ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಗೌರವ
ಶಂಶೀರ್ ಬುಡೋಳಿ, ರೋನ್ಸ್ ಬಂಟ್ವಾಳ ಮತ್ತು ರಾಜೇಶ್ ದಡ್ಡಂಗಡಿಗೆ ಪ್ರತಿಷ್ಠಿತ ಕೇರಳ–ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು/ಕಾಸರಗೋಡು: ಪತ್ರಿಕೋದ್ಯಮ, ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ಮೂವರು ಪ್ರತಿಭಾವಂತ ಸಾಧಕರಾದ ಪತ್ರಕರ್ತ, ಕವಿ, ಸಾಹಿತಿ, ಸುದ್ದಿ ನಿರೂಪಕ ಹಾಗೂ ಪಿಎಚ್‌ಡಿ ಸಂಶೋಧಕರಾದ ಶಂಶೀರ್ ಬುಡೋಳಿ, ಹಿರಿಯ ಪತ್ರಕರ್ತ ರೋನ್ಸ್ ಬಂಟ್ವಾಳ ಮತ್ತು ಡಿಡಿ ದೂರದರ್ಶನ ವರದಿಗಾರ ರಾಜೇಶ್ ದಡ್ಡಂಗಡಿ ಅವರು ಪ್ರತಿಷ್ಠಿತ ‘ಕೇರಳ–ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಬಹುಮುಖ ಪ್ರತಿಭೆಯ ಶಂಶೀರ್ ಬುಡೋಳಿ ಅವರು ಪತ್ರಿಕೋದ್ಯಮದ ಜೊತೆಗೆ ಕಾವ್ಯ, ಸಾಹಿತ್ಯ, ಸುದ್ದಿ ನಿರೂಪಣೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಅವರ ನಿರಂತರ ಪ್ರಯತ್ನ, ಸೃಜನಶೀಲತೆ ಮತ್ತು ಸಾಧನೆಗೆ ಸಂದ ಗೌರವವಾಗಿ ಈ ಪ್ರಶಸ್ತಿ ಮಹತ್ವ ಪಡೆದಿದೆ.

ಹಿರಿಯ ಪತ್ರಕರ್ತ ರೋನ್ಸ್ ಬಂಟ್ವಾಳ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ವೃತ್ತಿಪರ ಬದ್ಧತೆಗೆ ಈ ಪ್ರಶಸ್ತಿಯ ಮೂಲಕ ಗೌರವ ದೊರೆತಿದೆ. ಅದೇ ರೀತಿ, ಡಿಡಿ ದೂರದರ್ಶನ ವರದಿಗಾರ ರಾಜೇಶ್ ದಡ್ಡಂಗಡಿ ಅವರು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಮತ್ತು ವರದಿಗಾರಿಕೆಯ ಅನುಭವಕ್ಕಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ ವತಿಯಿಂದ ನೀಡಲಾಗುವ ಈ ಗೌರವಕ್ಕೆ ಮೂವರು ಸಾಧಕರು ಆಯ್ಕೆಯಾಗಿರುವುದು ಕರಾವಳಿಯ ಪತ್ರಿಕಾರಂಗ ಮತ್ತು ಸಾಂಸ್ಕೃತಿಕ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನವೆಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ಕೇರಳ ರಾಜ್ಯದ 8ನೇ ಕನ್ನಡ ಸಮ್ಮೇಳನ–2026 ಹಾಗೂ ಕೇರಳ–ಕರ್ನಾಟಕ ಉತ್ಸವ ನಡೆಯಲಿದೆ. ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ಸಮ್ಮೇಳನ, ಮಕ್ಕಳ ಸಾಹಿತ್ಯ ಉತ್ಸವ ಹಾಗೂ ಕೇರಳ–ಕರ್ನಾಟಕ ಭವನದ ಭೂಮಿಪೂಜೆ ಮತ್ತು ಶಿಲಾನ್ಯಾಸ ಸಮಾರಂಭ ಜರುಗಲಿದೆ.

ನವೆಂಬರ್ 29ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಂಶೀರ್ ಬುಡೋಳಿ, ರೋನ್ಸ್ ಬಂಟ್ವಾಳ ಮತ್ತು ರಾಜೇಶ್ ದಡ್ಡಂಗಡಿ ಅವರಿಗೆ ಪ್ರತಿಷ್ಠಿತ ‘ಕೇರಳ–ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


