November 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾನೂನುಬದ್ಧ ದತ್ತು ಸ್ವೀಕಾರವೇ ಮಗುವಿಗೆ ಹೊಸ ಬದುಕು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 192 ಮಕ್ಕಳ ದತ್ತು ಸ್ವೀಕಾರ; ದೇಶದೊಳಗೆ 187, ವಿದೇಶಗಳಿಗೆ 5 ಮಕ್ಕಳ ಹಸ್ತಾಂತರ – ದತ್ತು ಪಡೆಯಲು ಅನುಸರಿಸಬೇಕಾದ ನಿಯಮಗಳು, ಅರ್ಹತೆ ಮತ್ತು ಸಂಪರ್ಕ ವಿವರಗಳು

ಮಂಗಳೂರು: ಮಗುವಿಲ್ಲದ ದಂಪತಿಗಳಿಗೆ ಮಗುವಿನ ಪ್ರೀತಿ ಮತ್ತು ಪೋಷಕತ್ವದ ಅನುಭವ ನೀಡುವುದರ ಜೊತೆಗೆ, ಪೋಷಕರ ಪ್ರೀತಿ ಹಾಗೂ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ಹೊಸ ಕುಟುಂಬ ಮತ್ತು ಭದ್ರವಾದ ಭವಿಷ್ಯ ಕಲ್ಪಿಸುವ ಮಹತ್ವದ ಮಾನವೀಯ ಕಾರ್ಯವೇ ದತ್ತು ಸ್ವೀಕಾರ. ಆದರೆ ಮಗುವನ್ನು ದತ್ತು ಪಡೆಯುವುದು ಕೇವಲ ಒಂದು ಕುಟುಂಬದ ವೈಯಕ್ತಿಕ ನಿರ್ಧಾರವಲ್ಲ. ಅದು ಮಗುವಿನ ಹಕ್ಕು, ಸುರಕ್ಷತೆ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಜವಾಬ್ದಾರಿಯುತ ಕಾನೂನು ಪ್ರಕ್ರಿಯೆಯಾಗಿದೆ.

ಮಗುವನ್ನು ದತ್ತು ಪಡೆಯಲು ಇಚ್ಛಿಸುವವರು ಕಾನೂನುಬದ್ಧ ಮಾರ್ಗವನ್ನೇ ಅನುಸರಿಸಬೇಕು. ಪರಿಚಯಸ್ಥರು, ಮಧ್ಯವರ್ತಿಗಳು ಅಥವಾ ಖಾಸಗಿ ವ್ಯಕ್ತಿಗಳ ಮೂಲಕ ಕಾನೂನು ಪ್ರಕ್ರಿಯೆ ಬದಿಗೊತ್ತಿ ಮಗುವನ್ನು ಪಡೆಯುವುದು ಅಪಾಯಕಾರಿ ಮಾತ್ರವಲ್ಲ, ಕಾನೂನುಬಾಹಿರವೂ ಆಗಬಹುದು. ಆದ್ದರಿಂದ ದತ್ತು ಸ್ವೀಕಾರದ ನಿಯಮಗಳು, ಅರ್ಹತೆ, ಪ್ರಕ್ರಿಯೆ ಮತ್ತು ಸಂಬಂಧಿತ ಇಲಾಖೆಗಳ ಮಾಹಿತಿ ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 192 ಮಕ್ಕಳ ದತ್ತು ಸ್ವೀಕಾರ:

ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 192 ಮಕ್ಕಳನ್ನು ದತ್ತು ನೀಡಲಾಗಿದೆ. ಈ ಪೈಕಿ 187 ಮಕ್ಕಳು ದೇಶದೊಳಗಿನ ಕುಟುಂಬಗಳಿಗೆ ದತ್ತು ಹೋಗಿದ್ದರೆ, 5 ಮಕ್ಕಳು ವಿದೇಶದ ಕುಟುಂಬಗಳಿಗೆ ದತ್ತು ನೀಡಲ್ಪಟ್ಟಿದ್ದಾರೆ.

ವಿದೇಶಗಳಿಗೆ ದತ್ತು ನೀಡಲಾದ ಐದು ಮಕ್ಕಳ ವಿವರ ಹೀಗಿದೆ: ಸ್ಪೇನ್ – 1 ಮಗು, ಇಟಲಿ – 2 ಮಕ್ಕಳು, ಅಮೆರಿಕ – 1 ಮಗು, ಕೆನಡಾ – 1 ಮಗು.

ಈ ಅಂಕಿಅಂಶಗಳು ದತ್ತು ಸ್ವೀಕಾರದ ಮೂಲಕ ಮಕ್ಕಳಿಗೆ ದೇಶದೊಳಗೆ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೊಸ ಕುಟುಂಬ ಮತ್ತು ಜೀವನಾವಕಾಶ ದೊರೆಯುತ್ತಿರುವುದನ್ನು ತೋರಿಸುತ್ತವೆ.

ದತ್ತು ಸ್ವೀಕಾರಕ್ಕೆ ಯಾವ ಕಾನೂನು ಅನ್ವಯಿಸುತ್ತದೆ?

ಭಾರತದಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯು ಮುಖ್ಯವಾಗಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ಹಾಗೂ ದತ್ತು ಸ್ವೀಕಾರ ನಿಯಮಾವಳಿ, 2022ರ ಅಡಿಯಲ್ಲಿ ನಡೆಯುತ್ತದೆ.

ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA – Central Adoption Resource Authority) ದೇಶದ ದತ್ತು ಸ್ವೀಕಾರ ಪ್ರಕ್ರಿಯೆಯನ್ನು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾಗಿದೆ. ದತ್ತು ಪಡೆಯಲು ಬಯಸುವ ಅರ್ಹ ಪೋಷಕರು CARAಯ ಅಧಿಕೃತ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಂಡು, ನಿಗದಿತ ನಿಯಮಗಳಂತೆ ಮುಂದುವರಿಯಬೇಕು.

ಕಾನೂನುಬದ್ಧ ಪ್ರಕ್ರಿಯೆಯ ಉದ್ದೇಶ ಮಗುವಿನ ಹಿತಾಸಕ್ತಿಯನ್ನು ಕಾಪಾಡುವುದು, ಮಗುವಿನ ಹಿನ್ನೆಲೆ ಮತ್ತು ಸುರಕ್ಷತೆಯನ್ನು ಪರಿಶೀಲಿಸುವುದು ಹಾಗೂ ದತ್ತು ಪಡೆಯುವ ಕುಟುಂಬದ ಅರ್ಹತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ದತ್ತು ಪಡೆಯಲು ಯಾರು ಅರ್ಹರು?

ವಿವಾಹಿತ ದಂಪತಿಗಳು ಮತ್ತು ಏಕ ಪೋಷಕರು ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮಗುವನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಬಹುದು.

  • ವಿವಾಹಿತ ದಂಪತಿಗಳಲ್ಲಿ ಸ್ಥಿರವಾದ ವೈವಾಹಿಕ ಸಂಬಂಧ ಇರಬೇಕು. ಸಾಮಾನ್ಯವಾಗಿ ಕನಿಷ್ಠ ಎರಡು ವರ್ಷಗಳ ಸ್ಥಿರ ವೈವಾಹಿಕ ಜೀವನದ ಷರತ್ತು ಅನ್ವಯಿಸುತ್ತದೆ.
  • ದತ್ತು ಪಡೆಯುವ ಮಗುವಿಗೂ ಪೋಷಕರಿಗೂ ಕನಿಷ್ಠ 25 ವರ್ಷಗಳ ವಯಸ್ಸಿನ ಅಂತರ ಇರಬೇಕು.
  • ಏಕ ಮಹಿಳೆ ಮಗುವನ್ನು ದತ್ತು ಪಡೆಯಬಹುದು. ಆದರೆ ಏಕ ಪುರುಷನಿಗೆ ಹೆಣ್ಣು ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲ.
  • ಮಗುವಿನ ವಯಸ್ಸಿಗೆ ಅನುಗುಣವಾಗಿ ದತ್ತು ಪಡೆಯುವ ಪೋಷಕರ ಗರಿಷ್ಠ ವಯೋಮಿತಿಯನ್ನು ಪರಿಗಣಿಸಲಾಗುತ್ತದೆ.

ವಿವಾಹಿತ ದಂಪತಿಗಳ ವಯೋಮಿತಿ:

ದತ್ತು ಪಡೆಯುವ ಮಗುವಿನ ವಯಸ್ಸು      ಪೋಷಕರಿಬ್ಬರ ಒಟ್ಟು ಗರಿಷ್ಠ ವಯಸ್ಸು

0–2 ವರ್ಷ                                                                           85 ವರ್ಷ

2–4 ವರ್ಷ                                                                           90 ವರ್ಷ

4–8 ವರ್ಷ                                                                          100 ವರ್ಷ

8–18 ವರ್ಷ                                                                        110 ವರ್ಷ

ಏಕ ಪೋಷಕರ ಗರಿಷ್ಠ ವಯಸ್ಸು:

ದತ್ತು ಪಡೆಯುವ ಮಗುವಿನ ವಯಸ್ಸು      ಏಕ ಪೋಷಕರ ಗರಿಷ್ಠ ವಯಸ್ಸು

0–2 ವರ್ಷ                                                                    40 ವರ್ಷ

2–4 ವರ್ಷ                                                                   45 ವರ್ಷ

4–8 ವರ್ಷ                                                                   50 ವರ್ಷ

8–18 ವರ್ಷ                                                                 55 ವರ್ಷ

ದತ್ತು ಸ್ವೀಕಾರದಲ್ಲಿ ಮೂರು ಪ್ರಮುಖ ವಿಧಾನಗಳು:

  1. ಸಾಮಾನ್ಯ ದತ್ತು ಸ್ವೀಕಾರ (Regular Adoption):

ಅನಾಥ, ಪರಿತ್ಯಕ್ತ ಅಥವಾ ಕಾನೂನುಬದ್ಧವಾಗಿ ದತ್ತು ನೀಡಲು ಅರ್ಹರೆಂದು ಘೋಷಿಸಲಾದ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಯಾಗಿದೆ. ಇಂತಹ ಮಕ್ಕಳನ್ನು ದತ್ತು ನೀಡುವ ಮೊದಲು ಸಂಬಂಧಿತ ಅಧಿಕಾರಿಗಳು ಅಗತ್ಯ ಪರಿಶೀಲನೆ ನಡೆಸುತ್ತಾರೆ. ಅರ್ಹ ಪೋಷಕರು CARA ಮೂಲಕ ನೋಂದಣಿ ಮಾಡಿಕೊಂಡು ನಿಗದಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

  1. ಮಲತಾಯಿ ಅಥವಾ ಮಲತಂದೆಯಿಂದ ದತ್ತು (Step-Parent Adoption):

ವಿವಾಹದ ನಂತರ ಸಂಗಾತಿಯ ಹಿಂದಿನ ಸಂಬಂಧದಿಂದ ಜನಿಸಿದ ಮಗುವನ್ನು ಮತ್ತೊಬ್ಬ ಸಂಗಾತಿ ಕಾನೂನುಬದ್ಧವಾಗಿ ದತ್ತು ಪಡೆಯುವ ಪ್ರಕ್ರಿಯೆಯಾಗಿದೆ. ಇದರಲ್ಲಿ ಮಗುವಿನ ಹಿತಾಸಕ್ತಿ, ಅಗತ್ಯ ಒಪ್ಪಿಗೆಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯೂ CARA ನಿಯಮಾವಳಿಗಳ ಪ್ರಕಾರ ನಡೆಯಬೇಕು.

  1. ಸಂಬಂಧಿಕರಿಂದ ದತ್ತು (Relative Adoption):

ಕುಟುಂಬದ ನಿರ್ದಿಷ್ಟ ಸಂಬಂಧಿಕರು ಮಗುವನ್ನು ಕಾನೂನುಬದ್ಧವಾಗಿ ದತ್ತು ಪಡೆಯುವ ವಿಧಾನ ಇದಾಗಿದೆ. ಉದಾಹರಣೆಗೆ, ಕೆಲವು ನಿಗದಿತ ಸಂಬಂಧದ ವ್ಯಾಪ್ತಿಯಲ್ಲಿರುವ ಸಂಬಂಧಿಕರು ಮಗುವನ್ನು ದತ್ತು ಪಡೆಯಬಹುದು. ಇದಕ್ಕೂ ಬಾಲ ನ್ಯಾಯ ಕಾಯ್ದೆ ಮತ್ತು CARA ನಿಯಮಗಳ ಅಡಿಯಲ್ಲಿ ನಿಗದಿತ ಪ್ರಕ್ರಿಯೆ ಹಾಗೂ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ದತ್ತು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಮಗುವನ್ನು ದತ್ತು ಪಡೆಯಲು ಬಯಸುವವರು ಮೊದಲು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಸಂಬಂಧಿತ ಅಧಿಕಾರಿಗಳಿಂದ ಕುಟುಂಬದ ಹಿನ್ನೆಲೆ ಮತ್ತು ಅರ್ಹತೆಯ ಪರಿಶೀಲನೆಗೆ ಒಳಗಾಗಬೇಕು.

ಅರ್ಹತೆ ದೃಢಪಟ್ಟ ಬಳಿಕ ನಿಯಮಾನುಸಾರ ಮಗುವಿನ ವಿವರಗಳನ್ನು ಹಂಚಿಕೆ ಮಾಡಲಾಗುತ್ತದೆ. ಮಗುವನ್ನು ಸ್ವೀಕರಿಸುವ ಮೊದಲು ಅದರ ಆರೋಗ್ಯ ಮತ್ತು ಇತರ ಅಗತ್ಯ ಮಾಹಿತಿಯನ್ನು ಪರಿಶೀಲಿಸಲು ಅವಕಾಶವಿರುತ್ತದೆ. ನಂತರ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ದತ್ತು ಆದೇಶ ಪಡೆಯಬೇಕು.

ದತ್ತು ಸ್ವೀಕಾರದ ಪ್ರತಿಯೊಂದು ಹಂತದಲ್ಲೂ ಮಗುವಿನ ಸುರಕ್ಷತೆ, ಭಾವನಾತ್ಮಕ ಅಗತ್ಯಗಳು ಮತ್ತು ಭವಿಷ್ಯಕ್ಕೆ ಆದ್ಯತೆ ನೀಡಲಾಗುತ್ತದೆ.

ದತ್ತು ಸ್ವೀಕಾರಕ್ಕೆ ಸಂಪರ್ಕಿಸಬಹುದಾದ ಸಂಸ್ಥೆಗಳು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಕೆಳಗಿನ ಸಂಸ್ಥೆಗಳನ್ನು ಸಂಪರ್ಕಿಸಬಹುದು:

  1. ಸರ್ಕಾರಿ ವಿಶೇಷ ದತ್ತು ಸಂಸ್ಥೆ:

ಕೃಷ್ಣನಗರ, ಬೊಂದೇಲ್, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ – 575008.

ದೂರವಾಣಿ: 0824-2484547

  1. ವಾತ್ಸಲ್ಯಧಾಮ – ಮಕ್ಕಳ ದತ್ತು ಕೇಂದ್ರ (ಅಮೂಲ್ಯ):

ಶ್ರೀ ರಾಮಕೃಷ್ಣ ಸೇವಾಶ್ರಮ (ರಿ.), ನೆಲ್ಲಿಕಟ್ಟೆ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ – 574201.

ದೂರವಾಣಿ: 08251-230016 / 9482553016

  1. ಜಿಲ್ಲಾ ಮಕ್ಕಳ ರಕ್ಷಣಾ ಘಟಕ (DCPU):

ನಂ. 11, ಪ್ರಜಾ ಸೌಧ, ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರ, ಪಡೀಲ್, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ – 575007.

ದೂರವಾಣಿ: 0824-2440004

ವೆಬ್‌ಸೈಟ್: https://missionvatsalya.wcd.gov.in

ಕಾನೂನುಬಾಹಿರ ದತ್ತು ಸ್ವೀಕಾರದಿಂದ ದೂರವಿರಿ:

ಮಗುವನ್ನು ದತ್ತು ಪಡೆಯುವ ಆಸೆ ಹೊಂದಿರುವವರು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಬಾರದು. ಹಣದ ವ್ಯವಹಾರದ ಮೂಲಕ ಅಥವಾ ಅಧಿಕೃತ ಅನುಮತಿ ಇಲ್ಲದೆ ಮಗುವನ್ನು ಪಡೆಯುವುದು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ಬಾಲ ನ್ಯಾಯ ಕಾಯ್ದೆಯಡಿ ನಿಗದಿತ ಪ್ರಕ್ರಿಯೆ ಉಲ್ಲಂಘಿಸಿ ಮಗುವನ್ನು ದತ್ತು ನೀಡುವುದು ಅಥವಾ ಪಡೆಯುವುದು ಶಿಕ್ಷಾರ್ಹವಾಗಬಹುದು.

ಮಗುವಿನ ಜನನ, ಹಿನ್ನೆಲೆ, ಆರೋಗ್ಯ ಮತ್ತು ಕಾನೂನುಬದ್ಧ ಸ್ಥಿತಿಗೆ ಸಂಬಂಧಿಸಿದ ದಾಖಲೆಗಳು ಅತ್ಯಂತ ಮುಖ್ಯ. ಆದ್ದರಿಂದ ದತ್ತು ಸ್ವೀಕಾರದ ಪ್ರತಿಯೊಂದು ಹಂತವನ್ನೂ ಅಧಿಕೃತ ಸಂಸ್ಥೆಗಳ ಮೂಲಕವೇ ಪೂರ್ಣಗೊಳಿಸಬೇಕು.

ಮಗುವಿಗೆ ಕುಟುಂಬ ನೀಡುವುದು ದೊಡ್ಡ ಜವಾಬ್ದಾರಿ:

ದತ್ತು ಸ್ವೀಕಾರ ಎಂದರೆ ಮಗುವಿಗೆ ಕೇವಲ ಮನೆ ಮತ್ತು ಆಹಾರ ಒದಗಿಸುವುದಲ್ಲ. ಪ್ರೀತಿ, ಭದ್ರತೆ, ಶಿಕ್ಷಣ, ಆರೋಗ್ಯ, ಗೌರವ ಮತ್ತು ಉತ್ತಮ ಭವಿಷ್ಯವನ್ನು ನೀಡುವ ಜವಾಬ್ದಾರಿಯಾಗಿದೆ. ಮಗುವನ್ನು ಕುಟುಂಬದ ಸದಸ್ಯನಾಗಿ ಸ್ವೀಕರಿಸಿ, ಅದರ ಭಾವನೆಗಳನ್ನು ಅರ್ಥಮಾಡಿಕೊಂಡು ಬೆಳೆಸುವುದು ಪೋಷಕರ ಕರ್ತವ್ಯವಾಗಿದೆ.

ಒಂದು ಮಗುವಿಗೆ ಪ್ರೀತಿಯಿಂದ ಕೂಡಿದ ಕುಟುಂಬ ದೊರೆತರೆ, ಅದರ ಬದುಕಿನಲ್ಲಿ ಹೊಸ ಭರವಸೆ ಮೂಡಬಹುದು. ದತ್ತು ಪಡೆಯುವ ಆಸಕ್ತಿ ಹೊಂದಿರುವವರು ಕಾನೂನುಬದ್ಧ ಮಾರ್ಗವನ್ನು ಅನುಸರಿಸಿ, ಮಗುವಿನ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ಮಕ್ಕಳಿಗೆ ಸುರಕ್ಷಿತ ಬದುಕು ಮತ್ತು ಪ್ರೀತಿಯ ಕುಟುಂಬ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು.

ರಶ್ಮಿ ಕೆ.ಎಂ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

You may also like

News

Deloitte Enters Mangaluru Strengthens City’s ‘Silicon Beach’ Dreams

Global giant sets up 300-seat, 18,000 sq. ft. office at wrkwrk Triangle opening new career opportunities for Coastal Karnataka’s talent.
News

ಸಾವಿರಾರು ಮಕ್ಕಳ ಬಾಳಿಗೆ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ಶಿಕ್ಷಕಿ ಕ್ರಿಸ್ತಿನ್ ಮಾರ್ಟಿಸ್‌ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

34 ವರ್ಷಗಳ ಸಾರ್ಥಕ ಶಿಕ್ಷಕ ಸೇವೆ – ಉಪ್ಪಾರಪಳಿಕೆ ಶಾಲೆಯಲ್ಲಿ ಸನ್ಮಾನ ಹಾಗೂ ಶಿಷ್ಯರ ಕೃತಜ್ಞತಾಪೂರ್ವಕ ನುಡಿನಮನ ಕೊಕ್ಕಡ: ಅಕ್ಷರ ಜ್ಞಾನದ ಮೂಲಕ ಮಕ್ಕಳ ಬದುಕಿಗೆ ಬೆಳಕಾಗಿ,

You cannot copy content of this page