ಬೆಂದೂರಿನ ಸೈಂಟ್ ಆಗ್ನೆಸ್ CBSE ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮೆಲೋರಾ ರಿಷಾ ಡಿಸೋಜ ಅವರ ಅಪೂರ್ವ ಸಾಧನೆ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾಡುತ್ತಾ ಹೆಣಿಗೆ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಮಂಗಳೂರಿನ ಬಾಲಪ್ರತಿಭೆ

ಮಂಗಳೂರು: ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಬೆಂದೂರಿನ ಸೈಂಟ್ ಆಗ್ನೆಸ್ CBSE ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮೆಲೋರಾ ರಿಷಾ ಡಿಸೋಜ ಅವರು ತಮ್ಮ ಅಪೂರ್ವ ಕೌಶಲದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದು ಮಂಗಳೂರಿಗೆ ಹೆಮ್ಮೆ ತಂದಿದ್ದಾರೆ.


ನವೆಂಬರ್ 26ರಂದು ಸೈಂಟ್ ಆಗ್ನೆಸ್ ಕ್ಯಾಂಪಸ್‌ನ ಮದರ್ ಎಲ್ವಿಶಿಯಾ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮೆಲೋರಾ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ನಿರಂತರವಾಗಿ ವಿವಿಧ ಭಾಷೆಗಳ ಹಾಡುಗಳನ್ನು ಹಾಡುತ್ತಾ ಉಣ್ಣೆಯ ನೂಲಿನಿಂದ ಹೆಣಿಗೆ ಮಾಡುವ ವಿಶಿಷ್ಟ ಸಾಹಸವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ದೃಷ್ಟಿಯನ್ನು ಸಂಪೂರ್ಣವಾಗಿ ಮರೆಮಾಚಿಕೊಂಡಿದ್ದರೂ ಹಾಡಿನ ಲಯಕ್ಕೆ ಧಕ್ಕೆಯಾಗದಂತೆ, ಏಕಾಗ್ರತೆ, ತಾಳ್ಮೆ ಹಾಗೂ ಆತ್ಮವಿಶ್ವಾಸದೊಂದಿಗೆ ಹೆಣಿಗೆ ಮಾಡುವ ಮೂಲಕ ನೆರೆದಿದ್ದವರನ್ನು ಬೆರಗುಗೊಳಿಸಿದರು.

ಸಂಗೀತ ಮತ್ತು ಕೈಚಳಕವನ್ನು ಅಪೂರ್ವವಾಗಿ ಬೆಸೆದ ಈ ವಿಶಿಷ್ಟ ಪ್ರತಿಭಾ ಪ್ರದರ್ಶನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದು, ಮೆಲೋರಾ ಅವರ ಸಾಧನೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಬಾಲ್ಯದಲ್ಲೇ ಇಂತಹ ಅಪರೂಪದ ಕೌಶಲವನ್ನು ಮೈಗೂಡಿಸಿಕೊಂಡಿರುವ ಈ ಬಾಲಪ್ರತಿಭೆಯ ಸಾಧನೆ ಸೈಂಟ್ ಆಗ್ನೆಸ್ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ಇಡೀ ಮಂಗಳೂರಿನ ಹೆಮ್ಮೆಯ ಕ್ಷಣವಾಗಿದೆ.

ಕುಲಶೇಖರ ನಿವಾಸಿಗಳಾದ ಮೆಲ್ವಿನ್ ಮ್ಯಾಥ್ಯು ಮತ್ತು ರೇಷ್ಮಾ ರೆನಿಟಾ ಡಿಸೋಜ ದಂಪತಿಯ ಪುತ್ರಿಯಾಗಿರುವ ಮೆಲೋರಾ ಅವರ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಭ್ರಮದ ಕ್ಷಣಕ್ಕೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾಲ್ ಸಲ್ದಾನ್ಹಾ, ಗೌರವಾನ್ವಿತ ಅತಿಥಿಗಳಾದ ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷ ಲೂವಿ ಪಿಂಟೋ, ಕರ್ನಾಟಕ ಪ್ರಾಂತ್ಯದ ಸಹಾಯಕ ಪ್ರಾಂತ್ಯಾಧಿಕಾರಿಣಿ ಸಿಸ್ಟರ್ ರೋಸ್ ಆಗ್ನೆಸ್, ಸೈಂಟ್ ಆಗ್ನೆಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಾ. ವಿನೋರಾ, ಸೈಂಟ್ ಆಗ್ನೆಸ್ CBSE ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಜೆನ್ನಿಫರ್ ಮೊರಾಸ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಹಾಗೂ ಅಧಿಕೃತ ನಿರ್ಣಾಯಕ ಡಾ. ಮನೀಶ್ ವಿಷ್ಣೋಯಿ, ಕುಲಶೇಖರ ಕಾರ್ಡೆಲ್ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್, ಶಾಲೆಯ ಪೋಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪ್ರದೀಪ್ ಮಿಸ್ಕಿತ್, ಸಾಕ್ಷಿದಾರರಾದ ವಂದನೀಯ ಫಾದರ್ ಫ್ಲೇವಿಯನ್ ರಾಜ್‌ಕಿರಣ್ ಲೋಬೋ ಹಾಗೂ ರೂಪೇಶ್, ಸಂಗೀತ ನಿರ್ದೇಶಕ ಜೋಯಲ್ ಪಿರೇರಾ ಉಪಸ್ಥಿತರಿದ್ದರು.

ಮೆಲೋರಾ ಅವರ ಈ ಅಸಾಧಾರಣ ಸಾಧನೆಗೆ ಸೈಂಟ್ ಆಗ್ನೆಸ್ ಶಾಲೆಯ ಆಡಳಿತ ಮಂಡಳಿ, ವಿವಿಧ ಶಾಲೆಗಳ ಮುಖ್ಯಸ್ಥರು, ಪೋಷಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕ-ಶಿಕ್ಷಕ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.




