ಬಂಟ್ವಾಳ ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ವಿಶಂತಿ ಸಂಭ್ರಮ ಹಾಗೂ ವರ್ತಕ ಗ್ರಾಹಕರ ಮಹಾ ಸಮಾಗಮ
ಬಂಟ್ವಾಳ : ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ವು 20 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ “ವಿಂಶತಿ ಸಂಭ್ರಮ 2023-24 ಹಾಗೂ ವರ್ತಕರ – ಗ್ರಾಹಕರ ಮಹಾಸಂಗಮ” ಕಾರ್ಯಕ್ರಮವು ಸಪ್ಟಂಬರ್ 20 ರಿಂದ 22 ರವರೆಗೆ ಬಿ.ಸಿ. ರೋಡ್ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದ್ದಾರೆ. ಮಂಗಳವಾರ ಬಿ.ಸಿ. ರೋಡಿನಲ್ಲಿ ಕರೆದ ಸುದ್ದಿಗೋಷ್ಠಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಸಪ್ಟಂಬರ್ 20ರಂದು ನಮ್ಮ ಸಂಸ್ಥೆ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಂಯೋಜನೆಯಲ್ಲಿ ನಡೆಯುವ ಗೃಹೊಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ ತಿನಸುಗಳ ಮಹಾಮೇಳ, ಆರೋಗ್ಯ ತಪಾಸಣೆ, ದಿವ್ಯಾಂಗರ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮವನ್ನು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ ಎಂದರು.
ಸಪ್ಟಂಬರ್ 21ರಂದು “ವಿಂಶತಿ ಸಂಭ್ರಮ- ಸದಸ್ಯರ ಸಮಾಗಮ” ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ವಿಧಾನ ಸಭಾಧ್ಯಕ್ಷ ಸನ್ಮಾನ್ಯ ಯು. ಟಿ. ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಮಾಜಿ ಸಚಿವ ರಮಾನಾಥ ರೈ ಸಹಿತ ಹಲವಾರು ಗಣ್ಯರು ಭಾಗವಹಿಸುವರು. ಈ ಸಂದರ್ಭ 15 ರಿಂದ 20 ಮಂದಿ ಅಶಕ್ತರಿಗೆ ಸಹಾಯಧನ ವಿತರಣೆ, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸ್ಥಾಪಕರು ಸಹಿತ ಹಲವರನ್ನು ಗುರುತಿಸಿ ಗೌರವಿಸಲಾಗುವುದು ಎಂದರು. ಅಂದು ಮಧ್ಯಾಹ್ನ ಸಂಘದ ವಾರ್ಷಿಕ ಮಹಾಸಭೆ, ಸಂಜೆ ಸಂಗೀತ ರಸಮಂಜರಿ, ಯಕ್ಷಗಾನ ಬಯಲಾಟ ನಡೆಯುವುದು ಎಂದವರು ವಿವರಿಸಿದರು. ಸಪ್ಟಂಬರ್ 22ರಂದು ಸಂಘ ಹಾಗೂ ತುಳುಕೂಟ ಬಂಟ್ವಾಳ ಇದರ ಸಂಯೋಜನೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ-24 ನಡೆಯಲಿದೆ. ಶ್ರೀ ಕೃಷ್ಣಾಷ್ಠಮಿಯಂದು ಕಾರಣಾಂತರದಿಂದಾಗಿ ಈ ಸ್ಪರ್ಧೆ ನಢಸಲು ಸಾಧ್ಯವಾಗಿರಲಿಲ್ಲ ಎಂದರು.
332 ಕೋಟಿ ವಹಿವಾಟು :
ಸಂಘವು ಪ್ರಸ್ತುತ ಸಾಲಿನಲ್ಲಿ 332 ಕೋಟಿ ರೂಪಾಯಿ ವಹಿವಾಟು ನಡೆಸಿದೆ. 7023 ಮಂದಿ ಸದಸ್ಯರನ್ನು ಹೊಂದಿದ್ದು, 1.58 ಕೋಟಿ ರೂಪಾಯಿ ಪಾಲು ಬಂಡವಾಳ, ಸುಮಾರು ರೂಪಾಯಿ 63 ಕೋಟಿಗಿಂತಲೂ ಹೆಚ್ಚು ಠೇವಣಿ, 70 ಕೋಟಿ ರೂಪಾಯಿ ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ ಎಂದರು. ಸಂಘವು 13 ಶಾಖೆಗಳನ್ನು ಹೊಂದಿದ್ದು, ಸದಸ್ಯರಿಗೆ ಶೇ.13 ರಷ್ಟು ಡಿವಿಡೆಂಟ್ ನೀಡಲು ಶಕ್ತವಾಗಿದೆ. ಅಡಿಟ್ ವರ್ಗೀಕರಣದಲ್ಲು ‘ಎ’ ತರಗತಿಯನ್ನು ಪಡೆದಿದೆ ಎಂದು ಅಧ್ಯಕ್ಷ ಸುಭಾಶ್ಚಂದ್ರ ಅವರು ತಿಳಿಸಿದರಲ್ಲದೆ ಸಂಸ್ಥೆಯ ವಿಂಶತಿ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಪ್ರತಿ ಶಾಖೆಯಲ್ಲಿ ಗ್ರಾಹಕರ ಸಮಾವೇಶ, ಆಟೋಟಸ್ಪರ್ಧೆ, ವರ್ತಕ ಗ್ರಾಹಕರಿಗೆ ವಸ್ತುಗಳ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಮಂಜುನಾಥ ರೈ ಅಗರಿ, ನಿರ್ದೇಶಕರಾದ ನಾರಾಯಣ ಸಿ. ಪೆರ್ನೆ, ರವೀಂದ್ರ, ಗಜೇಂದ್ರ ಪ್ರಭು, ಸುಧಾಕರ ಸಾಲ್ಯಾನ್, ಹೇಮಂತ್ ಕುಮಾರ್ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ಮೆನೇಜರ್ ಸದಾಶಿವ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.