November 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಾವಿರಾರು ಮಕ್ಕಳ ಬಾಳಿಗೆ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ಶಿಕ್ಷಕಿ ಕ್ರಿಸ್ತಿನ್ ಮಾರ್ಟಿಸ್‌ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

34 ವರ್ಷಗಳ ಸಾರ್ಥಕ ಶಿಕ್ಷಕ ಸೇವೆ – ಉಪ್ಪಾರಪಳಿಕೆ ಶಾಲೆಯಲ್ಲಿ ಸನ್ಮಾನ ಹಾಗೂ ಶಿಷ್ಯರ ಕೃತಜ್ಞತಾಪೂರ್ವಕ ನುಡಿನಮನ

ಕೊಕ್ಕಡ: ಅಕ್ಷರ ಜ್ಞಾನದ ಮೂಲಕ ಮಕ್ಕಳ ಬದುಕಿಗೆ ಬೆಳಕಾಗಿ, ಮೌಲ್ಯಯುತ ಶಿಕ್ಷಣದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಶಿಕ್ಷಕಿ ಕ್ರಿಸ್ತಿನ್ ಮಾರ್ಟಿಸ್ ಅವರ ಸೇವೆ ನಿಜಕ್ಕೂ ಸ್ಮರಣೀಯ. ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಅದನ್ನೊಂದು ಪವಿತ್ರ ಕರ್ತವ್ಯವೆಂದು ಸ್ವೀಕರಿಸಿ, ಮೂರು ದಶಕಗಳಿಗೂ ಹೆಚ್ಚು ಕಾಲ ಮಕ್ಕಳ ಬದುಕನ್ನು ರೂಪಿಸಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಆದರ್ಶ ಶಿಕ್ಷಕಿಗೆ ಉಪ್ಪಾರಪಳಿಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ಹಾಗೂ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.

34 ವರ್ಷಗಳ ಸುದೀರ್ಘ ಶಿಕ್ಷಕ ಸೇವೆಯ ಬಳಿಕ ಅಕ್ಟೋಬರ್ 31ರಂದು ಸ್ವಯಂ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಮತ್ತು ಪೋಷಕರ ಸಹಭಾಗಿತ್ವದಲ್ಲಿ ನವೆಂಬರ್ 14ರಂದು ಶಾಲೆಯ ಸಭಾಂಗಣದಲ್ಲಿ ಈ ಸಮಾರಂಭ ನಡೆಯಿತು.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸುಮಾರು 17 ವರ್ಷಗಳ ಕಾಲ ಉಪ್ಪಾರಪಳಿಕೆ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಕ್ರಿಸ್ತಿನ್ ಮಾರ್ಟಿಸ್ ಅವರು, ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಜೀವನದ ಮೌಲ್ಯಗಳನ್ನು ಬೋಧಿಸಿ, ಅವರಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಅವರು ವಹಿಸಿದ ಪಾತ್ರ ಅಪಾರ. ಅವರ ಸರಳ ವ್ಯಕ್ತಿತ್ವ, ಅಪಾರ ತಾಳ್ಮೆ, ಕರ್ತವ್ಯನಿಷ್ಠೆ ಹಾಗೂ ಮಕ್ಕಳ ಮೇಲಿನ ಮಾತೃ ಹೃದಯದ ಪ್ರೀತಿ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ಪೋಷಕರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ.

ಕಾರ್ಯಕ್ರಮದಲ್ಲಿ ಪ್ರಸ್ತುತ ಶಿಶಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸರಸ್ವತಿ ಅವರು ಕ್ರಿಸ್ತಿನ್ ಮಾರ್ಟಿಸ್ ದಂಪತಿಗೆ ಶಾಲು ಹೊದಿಸಿ, ಫಲಪುಷ್ಪ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಅವರು ಮಾತನಾಡಿ, ಕ್ರಿಸ್ತಿನ್ ಮಾರ್ಟಿಸ್ ಅವರ ಸುದೀರ್ಘ ಸೇವೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಹಾಗೂ ಶಾಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಕೊಕ್ಕಡ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಯೋಗೀಶ ಆಲಂಬಿಲ ಅವರು ನಿವೃತ್ತ ಶಿಕ್ಷಕಿಯ ಮುಂದಿನ ಜೀವನ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ವಿದ್ಯಾರ್ಥಿಗಳು, ಗೌರವ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಕ್ರಿಸ್ತಿನ್ ಮಾರ್ಟಿಸ್ ಅವರೊಂದಿಗಿನ ಒಡನಾಟ, ಮಾರ್ಗದರ್ಶನ ಹಾಗೂ ಪ್ರೀತಿಯ ನೆನಪುಗಳನ್ನು ಭಾವುಕವಾಗಿ ಮೆಲುಕು ಹಾಕಿದರು. ಗುರುವಾಗಿ ಪಾಠ ಕಲಿಸಿದ ಅವರಿಂದ ಪಡೆದ ಜ್ಞಾನ, ಪ್ರೋತ್ಸಾಹ ಮತ್ತು ಜೀವನಪಾಠಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ರಿಸ್ತಿನ್ ಮಾರ್ಟಿಸ್ ಅವರು, ತಮ್ಮ 34 ವರ್ಷಗಳ ಶಿಕ್ಷಕ ವೃತ್ತಿಯ ಪಯಣದಲ್ಲಿ ಸಹಕಾರ, ಪ್ರೋತ್ಸಾಹ ನೀಡಿದ ಶಾಲೆಯ ಆಡಳಿತ ಮಂಡಳಿ, ಸಹೋದ್ಯೋಗಿ ಶಿಕ್ಷಕರು, ಪೋಷಕರು ಹಾಗೂ ಪ್ರೀತಿಯ ವಿದ್ಯಾರ್ಥಿಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸಾವಿತ್ರಿ ಬಡೆಕೈಲು, ನಿಕಟಪೂರ್ವ ಅಧ್ಯಕ್ಷ ರಮೇಶ್ ಕುಡಾಲ ಹಾಗೂ ಕ್ರಿಸ್ತಿನ್ ಮಾರ್ಟಿಸ್ ಅವರ ಪತಿ ವಿನ್ಸೆಂಟ್ ಮಿನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಭಾರ ಮುಖ್ಯಶಿಕ್ಷಕ ಯಶವಂತ ಅವರು ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಂದೀಪ್ ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮೂರು ದಶಕಗಳಿಗೂ ಹೆಚ್ಚು ಕಾಲ ಜ್ಞಾನದ ದೀಪವಾಗಿ ಬೆಳಗಿ, ಸಾವಿರಾರು ಮಕ್ಕಳ ಬದುಕಿಗೆ ದಾರಿದೀಪವಾದ ಕ್ರಿಸ್ತಿನ್ ಮಾರ್ಟಿಸ್ ಅವರ ಶಿಕ್ಷಕ ಸೇವೆ ನಿವೃತ್ತಿಯೊಂದಿಗೆ ಮುಕ್ತಾಯಗೊಂಡರೂ, ಅವರು ಬಿತ್ತಿದ ಜ್ಞಾನದ ಬೀಜಗಳು ಅನೇಕ ವಿದ್ಯಾರ್ಥಿಗಳ ಬದುಕಿನಲ್ಲಿ ಸದಾ ಫಲ ನೀಡುತ್ತಲೇ ಇರುತ್ತವೆ. ಒಬ್ಬ ಶಿಕ್ಷಕಿಯ ನಿಜವಾದ ಸಾಧನೆ ಆಕೆ ಗಳಿಸಿದ ಹುದ್ದೆಯಲ್ಲಲ್ಲ, ಆಕೆಯಿಂದ ರೂಪುಗೊಂಡ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಅಡಗಿದೆ ಎಂಬುದಕ್ಕೆ ಕ್ರಿಸ್ತಿನ್ ಮಾರ್ಟಿಸ್ ಅವರ ಸೇವೆಯೇ ಸಾಕ್ಷಿ.

 

You may also like

News

Deloitte Enters Mangaluru Strengthens City’s ‘Silicon Beach’ Dreams

Global giant sets up 300-seat, 18,000 sq. ft. office at wrkwrk Triangle opening new career opportunities for Coastal Karnataka’s talent.
News

ಹೃದಯಾಘಾತದಿಂದ ಸಾವು ತಡೆಗೆ ಮಹತ್ವದ ಹೆಜ್ಜೆ 31 ಜಿಲ್ಲೆಗಳಿಗೆ ‘ಹೃದಯ ಜ್ಯೋತಿ’ ವಿಸ್ತರಣೆ ಚಿಂತನೆ – ಸಚಿವ ಯು.ಟಿ. ಖಾದರ್

ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಹಾಗೂ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಡಾ. ಪುನೀತ್ ರಾಜ್‌ಕುಮಾರ್ ಹೃದಯ

You cannot copy content of this page