November 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವೇಣೂರು ಕ್ರೈಸ್ಟ್ ಕಿಂಗ್ ಚರ್ಚ್ ನಲ್ಲಿ ಭಕ್ತಿಭಾವದ ವಾರ್ಷಿಕ ಹಬ್ಬದ ಸಂಭ್ರಮ

ಮಂಗಳೂರಿನ ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ಪ್ರದಾನ ನಿರ್ದೇಶಕರಾದ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೋ ಅವರ ಅರ್ಥಪೂರ್ಣ ಪ್ರವಚನ – ಪ್ರೀತಿ, ನಂಬಿಕೆ ಮತ್ತು ಸೇವೆಯ ಸಂದೇಶ

ಬೆಳ್ತಂಗಡಿ: ವೇಣೂರು ಕ್ರೈಸ್ಟ್ ಕಿಂಗ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬವನ್ನು ಭಕ್ತಿಭಾವ, ಸಂಭ್ರಮ ಮತ್ತು ಆಧ್ಯಾತ್ಮಿಕ ಸಡಗರದೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ಪ್ರದಾನ ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೋ ಅವರು ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ, ಅರ್ಥಪೂರ್ಣ ಪ್ರವಚನದ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಸಂದೇಶ ನೀಡಿದರು.

ತಮ್ಮ ಪ್ರವಚನದಲ್ಲಿ ಅವರು ನಂಬಿಕೆ, ಪ್ರೀತಿ, ಪರಸ್ಪರ ಕ್ಷಮೆ ಹಾಗೂ ಸೇವಾ ಮನೋಭಾವದ ಮಹತ್ವವನ್ನು ಮನದಟ್ಟು ಮಾಡಿದರು. ಕ್ರಿಸ್ತನ ಬೋಧನೆಗಳು ಕೇವಲ ಪ್ರಾರ್ಥನೆಗೆ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನಲ್ಲಿಯೂ ಪ್ರತಿಫಲಿಸಬೇಕು. ಪರಸ್ಪರ ಪ್ರೀತಿ, ಸಹನೆ, ತ್ಯಾಗ ಮತ್ತು ಸಹೋದರತ್ವದ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಬೆಳೆಸಬೇಕು ಎಂಬ ಆಶಯವನ್ನು ತಮ್ಮ ಸಂದೇಶದಲ್ಲಿ ವ್ಯಕ್ತಪಡಿಸಿದರು. ಅವರ ಸರಳ, ಹೃದಯಸ್ಪರ್ಶಿ ಹಾಗೂ ಮೌಲ್ಯಯುತ ಪ್ರವಚನವು ನೆರೆದಿದ್ದ ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆ ನೀಡಿತು. ಇದೇ ಸಂದರ್ಭದಲ್ಲಿ ಅವರು ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರಿದರು.

ಬೆಳ್ತಂಗಡಿ ವಲಯದ ಶ್ರೇಷ್ಠಗುರು ಹಾಗೂ ಬೆಳ್ತಂಗಡಿ ಚರ್ಚ್ ನ ಪ್ರದಾನ ಧರ್ಮಗುರು ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಅವರು ಬಲಿಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಕೊಯರ್ ಮುಖ್ಯಸ್ಥ ಅಲ್ವಿನ್ ಫೆರ್ನಾಂಡಿಸ್ ಅವರ ನೇತೃತ್ವದ ಗಾಯನ ತಂಡವು ಭಕ್ತಿಪೂರ್ಣ ಗಾಯನದ ಮೂಲಕ ಬಲಿಪೂಜೆಯ ಪ್ರಾರ್ಥನಾ ವಿಧಿಗಳಿಗೆ ವಿಶೇಷ ಮೆರುಗು ನೀಡಿತು.

ವೇಣೂರು ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಎಡ್ವಿನ್ ಸಂತೋಷ್ ಮೊನಿಸ್ ಅವರು ಕೃತಜ್ಞತೆ ಸಲ್ಲಿಸಿ, ಹಬ್ಬದ ಆಚರಣೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಧರ್ಮಗುರುಗಳು, ಭಕ್ತಾದಿಗಳು ಹಾಗೂ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸುನೀತಾ ರೇಗೊ, ಕಾರ್ಯದರ್ಶಿ ಹೆನ್ರಿ ಮೊರಾಸ್, ಆಯೋಗಗಳ ಸಂಯೋಜಕಿ ಲತಾ ಮಸ್ಕರೇನ್ಹಸ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಆಧ್ಯಾತ್ಮಿಕ ಮೌಲ್ಯಗಳ ಜಾಗೃತಿ, ಪರಸ್ಪರ ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದ ವೇಣೂರು ಕ್ರೈಸ್ಟ್ ಕಿಂಗ್ ಚರ್ಚ್ ವಾರ್ಷಿಕ ಹಬ್ಬವು ಭಕ್ತರ ಪಾಲಿಗೆ ಧಾರ್ಮಿಕ ಸಂಭ್ರಮದೊಂದಿಗೆ ಆತ್ಮಾವಲೋಕನದ ಸುಂದರ ಕ್ಷಣವಾಗಿಯೂ ಮೂಡಿಬಂತು.

You may also like

News

ಮಾಂಡ್ ಸೊಭಾಣ್‌ನ ಸಾಂಸ್ಕೃತಿಕ ಪಯಣಕ್ಕೆ 300 ತಿಂಗಳ ಸಂಭ್ರಮ

25 ವರ್ಷಗಳ ನಿರಂತರ ಕಲಾಸೇವೆಗೆ ಐತಿಹಾಸಿಕ ಮೈಲಿಗಲ್ಲು –  ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’ ಮೂಲಕ ಅದ್ಧೂರಿ ಸಂಭ್ರಮಾಚರಣೆ ಮಂಗಳೂರು: ಕೊಂಕಣಿ
News

ದತ್ತು ಕಾರ್ಯದಲ್ಲಿ ದಕ್ಷಿಣ ಕನ್ನಡಕ್ಕೆ ರಾಜ್ಯಮಟ್ಟದ ಗೌರವದ ಗರಿ

ಮಕ್ಕಳ ಕಲ್ಯಾಣ ಸಮಿತಿಗೆ ಪ್ರಥಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೃತೀಯ ಸ್ಥಾನ – ರಶ್ಮಿ ಕೆ.ಎಂ. ನೇತೃತ್ವದ ಕಾರ್ಯವೈಖರಿಗೆ ರಾಜ್ಯಮಟ್ಟದ ಮನ್ನಣೆ ಮಂಗಳೂರು: ಮಕ್ಕಳಿಗೆ ಸುರಕ್ಷಿತ

You cannot copy content of this page