದೃಢವಾಗಿ ಮುನ್ನಡೆಯುತ್ತಿದೆ. ದೇಶದ ಮುಂದಿನ ಬೆಳವಣಿಗೆಗೆ ಯುವ ಪದವೀಧರರ ಶಕ್ತಿ, ಉತ್ಸಾಹ ಮತ್ತು ಸೃಜನಶೀಲತೆ ಅತ್ಯಗತ್ಯ. ಜಗತ್ತು ನಿಮ್ಮ ಮುಂದೆ ಅಪಾರ ಅವಕಾಶಗಳನ್ನು ತೆರೆದಿಟ್ಟಿದೆ. ಅವುಗಳನ್ನು ಗುರುತಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕೃತಕ ಬುದ್ಧಿಮತ್ತೆಯ ಕುರಿತು ಮಾತನಾಡಿದ ಅವರು, AI ಅನ್ನು ಅಪಾಯವಾಗಿ ನೋಡುವ ಬದಲು ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದರು. ಆದರೆ ತಂತ್ರಜ್ಞಾನದಿಂದ ಮಾನವನ ತೀರ್ಮಾನಶಕ್ತಿ, ನೈತಿಕ ಚಿಂತನೆ, ವಿಶ್ವಾಸ ಗಳಿಸುವ ಸಾಮರ್ಥ್ಯ ಮತ್ತು ಮಾನವೀಯ ಗುಣಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ತಂತ್ರಜ್ಞಾನವನ್ನು ಮಾನವ ಕಲ್ಯಾಣ ಹಾಗೂ ಪರಿಸರ ಸಂರಕ್ಷಣೆಗೆ ಬಳಸಿಕೊಂಡು ವಿನಯ, ನಿಷ್ಠೆ ಮತ್ತು ದೃಢಸಂಕಲ್ಪದೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಪದವೀಧರರಿಗೆ ಸಲಹೆ ನೀಡಿದರು.

ವೃತ್ತಿಜೀವನ ಹೊಸ ಜನ್ಮವಿದ್ದಂತೆ – ಜೆ.ಡಿ. ಪಾಟೀಲ್:

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಡಿ. ಪಾಟೀಲ್ ಅವರು ಘಟಿಕೋತ್ಸವ ಭಾಷಣದಲ್ಲಿ “ವಿದ್ಯಾರ್ಥಿ ಜೀವನದಿಂದ ವೃತ್ತಿಪರ ಬದುಕಿಗೆ ಕಾಲಿಡುವ ಹಂತವನ್ನು ಹೊಸ ಜನ್ಮಕ್ಕೆ ಹೋಲಿಸಿದರು. ಪೋಷಕರಿಂದ ದೊರೆತ ಮೊದಲ ಜನ್ಮ, ಶಿಕ್ಷಣದ ಮೂಲಕ ದೊರೆತ ಎರಡನೇ ಜನ್ಮದ ನಂತರ, ಇದೀಗ ವಿದ್ಯಾರ್ಥಿಯಿಂದ ವೃತ್ತಿಪರನಾಗುವ ಮೂರನೇ ಹೊಸ ಹಂತಕ್ಕೆ ಪದವೀಧರರು ಪ್ರವೇಶಿಸುತ್ತಿದ್ದಾರೆ” ಎಂದು ವಿಶ್ಲೇಷಿಸಿದರು.

“ನೈಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಸಿದ್ಧ ಉತ್ತರಗಳ ಕೈಪಿಡಿ ಇರುವುದಿಲ್ಲ. ಪ್ರತಿಯೊಂದು ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ನೀವೇ ಬೆಳೆಸಿಕೊಳ್ಳಬೇಕು,” ಎಂಬ ಅವರ ಮಾತು ಪದವೀಧರರಿಗೆ ವಾಸ್ತವ ಬದುಕಿನ ಸವಾಲುಗಳನ್ನು ನೆನಪಿಸಿತು.

ವಿದ್ಯಾರ್ಥಿ ಜೀವನದಲ್ಲಿ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯುವ ಅವಕಾಶವಿದ್ದರೆ, ವೃತ್ತಿಜೀವನದಲ್ಲಿ ವಿವಿಧ ಕ್ಷೇತ್ರಗಳ ಜ್ಞಾನ ಮತ್ತು ಕೌಶಲ್ಯಗಳನ್ನು ಸಮನ್ವಯಗೊಳಿಸಿ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು. ಮುಂದಿನ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆ ಹಲವು ಪಟ್ಟು ಬೆಳೆಯುವ ನಿರೀಕ್ಷೆಯಿದ್ದು, ಆ ಬೆಳವಣಿಗೆಯಲ್ಲಿ ಇಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿರಲಿದೆ ಎಂದರು.

 

ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ತಂತ್ರಜ್ಞಾನ ಮತ್ತು ಗುರಿನಿರ್ದಿಷ್ಟ ಔಷಧ ವಿತರಣೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ. ಯುವ ಇಂಜಿನಿಯರ್‌ಗಳು ಇಂತಹ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಆತ್ಮನಿರ್ಭರತೆ ಎಂದರೆ ನಮ್ಮ ಭವಿಷ್ಯದ ಮೇಲೆ ನಾವೇ ನಿಯಂತ್ರಣ ಹೊಂದುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ದೇಶದ ಕಾರ್ಯತಂತ್ರದ ತಂತ್ರಜ್ಞಾನಗಳು ಮತ್ತು ಡಿಜಿಟಲ್ ವ್ಯವಸ್ಥೆಗಳು ಸ್ವಾವಲಂಬಿಯಾಗಿರುವುದು ಅತ್ಯಗತ್ಯ ಎಂದು ಅವರು ಒತ್ತಿಹೇಳಿದರು. ಭಾರತ-2047ರ ಕನಸನ್ನು ನನಸು ಮಾಡುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ತಮ್ಮ ಮುಂದಿರುವ ಸುಮಾರು 50 ವರ್ಷಗಳ ಉತ್ಪಾದಕ ಜೀವನವನ್ನು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿಸಬೇಕು ಎಂದು ಸಲಹೆ ನೀಡಿದರು.

ನವೀನ ಪಠ್ಯಕ್ರಮ, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನೆಯಲ್ಲಿ ಎನ್ಐಟಿಕೆ ಸಾಧನೆ:

ಸಂಸ್ಥೆಯ ನಿರ್ದೇಶಕ ಪ್ರೊ. ಬಿ. ರವಿ ಅವರು ವಾರ್ಷಿಕ ವರದಿ ಮಂಡಿಸಿ, ಮೂಲಸೌಕರ್ಯ ಅಭಿವೃದ್ಧಿ, ಅಧ್ಯಾಪಕ ವೃಂದ, ಸಂಶೋಧನೆ, ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂಸ್ಥೆ ಸಾಧಿಸಿರುವ ಪ್ರಗತಿಯನ್ನು ವಿವರಿಸಿದರು. ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಹೊಸ ನೀತಿಗಳು, ತರಬೇತಿ ಕಾರ್ಯಕ್ರಮಗಳು, ಪೇಟೆಂಟ್ ಅರ್ಜಿಗಳು, ತಂತ್ರಜ್ಞಾನ ಪರವಾನಗಿ ಚಟುವಟಿಕೆಗಳು ಹಾಗೂ ಎನ್ಐಟಿಕೆ ಸ್ಟಾರ್ಟ್‌ಅಪ್‌ಗಳ ಯಶಸ್ಸು ಗಮನಾರ್ಹವಾಗಿವೆ ಎಂದರು.

2026-30ರ ಬ್ಯಾಚ್‌ಗಾಗಿ ಮರುವಿನ್ಯಾಸಗೊಳಿಸಲಾದ ಬಿ.ಟೆಕ್. ಪಠ್ಯಕ್ರಮ, ಅಕ್ಟೋಬರ್ 6ರಂದು ಉದ್ಘಾಟನೆಗೊಂಡ 30 ಮಿಲಿಯನ್ ಲೀಟರ್ ಸಾಮರ್ಥ್ಯದ ನಿಟ್ಕೆರೆ (NITKere) ಮಳೆನೀರು ಕೊಯ್ಲು ವ್ಯವಸ್ಥೆ ಹಾಗೂ ಅದೇ ದಿನ ಸಂಸ್ಥೆಯ ಮುಖ್ಯ ಕಟ್ಟಡದ ಮುಂಭಾಗದಲ್ಲಿ ಅನಾವರಣಗೊಂಡ ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನವು ಈ ವರ್ಷದ ಪ್ರಮುಖ ಸಾಧನೆಗಳಾಗಿವೆ ಎಂದು ಅವರು ವಿವರಿಸಿದರು.

46 ಪ್ರತಿಭಾವಂತರಿಗೆ ಪದಕಗಳ ಗೌರವ:

ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅತ್ಯಧಿಕ ಸಿಜಿಪಿಎ ಗಳಿಸಿ ಸಾಧನೆ ಮೆರೆದ 46 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ವಿವಿಧ ಸಂಸ್ಥೆಗಳ ಪ್ರಾಯೋಜಿತ ಪದಕಗಳನ್ನು ಪ್ರದಾನ ಮಾಡಲಾಯಿತು. ಇವರಲ್ಲಿ 11 ಮಂದಿ ಬಿ.ಟೆಕ್. ವಿದ್ಯಾರ್ಥಿಗಳು ಮತ್ತು 35 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದ್ದಾರೆ. ಮುಖ್ಯ ಅತಿಥಿ ಜೆ.ಡಿ. ಪಾಟೀಲ್ ಹಾಗೂ ನಿರ್ದೇಶಕ ಪ್ರೊ. ಬಿ. ರವಿ ಅವರು ಪದಕಗಳನ್ನು ವಿತರಿಸಿ ಪ್ರತಿಭಾವಂತರನ್ನು ಅಭಿನಂದಿಸಿದರು.

ಪೋಷಕರ ಮೆಚ್ಚುಗೆ – ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳ ಸಂಭ್ರಮ:

ಘಟಿಕೋತ್ಸವದ ಅಂಗವಾಗಿ ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ವಿದ್ಯಾರ್ಥಿಗಳು ತಮ್ಮ ಕುಟುಂಬದವರೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಂಡು, ಸ್ನೇಹಿತರೊಂದಿಗೆ ವಿದ್ಯಾರ್ಥಿ ಜೀವನದ ಸಿಹಿ ನೆನಪುಗಳನ್ನು ಹಂಚಿಕೊಂಡರು. ಸಾಧನೆಯ ಸಂತಸ, ಹೊಸ ಬದುಕಿನ ನಿರೀಕ್ಷೆ ಮತ್ತು ಅಗಲಿಕೆಯ ಭಾವನೆಗಳು ಒಂದೆಡೆ ಬೆರೆತಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಬಿ. ರವಿ, “ಪದವೀಧರರ ಮುಂದಿನ ವೃತ್ತಿಜೀವನ ಯಶಸ್ವಿಯಾಗಲಿ, ಅವರ ಬದುಕು ಅರ್ಥಪೂರ್ಣವಾಗಲಿ ಎಂದು ಹಾರೈಸಿದರು. ಎನ್ಐಟಿಕೆ ಅವರ ಮಾತೃಸಂಸ್ಥೆಯಾಗಿದ್ದು, ಅದರ ಬಾಗಿಲುಗಳು ಸದಾ ತೆರೆದಿರುತ್ತವೆ. ವಿದ್ಯಾರ್ಥಿಗಳು ಯಾವಾಗ ಬೇಕಾದರೂ ತಮ್ಮ ಎರಡನೇ ಮನೆಗೆ ಮರಳಬಹುದು” ಎಂದು ಆತ್ಮೀಯವಾಗಿ ಹೇಳಿದರು.

ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್. ಪದವಿ ಪಡೆದ ರಾಧಿಕಾ ಅವರ ತಾಯಿ, ಅಧ್ಯಾಪಕರ ಬೆಂಬಲ, ಕ್ಯಾಂಪಸ್ ನೇಮಕಾತಿ ಅವಕಾಶಗಳು ಹಾಗೂ ಪೋಷಕರಿಗಾಗಿ ಮಾಡಲಾಗಿದ್ದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪದವೀಧರ ಸುಮುಖ ಶೆಟ್ಟಿ ಅವರ ಪೋಷಕರು ಕಾರ್ಯಕ್ರಮವನ್ನು ಅತ್ಯುತ್ತಮವೆಂದು ಬಣ್ಣಿಸಿ, ಮಗನಿಗೆ ದೊರೆತ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಎನ್ಐಟಿಕೆಯ 24ನೇ ಘಟಿಕೋತ್ಸವವು ಕೇವಲ ಪದವಿ ಪ್ರದಾನದ ಸಮಾರಂಭವಾಗಿರದೆ, ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವ, ತಂತ್ರಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆಯುವ ಹಾಗೂ ಭಾರತದ ಭವಿಷ್ಯ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಹೊಸ ತಲೆಮಾರಿನ ಇಂಜಿನಿಯರ್‌ಗಳಿಗೆ ದಿಕ್ಕು ತೋರಿದ ಮಹತ್ವದ ಸಂದರ್ಭವಾಗಿ ಮೂಡಿಬಂತು.

You may also like

News

Father Muller Hospital blesses advanced Zeiss Pentero 800 S Microscope and Jayon Spine Endoscopes

Father Muller Medical College Hospital (FMMCH), a unit of Father Muller Charitable Institutions (FMCI), Kankanady, Mangaluru, blessed the newly procured
News

ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಷಡ್ಯಂತ್ರಕ್ಕೆ ಗ್ರಾಮಸ್ಥರ ಒಕ್ಕೊರಲ ಖಂಡನೆ

ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಆರೋಪ; ಕ್ಷೇತ್ರದ ಘನತೆ ರಕ್ಷಣೆಗೆ ಕಾನೂನು ಹೋರಾಟದ ಎಚ್ಚರಿಕೆ – ಶ್ರೀನಿವಾಸ ರಾವ್ ಉಜಿರೆ: ಶ್ರದ್ಧೆ, ಭಕ್ತಿ, ಧಾರ್ಮಿಕ ಸಾಮರಸ್ಯ ಹಾಗೂ ಮಾನವೀಯ

You cannot copy content of this page