ಉಪ್ಪಿನಂಗಡಿ ಸಮೀಪದ ವಳಾಲಿನಲ್ಲಿ ಮತ್ತೊಂದು ಟೋಲ್ ಬರೆ – 38 ಕಿ.ಮೀ. ಅಂತರದಲ್ಲೇ ಹೊಸ ಸುಂಕ ವಸೂಲಿ ಆರಂಭ
ಉಪ್ಪಿನಂಗಡಿ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದೀಗ ಮತ್ತೊಂದು ಟೋಲ್ ಶುಲ್ಕದ ಬಿಸಿ ತಟ್ಟಲಿದೆ. ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಬಜತ್ತೂರು ಗ್ರಾಮದ ವಳಾಲು–ನೀರಕಟ್ಟೆ ಬಳಿ ನಿರ್ಮಿಸಲಾಗಿರುವ ಟೋಲ್ ಪ್ಲಾಝಾದಲ್ಲಿ ನವೆಂಬರ್ 26ರಿಂದ ಅಧಿಕೃತವಾಗಿ ಶುಲ್ಕ ವಸೂಲಿ ಆರಂಭವಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಕುರಿತು ನವಂಬರ್ 25ರಂದು ಬುಧವಾರ ಪ್ರಕಟಣೆ ಹೊರಡಿಸಿದ್ದು, ಇದರೊಂದಿಗೆ ಮಂಗಳೂರು–ಬೆಂಗಳೂರು ನಡುವೆ ಪ್ರಯಾಣಿಸುವ ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ವಳಾಲು–ನೀರಕಟ್ಟೆ ಮಧ್ಯೆ ಈ ಟೋಲ್ ಪ್ಲಾಝಾವನ್ನು ನಿರ್ಮಿಸಲಾಗಿದೆ. ಬಿ.ಸಿ. ರೋಡ್‌ನಿಂದ ಅಡ್ಡಹೊಳೆ, ಹಾಸನ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಇನ್ನು ಮುಂದೆ ಇಲ್ಲಿ ಕಡ್ಡಾಯವಾಗಿ ಟೋಲ್ ಶುಲ್ಕ ಪಾವತಿಸಬೇಕಾಗಿದೆ. ಈಗಾಗಲೇ ಬ್ರಹ್ಮರಕೂಟ್ಲು ಟೋಲ್‌ನಿಂದ ಸಂಕಷ್ಟ ಅನುಭವಿಸುತ್ತಿರುವ ವಾಹನ ಸವಾರರಿಗೆ ವಳಾಲಿನ ಹೊಸ ಟೋಲ್ ಮತ್ತೊಂದು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.

ಕಾರಿಗೆ ಏಕಮುಖ ಪ್ರಯಾಣಕ್ಕೆ ₹140:
NHAI ನಿಗದಿಪಡಿಸಿರುವ ದರದ ಪ್ರಕಾರ, ಕಾರು, ವ್ಯಾನ್ ಸೇರಿದಂತೆ ಲಘು ಮೋಟಾರು ವಾಹನಗಳಿಗೆ (LMV) ಏಕಮುಖ ಪ್ರಯಾಣಕ್ಕೆ ₹140 ಹಾಗೂ 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ ₹205 ಶುಲ್ಕ ವಿಧಿಸಲಾಗುತ್ತದೆ.
ಲಘು ವಾಣಿಜ್ಯ ವಾಹನಗಳಿಗೆ ಕ್ರಮವಾಗಿ ₹220 ಮತ್ತು ₹335, ಎರಡು ಆಕ್ಸಲ್‌ಗಳ ಬಸ್ ಹಾಗೂ ಟ್ರಕ್‌ಗಳಿಗೆ ₹465 ಮತ್ತು ₹700, ಮೂರು ಆಕ್ಸಲ್‌ಗಳ ವಾಣಿಜ್ಯ ವಾಹನಗಳಿಗೆ ₹510 ಮತ್ತು ₹760 ಶುಲ್ಕ ನಿಗದಿಪಡಿಸಲಾಗಿದೆ. ಭಾರೀ ನಿರ್ಮಾಣ ಕಾಮಗಾರಿ ವಾಹನಗಳಿಗೆ ₹730 ಹಾಗೂ ₹1,095 ಮತ್ತು ಅತಿಗಾತ್ರದ ವಾಹನಗಳಿಗೆ ₹890 ಹಾಗೂ ₹1,335 ದರ ವಿಧಿಸಲಾಗುತ್ತದೆ.

ಸ್ಥಳೀಯರಿಗೆ ರಿಯಾಯಿತಿ, ಮಾಸಿಕ ಹಾಗೂ ವಾರ್ಷಿಕ ಪಾಸ್:
ಟೋಲ್ ಪ್ಲಾಝಾ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನೋಂದಣಿಯಾಗಿರುವ ವಾಣಿಜ್ಯ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಆಯಾ ವಾಹನ ವರ್ಗಗಳಿಗೆ 50 ಏಕಮುಖ ಪ್ರಯಾಣಗಳನ್ನು ಒಳಗೊಂಡ ಮಾಸಿಕ ಪಾಸ್ ಖರೀದಿಸುವವರಿಗೆ ನಿಗದಿತ ದರದಲ್ಲಿ ಮೂರನೇ ಒಂದು ಭಾಗದಷ್ಟು ರಿಯಾಯಿತಿ ದೊರೆಯಲಿದೆ.
ಟೋಲ್ ಪ್ಲಾಝಾದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ಲಘು ಮೋಟಾರು ವಾಹನಗಳ ಮಾಲೀಕರಿಗೆ ವೈಯಕ್ತಿಕ ಸ್ಥಳೀಯ ಪ್ರಯಾಣಕ್ಕಾಗಿ ತಿಂಗಳಿಗೆ ₹360ರ ಮಾಸಿಕ ಪಾಸ್ ಸೌಲಭ್ಯವಿದೆ. ಇದೇ ವ್ಯಾಪ್ತಿಯ ವಾಹನ ಮಾಲೀಕರು ₹1,500 ಪಾವತಿಸಿ ವಾರ್ಷಿಕ ಪಾಸ್ ಪಡೆಯಬಹುದು ಎಂದು NHAI ತಿಳಿಸಿದೆ.
ಇದಲ್ಲದೆ, ದೇಶಾದ್ಯಂತದ ಟೋಲ್ ಪ್ಲಾಝಾಗಳಲ್ಲಿ ಸಂಚರಿಸಲು ಖಾಸಗಿ ಲಘು ಮೋಟಾರು ವಾಹನಗಳಿಗೆ 200 ಏಕಮುಖ ಪ್ರಯಾಣಗಳ ಅವಕಾಶವಿರುವ NHAI ವಾರ್ಷಿಕ ಪಾಸ್ 2026–27ನೇ ಸಾಲಿನಲ್ಲಿ ₹3,075 ದರದಲ್ಲಿ ಲಭ್ಯವಿರಲಿದೆ.

ಎಂಟು ಲೇನ್‌ಗಳಲ್ಲಿ ವಾಹನ ಸಂಚಾರ ವ್ಯವಸ್ಥೆ:
ಚತುಷ್ಪಥ ಹೆದ್ದಾರಿಯ ಎರಡೂ ದಿಕ್ಕುಗಳಲ್ಲಿ ತಲಾ ನಾಲ್ಕು ಲೇನ್‌ಗಳಿದ್ದು, ಒಟ್ಟು ಎಂಟು ಲೇನ್‌ಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳ ಸಂಚಾರಕ್ಕಾಗಿ ಎರಡೂ ಬದಿಗಳಲ್ಲಿ ಪ್ರತ್ಯೇಕ ಲೇನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಎಂಟು ಲೇನ್‌ಗಳ ಪೈಕಿ ಆರು ಲೇನ್‌ಗಳನ್ನು (3+3) ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗಾಗಿ ಮೀಸಲಿಡಲಾಗಿದೆ. ಉಳಿದ ಎರಡು ಲೇನ್‌ಗಳಲ್ಲಿ ನಗದು ಪಾವತಿಗೆ ಅವಕಾಶವಿಲ್ಲ. ಫೋನ್‌ಪೇ, ಗೂಗಲ್ ಪೇ ಅಥವಾ ಸ್ಕ್ಯಾನರ್ ಮೂಲಕ ಡಿಜಿಟಲ್ ಪಾವತಿ ಮಾಡಬಹುದು ಎಂದು ಕೋರಲ್ ಸಂಸ್ಥೆಯ ಆಡಳಿತ ಪಾಲುದಾರ ಯಜೇಶ್ ತಿಳಿಸಿದ್ದಾರೆ.
ಟೋಲ್ ಶುಲ್ಕ ಸಂಗ್ರಹದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ.

ಶೇ. 95ರಷ್ಟು ಹೆದ್ದಾರಿ ಕಾಮಗಾರಿ ಪೂರ್ಣ:
2017ರಲ್ಲಿ ಆರಂಭವಾದ ಬಿ.ಸಿ. ರೋಡ್–ಅಡ್ಡಹೊಳೆ ನಡುವಿನ 65 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಸುಮಾರು ₹1,500 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ (EPC) ಮಾದರಿಯಲ್ಲಿ ಇಬ್ಬರು ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆಯ ಕೆಲವು ತಿರುವುಗಳನ್ನು ನೇರಗೊಳಿಸಿರುವುದರಿಂದ ಹೆದ್ದಾರಿಯ ಉದ್ದ 65 ಕಿ.ಮೀ.ನಿಂದ 63.6 ಕಿ.ಮೀ.ಗೆ ಇಳಿಕೆಯಾಗಿದೆ. ಒಟ್ಟಾರೆ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದೆ.
ಬಿ.ಸಿ. ರೋಡ್‌ನಿಂದ ಪೆರಿಯಶಾಂತಿವರೆಗಿನ 46 ಕಿ.ಮೀ. ಹೆದ್ದಾರಿ ಕಾಮಗಾರಿಯ ಗುತ್ತಿಗೆಯನ್ನು KNR ಕನ್‌ಸ್ಟ್ರಕ್ಷನ್ ಸಂಸ್ಥೆ ವಹಿಸಿಕೊಂಡಿದ್ದು, ವಳಾಲು ಟೋಲ್ ಪ್ಲಾಝಾ ನಿರ್ಮಾಣದ ಜವಾಬ್ದಾರಿಯನ್ನೂ ಇದೇ ಸಂಸ್ಥೆ ನಿರ್ವಹಿಸಿದೆ. ಕಾಮಗಾರಿ ಪೂರ್ಣಗೊಳಿಸಿ ಈಗಾಗಲೇ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ.
ಪ್ರಮುಖ ಜಂಕ್ಷನ್‌ಗಳಲ್ಲಿ ಫ್ಲೈಓವರ್, ಮೇಲ್ಸೇತುವೆ:
ಹೆದ್ದಾರಿ ಯೋಜನೆಯಡಿ ಕಲ್ಲಡ್ಕದಲ್ಲಿ ಸುಮಾರು 3 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಿಸಲಾಗಿದೆ. ನೆಲ್ಯಾಡಿಯಲ್ಲಿ ವಾಹನ ಮೇಲ್ಸೇತುವೆ (VoP) ಹಾಗೂ ಫ್ಲೈಓವರ್ ನಿರ್ಮಾಣಗೊಂಡಿವೆ. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ಉಪ್ಪಿನಂಗಡಿ ಮತ್ತು ಸುಬ್ರಹ್ಮಣ್ಯ ಕ್ರಾಸ್‌ಗಳಲ್ಲಿ ವಾಹನ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಪೆರಿಯಶಾಂತಿ (ಧರ್ಮಸ್ಥಳ ಕ್ರಾಸ್) ಬಳಿ ಗ್ರೇಡ್ ಸೆಪರೇಟರ್ ನಿರ್ಮಿಸಲಾಗಿದೆ.
ಆದರೆ, ನೀರಕಟ್ಟೆ ಬಳಿ ಸುಮಾರು 500 ಮೀಟರ್ ಹಾಗೂ ರೇಖ್ಯ ಬಳಿ ಸುಮಾರು 300 ಮೀಟರ್ ಹೆದ್ದಾರಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

38 ಕಿ.ಮೀ. ಅಂತರದಲ್ಲೇ ಎರಡು ಟೋಲ್ ಪ್ಲಾಝಾಗಳು!
ವಳಾಲಿನಲ್ಲಿ ಟೋಲ್ ಶುಲ್ಕ ವಸೂಲಿ ಆರಂಭವಾಗುವುದರೊಂದಿಗೆ ಬೆಂಗಳೂರು–ಮಂಗಳೂರು ನಡುವಿನ ಪ್ರಯಾಣಿಕರ ಮೇಲಿನ ಟೋಲ್ ಹೊರೆ ಮತ್ತಷ್ಟು ಹೆಚ್ಚಾಗಿದೆ. ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಪ್ಲಾಝಾಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್‌ವೆಲ್ ನಡುವಿನ ಮಾರ್ಗದಲ್ಲಿ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲುವಿನಲ್ಲೂ ಟೋಲ್ ಪ್ಲಾಝಾ ಕಾರ್ಯನಿರ್ವಹಿಸುತ್ತಿದೆ. ಇದೀಗ ವಳಾಲು ಟೋಲ್ ಪ್ಲಾಝಾ ಸೇರ್ಪಡೆಯಾಗುವುದರೊಂದಿಗೆ ಬೆಂಗಳೂರು–ಮಂಗಳೂರು ನಡುವೆ ಸಂಚರಿಸುವ ವಾಹನಗಳು ಒಟ್ಟು ಏಳು ಟೋಲ್ ಪ್ಲಾಝಾಗಳಲ್ಲಿ ಶುಲ್ಕ ಪಾವತಿಸಬೇಕಾಗಿದೆ.

ವಿಶೇಷವಾಗಿ ಬ್ರಹ್ಮರಕೂಟ್ಲು ಮತ್ತು ಉಪ್ಪಿನಂಗಡಿ ಸಮೀಪದ ವಳಾಲು ಟೋಲ್ ಪ್ಲಾಝಾಗಳ ನಡುವಿನ ಅಂತರ ಕೇವಲ 38 ಕಿ.ಮೀ. ಇರುವುದು ಗಮನಾರ್ಹವಾಗಿದೆ. ಸಾಮಾನ್ಯವಾಗಿ ಒಂದು ಟೋಲ್ ಪ್ಲಾಝಾದಿಂದ ಮತ್ತೊಂದು ಟೋಲ್ ಪ್ಲಾಝಾಕ್ಕೆ 60 ಕಿ.ಮೀ. ಅಂತರ ಇರಬೇಕೆಂಬ ನಿಯಮವಿದೆ. ಆದರೆ, ಇಲ್ಲಿ ಕೇವಲ 38 ಕಿ.ಮೀ. ಅಂತರದಲ್ಲೇ ಮತ್ತೊಂದು ಟೋಲ್ ಪ್ಲಾಝಾ ಕಾರ್ಯಾರಂಭಿಸಿರುವುದು ಟೋಲ್ ನಿಯಮಗಳ ಅನುಷ್ಠಾನದ ಬಗ್ಗೆ ಪ್ರಶ್ನೆ ಮೂಡಿಸಿದೆ.
ಹೆದ್ದಾರಿ ಅಭಿವೃದ್ಧಿಯಿಂದ ಪ್ರಯಾಣ ಸುಗಮವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ವಾಹನ ಸವಾರರಿಗೆ ಇದೀಗ ಅಲ್ಪ ಅಂತರದಲ್ಲೇ ಎರಡು ಟೋಲ್ ಶುಲ್ಕ ಪಾವತಿಸುವ ಅನಿವಾರ್ಯತೆ ಎದುರಾಗಿದೆ. ನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರು ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವವರ ಮೇಲೆ ಇದು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಟೋಲ್ ಪ್ಲಾಝಾಗಳ ನಡುವಿನ ಅಂತರ ಮತ್ತು ಶುಲ್ಕ ವಸೂಲಿ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಸಾರ್ವಜನಿಕರ ಒತ್ತಾಯವೂ ವ್ಯಕ್ತವಾಗುತ್ತಿದೆ.



