November 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಂಡ್ ಸೊಭಾಣ್‌ನ ಸಾಂಸ್ಕೃತಿಕ ಪಯಣಕ್ಕೆ 300 ತಿಂಗಳ ಸಂಭ್ರಮ

25 ವರ್ಷಗಳ ನಿರಂತರ ಕಲಾಸೇವೆಗೆ ಐತಿಹಾಸಿಕ ಮೈಲಿಗಲ್ಲು –  ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’ ಮೂಲಕ ಅದ್ಧೂರಿ ಸಂಭ್ರಮಾಚರಣೆ

ಮಂಗಳೂರು: ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯ ಮಹತ್ತರ ಆಶಯದೊಂದಿಗೆ ಆರಂಭಗೊಂಡ ಮಾಂಡ್ ಸೊಭಾಣ್ ಸಂಸ್ಥೆಯ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ) ಸರಣಿಯು ಇದೀಗ 300 ತಿಂಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಬರೋಬ್ಬರಿ 25 ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸಾಗಿಬಂದ ಈ ಸಾಂಸ್ಕೃತಿಕ ಅಭಿಯಾನವು ಕೊಂಕಣಿ ಕಲಾ ಲೋಕದಲ್ಲಿ ಅಪೂರ್ವ ಸಾಧನೆಯಾಗಿ ಗುರುತಿಸಿಕೊಂಡಿದೆ. ಈ ಐತಿಹಾಸಿಕ ಸಂಭ್ರಮವನ್ನು ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’ ಮೂಲಕ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಕೊಂಕಣಿ ಭಾಷೆಯ ವಿವಿಧ ಪ್ರಬೇಧಗಳು, ವಿಭಿನ್ನ ಪ್ರದೇಶಗಳ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯಮಯ ಕಲಾಪ್ರಕಾರಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಈ ವೇದಿಕೆಯು ಕಳೆದ ಎರಡೂವರೆ ದಶಕಗಳಲ್ಲಿ ನೂರಾರು ಕಲಾವಿದರು, ಕಲಾತಂಡಗಳು ಹಾಗೂ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಒದಗಿಸಿದೆ. ನೃತ್ಯ, ನಾಟಕ, ಸಂಗೀತ, ಜನಪದ ಕಲೆ ಸೇರಿದಂತೆ ಕೊಂಕಣಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಈ ವೇದಿಕೆ ಮಹತ್ವದ ಪಾತ್ರ ವಹಿಸಿದೆ.

25 ವರ್ಷಗಳ ಹಿಂದೆ ಬಿತ್ತಿದ ಸಾಂಸ್ಕೃತಿಕ ಬೀಜ ಇಂದು ಹೆಮ್ಮರ:

2001ರ ಡಿಸೆಂಬರ್ 1ರಂದು ಪ್ರಸಿದ್ಧ ಹಿಂದಿ ಚಲನಚಿತ್ರ ನಟ ನಾಸಿರುದ್ದೀನ್ ಶಾ ಅವರು ಕಲಾಂಗಣದ ಬಯಲು ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿ, ಈ ಕಲಾಕೇಂದ್ರದಲ್ಲಿ ಕಲೆ ಮತ್ತು ಸಂಸ್ಕೃತಿ ನಿರಂತರವಾಗಿ ಬೆಳಗಲಿ ಎಂದು ಹಾರೈಸಿದ್ದರು. ಇದರ ಬೆನ್ನಲ್ಲೇ 2002ರ ಜನವರಿ 6ರಂದು ‘ಮ್ಹಯ್ನ್ಯಾಳಿ ಮಾಂಚಿ’ ಸರಣಿಗೆ ಚಾಲನೆ ನೀಡಲಾಯಿತು.

ಅಂದಿನಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 6.30ಕ್ಕೆ ಸರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಪ್ರದಾಯವನ್ನು ಮಾಂಡ್ ಸೊಭಾಣ್ ಮುಂದುವರಿಸಿಕೊಂಡು ಬಂದಿದೆ. ಕಲಾಂಗಣದ ನೋರಿನ್ ಮತ್ತು ರೊನಾಲ್ಡ್ ಮೆಂಡೊನ್ಸಾ ಬಯಲು ರಂಗಮಂದಿರದಲ್ಲಿ, ಮಳೆಗಾಲದಲ್ಲಿ ಗ್ರೇಸಿ ಗಂಗಾ ನಾಯ್ಕ್ ಬಂದೋಡ್ಕರ್ ಸಭಾಂಗಣದ ಲುವಿಜಾ ಮತ್ತು ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ವೇದಿಕೆಯಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿಕ್ಟೋರಿಯಾ ವೀಣಾ ಕೊರೆಯಾ ವೇದಿಕೆಯಲ್ಲಿ ನೂರಾರು ಕಲಾ ಪ್ರದರ್ಶನಗಳು ನಡೆದಿವೆ. ಇಲ್ಲಿ ಕೊಂಕಣಿ ನೃತ್ಯಗಳು ನಲಿದಿವೆ, ಸಂಗೀತದ ನಾದ ಮೊಳಗಿದೆ, ನಾಟಕಗಳು ರಂಗೇರಿವೆ ಹಾಗೂ ಜನಪದ ಕಲೆಗಳು ಪ್ರೇಕ್ಷಕರ ಮನಸೂರೆಗೊಂಡಿವೆ.

ಕಲಾ ವೈವಿಧ್ಯಕ್ಕೆ ಮುಕ್ತ ವೇದಿಕೆ, ಎಲ್ಲ ಭಾಷಾ ಪ್ರಬೇಧಗಳಿಗೂ ಆದ್ಯತೆ:

ಈ ವೇದಿಕೆಯ ವಿಶೇಷತೆಯೆಂದರೆ ಕೊಂಕಣಿ ಭಾಷೆಯ ಯಾವುದೇ ಒಂದು ಪ್ರಬೇಧಕ್ಕೆ ಸೀಮಿತವಾಗದೆ, ಸಮಸ್ತ ಕೊಂಕಣಿ ಸಮುದಾಯದ ಸಾಂಸ್ಕೃತಿಕ ವೈವಿಧ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿರುವುದು. ನೃತ್ಯ, ನಾಟಕ, ಸಂಗೀತ, ಜನಪದ, ಕೊಂಕಣಿ ಯಕ್ಷಗಾನ, ಮಕ್ಕಳ ರಜಾ ಶಿಬಿರಗಳ ಸೃಜನಾತ್ಮಕ ಕಾರ್ಯಕ್ರಮಗಳು ಹಾಗೂ ಕಲಾಕುಲ್ ನಾಟಕ ರೆಪರ್ಟರಿಯ ವಿಭಿನ್ನ ಪ್ರಯೋಗಗಳು ಇಲ್ಲಿ ಪ್ರದರ್ಶನಗೊಂಡಿವೆ.

ಗೋವಾದ ತಿಯಾತ್ರ್, ಜಮ್ನಿವೆಲೊ ಖೆಳ್, ದಿವ್ಯಾ ಖೆಳ್, ಘೊಡ್ಯಾ ಮೊಡ್ನಿ, ಜಾಗೊರ್, ಮಾಂಡೊ ಮತ್ತು ದುಲ್ಪೊದಾಂ ನಂತಹ ಸಾಂಪ್ರದಾಯಿಕ ಕಲಾಪ್ರಕಾರಗಳಿಗೂ ವೇದಿಕೆ ಕಲ್ಪಿಸಲಾಗಿದೆ. ಕ್ರೈಸ್ತ, ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ.), ಕುಡ್ಮಿ, ಖಾರ್ವಿ, ಸಿದ್ದಿ, ದಾಲ್ದಿ ಹಾಗೂ ನವಾಯತಿ ಸಮುದಾಯಗಳ ವಿಶಿಷ್ಟ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುಮಟ್, ಚೂಡಿಪುಜಾ, ಉಜ್ಯಾ ಖೆಳ್, ದಮಾಮ್, ಫುಗ್ಡಿ, ತೊಣಿಯೊ, ದೊರಿ ಖೆಳ್ ಮತ್ತು ದಪ್ ಮೊದಲಾದ ಕಲಾಪ್ರಕಾರಗಳಿಗೂ ಇಲ್ಲಿ ಪ್ರೋತ್ಸಾಹ ದೊರೆತಿದೆ.

ಯುವಜನರನ್ನು ಆಕರ್ಷಿಸುವ ಯುವ ಮಹೋತ್ಸವಗಳು, ಹಾಸ್ಯ ಕಾರ್ಯಕ್ರಮಗಳು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಪ್ರಸಿದ್ಧ ಕೊಂಕಣಿ ಸಾಹಿತಿಗಳ ಕೃತಿಗಳನ್ನು ಆಧರಿಸಿದ ರಂಗಪ್ರಯೋಗಗಳು ಈ ವೇದಿಕೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಕಲಾವಿದರಿಗೆ ಗೌರವ, ಪ್ರತಿಭೆಗಳಿಗೆ ಪ್ರೋತ್ಸಾಹ:

ಮಾಂಡ್ ಸೊಭಾಣ್‌ನ ತಿಂಗಳ ವೇದಿಕೆಯ ಮತ್ತೊಂದು ವಿಶೇಷವೆಂದರೆ ಕಲಾವಿದರಿಗೆ ನೀಡುವ ಗೌರವ ಮತ್ತು ಪ್ರೋತ್ಸಾಹ. ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಕಲಾತಂಡಗಳಿಗೆ ಸೂಕ್ತ ಗೌರವ ಸಂಭಾವನೆ ನೀಡುವುದರ ಜೊತೆಗೆ ದೂರದ ಊರುಗಳಿಂದ ಆಗಮಿಸುವ ತಂಡಗಳಿಗೆ ಪ್ರಯಾಣ, ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಉತ್ತಮ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಪ್ರಚಾರ ಹಾಗೂ ಪ್ರೇಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಲಾವಿದರು ತಮ್ಮ ಕಲೆಯನ್ನು ಯಾವುದೇ ಅಡೆತಡೆಯಿಲ್ಲದೆ ಪ್ರದರ್ಶಿಸಲು ಪೂರಕ ವಾತಾವರಣ ನಿರ್ಮಿಸಲಾಗಿದೆ.

ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪಕ ದಿವಂಗತ ಎರಿಕ್ ಒಝೇರಿಯೊ ಅವರ ದೂರದೃಷ್ಟಿ ಮತ್ತು ಆಶಯದಂತೆ, ಪ್ರಸ್ತುತ ಅಧ್ಯಕ್ಷ ಲುವಿ ಪಿಂಟೊ ಅವರ ನೇತೃತ್ವದ ಸಮಿತಿಯ ಸಹಕಾರದಲ್ಲಿ ಕಲಾಂಗಣವು ಇಂದು ಕೊಂಕಣಿ ಕಲಾವಿದರ ಸೃಜನಶೀಲ ಅಭಿವ್ಯಕ್ತಿಗೆ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಕಲಾವಿದರನ್ನು ಪ್ರೋತ್ಸಾಹಿಸುವ, ಹೊಸ ಪ್ರತಿಭೆಗಳನ್ನು ಗುರುತಿಸುವ ಹಾಗೂ ಕೊಂಕಣಿ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಿ ಸಾಗುತ್ತಿದೆ.

300ನೇ ತಿಂಗಳ ಸಂಭ್ರಮಕ್ಕೆ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’:

300ನೇ ತಿಂಗಳ ಐತಿಹಾಸಿಕ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಲು ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’ ಆಯೋಜಿಸಲಾಗಿದೆ. ಕೊಂಕಣಿ ಸಂಗೀತ ಮತ್ತು ನೃತ್ಯ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಬಾಯ್ಲಾ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.

ಪೋರ್ಚುಗೀಸ್ ಭಾಷೆಯ ‘ಬಾಯ್ಲಾದು’ ಎಂಬ ಪದದಿಂದ ರೂಪುಗೊಂಡ ‘ಬಾಯ್ಲಾ’ ಎಂದರೆ ನರ್ತಿಸು ಎಂದರ್ಥ. ದುಲ್ಪದ್ ಮತ್ತು ಪೊಲ್ಕಾ ನೃತ್ಯ ಪ್ರಕಾರಗಳ ಪ್ರಭಾವದಿಂದ ರೂಪುಗೊಂಡ ಬಾಯ್ಲಾ ಸಂಗೀತ ಮತ್ತು ನೃತ್ಯಕ್ಕೆ ಕೊಂಕಣಿ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಈ ಕಲಾಪ್ರಕಾರದ ಪ್ರಚಾರ ಮತ್ತು ಜನಪ್ರಿಯತೆಗೆ ಮಾಂಡ್ ಸೊಭಾಣ್ ಮಹತ್ವದ ಕೊಡುಗೆ ನೀಡಿದೆ.

ವಿಶ್ವದ ಪ್ರಥಮ ಬಾಯ್ಲಾ ಶೋ, ಬಿಗ್ ಬಾಯ್ಲಾ ಶೋ, ಬಾಯ್ಲಾ ಕಾರ್ನಿವಲ್, ಬಾಯ್ಲಾ ಫೆಸ್ಟಿವಲ್, ಬಾಯ್ಲಾ ಅರೇಬಿಯಾ, ಲಿಯೊ ಬಾಯ್ಲಾ ಶೋ ಹಾಗೂ ಬಾಯ್ಲಾ ನೃತ್ಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಬಾಯ್ಲಾ ಕಲೆಯನ್ನು ಜನಸಾಮಾನ್ಯರ ಬಳಿಗೆ ತಲುಪಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಇಂದು ಕೊಂಕಣಿ ಸಂಭ್ರಮಗಳಲ್ಲಿ ಬಾಯ್ಲಾ ಸಂಗೀತ ಮತ್ತು ನೃತ್ಯಕ್ಕೆ ವಿಶೇಷ ಸ್ಥಾನ ದೊರೆತಿರುವುದು ಈ ಪ್ರಯತ್ನಗಳ ಫಲವಾಗಿದೆ. ಭಾರತ ಮಾತ್ರವಲ್ಲದೆ ಶ್ರೀಲಂಕಾ, ಮಾರಿಷಸ್ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ದೇಶಗಳಲ್ಲಿಯೂ ಬಾಯ್ಲಾ ಸಂಗೀತ ಮತ್ತು ನೃತ್ಯ ಜನಪ್ರಿಯವಾಗಿದೆ.

ಅಂತರರಾಷ್ಟ್ರೀಯ ಕಲಾವಿದರಿಂದ ಸಂಗೀತದ ರಸದೌತಣ:

ದುಬೈಯ ಖ್ಯಾತ ಗಿಟಾರ್ ಮಾಸ್ಟ್ರೊ ಆಲ್ವಿನ್ ಫೆರ್ನಾಂಡಿಸ್ ಅವರು ಈ ಸಂಗೀತ ಕಾರ್ಯಕ್ರಮದ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶ್ರೀಲಂಕಾದಿಂದ ಅಂತರರಾಷ್ಟ್ರೀಯ ಖ್ಯಾತಿಯ ‘ಎಲ್ಲೋ ಬೀಟ್ಸ್’ ತಂಡ ಆಗಮಿಸಿ ಸಂಗೀತದ ರಸದೌತಣ ನೀಡಲಿದೆ. ಜನಪ್ರಿಯ ಹಳೆಯ ಬಾಯ್ಲಾ ಹಾಡುಗಳ ಜೊತೆಗೆ ಈ ಕಾರ್ಯಕ್ರಮಕ್ಕಾಗಿಯೇ ವಿಶೇಷವಾಗಿ ರಚಿಸಲಾದ ನೂತನ ಹಾಡುಗಳು ಸಂಗೀತಾಸಕ್ತರನ್ನು ರಂಜಿಸಲಿವೆ.

ಇದರೊಂದಿಗೆ ನಾಚ್ ಸೊಭಾಣ್ ಮತ್ತು ಅರ್ಬನ್ ಗ್ರೂವ್ ತಂಡಗಳ ಆಕರ್ಷಕ ನೃತ್ಯ ಪ್ರದರ್ಶನಗಳು ನಡೆಯಲಿವೆ. ಯುವಜನರು ಹಾಗೂ ನೃತ್ಯಾಸಕ್ತರಿಗಾಗಿ ವಿಶೇಷ ನೃತ್ಯ ವೇದಿಕೆಯನ್ನೂ ಸಿದ್ಧಪಡಿಸಲಾಗುತ್ತಿದೆ. ವೆಂಜ್ ಮಾಡೆಲಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಕೊಂಕಣಿಯ ಸಾಂಪ್ರದಾಯಿಕ ಉಡುಪುಗಳನ್ನು ಪರಿಚಯಿಸುವ ಫ್ಯಾಷನ್ ವಾಕ್ ಹಾಗೂ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಡಿಸೆಂಬರ್ 6ರಂದು ಕಲಾಂಗಣದಲ್ಲಿ ಸಾಂಸ್ಕೃತಿಕ ಮಹೋತ್ಸವ:

ಡಿಸೆಂಬರ್ 6, 2026ರಂದು ಸಂಜೆ 6 ಗಂಟೆಗೆ ಸರಿಯಾಗಿ ಕಲಾಂಗಣ ಮೈದಾನದಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಕೊಂಕಣಿ ಭಾಷೆ, ಸಂಗೀತ, ನೃತ್ಯ ಹಾಗೂ ಸಂಸ್ಕೃತಿಯನ್ನು ಪ್ರೀತಿಸುವ ಎಲ್ಲರೂ ಭಾಗವಹಿಸುವಂತೆ ಆಯೋಜಕರು ಆಹ್ವಾನಿಸಿದ್ದಾರೆ.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯಕ್ರಮದ ನಿರ್ದೇಶಕ ಆಲ್ವಿನ್ ಫೆರ್ನಾಂಡಿಸ್, ಸಂಸ್ಥೆಯ ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಉಪಾಧ್ಯಕ್ಷ ನವೀನ್ ಲೋಬೊ ಹಾಗೂ ಖಜಾಂಚಿ ಎಲ್ರೊನ್ ರೊಡ್ರಿಗಸ್ ಅವರು ಇಂದು ನವೆಂಬರ್ 27ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.

25 ವರ್ಷಗಳ ನಿರಂತರತೆ, 300 ತಿಂಗಳ ಸಾಧನೆ ಮತ್ತು ಅಸಂಖ್ಯಾತ ಕಲಾವಿದರ ಪ್ರತಿಭೆಗೆ ಸಾಕ್ಷಿಯಾಗಿರುವ ಮಾಂಡ್ ಸೊಭಾಣ್‌ನ ಈ ಪಯಣ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ, ಬದ್ಧತೆ ಹಾಗೂ ಸಾಮೂಹಿಕ ಪ್ರಯತ್ನದ ಪ್ರತೀಕವಾಗಿದೆ. ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲು, ಕೊಂಕಣಿ ಸಂಗೀತದೊಂದಿಗೆ ಹೆಜ್ಜೆ ಹಾಕಲು ಹಾಗೂ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸಲು ಎಲ್ಲರೂ ಕಲಾಂಗಣಕ್ಕೆ ಆಗಮಿಸೋಣ ಎಂಬುದು ಆಯೋಜಕರ ಆತ್ಮೀಯ ಆಹ್ವಾನ.

You may also like

News

ದತ್ತು ಕಾರ್ಯದಲ್ಲಿ ದಕ್ಷಿಣ ಕನ್ನಡಕ್ಕೆ ರಾಜ್ಯಮಟ್ಟದ ಗೌರವದ ಗರಿ

ಮಕ್ಕಳ ಕಲ್ಯಾಣ ಸಮಿತಿಗೆ ಪ್ರಥಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೃತೀಯ ಸ್ಥಾನ – ರಶ್ಮಿ ಕೆ.ಎಂ. ನೇತೃತ್ವದ ಕಾರ್ಯವೈಖರಿಗೆ ರಾಜ್ಯಮಟ್ಟದ ಮನ್ನಣೆ ಮಂಗಳೂರು: ಮಕ್ಕಳಿಗೆ ಸುರಕ್ಷಿತ
News

MDSC Convention in Bendur Ignites the Spirit of Renewal – Charismatic Leaders Called to Rebuild the Church

MANGALURU: The Mangalore Diocesan Service of Communion (MDSC), under the Diocese of Mangalore, organised a day-long Charismatic Prayer Group Leaders

You cannot copy content of this page