ಮುಚ್ಚುವ ಸರಕಾರಿ ಶಾಲೆಗೆ ಪುನರ್ ಜನ್ಮ ಕೊಟ್ಟ ಶಿಕ್ಷಕಿ ಸಲ್ಡಾನ್ಹಾ ಇವರಿಗೆ ವ್ಯಾಪಕ ಪ್ರಶಂಸೆ
ಮಂಗಳೂರು : ‘ಮನಸ್ಸಿದ್ದರೆ ಮಾರ್ಗ’ ಎಂಬ ನಾನ್ನುಡಿಯಂತೆ ‘ಸರಕಾರಿ ಕೆಲಸ ದೇವರ ಕೆಲಸ’ ಎಂದು ದೇವರ ಮೇಲೆ ವಿಶ್ವಾಸ ವಿಟ್ಟು ಜನರ ಸಹಕಾರದಿಂದ ಶಿಕ್ಷಕಿ ಸಲ್ಡಾನ್ಹಾ ಮಾಡಿದ ಕ್ರಾಂತಿ ನಿಜವಾಗಿಯೂ ಮೆಚ್ಚುವಂತದ್ದು.
ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಜಿಲ್ಲೆಯೆಂದೇ ಹೆಸರುವಾಸಿ. ಈ ಕ್ರಾಂತಿಯ ಹಿಂದೆ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಶಿಕ್ಷಕ – ಶಿಕ್ಷಕಿಯರ ಪರಿಶ್ರಮವೂ ಅಷ್ಟೇ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಂಗಳೂರಿನ ಈ ಶಿಕ್ಷಕಿ ಮಕ್ಕಳ ಪಾಲಿಗೆ ವರವಾಗಿದ್ದಾರೆ.
ಹೌದು, ಬೋಳಾರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ಡಾನ್ಹಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ. ಕ್ಲಸ್ಟರ್ ಸಿ.ಆರ್.ಪಿ. ಆಗಿದ್ದ ಗೀತಾ ಜುಡಿತ್ ಸಲ್ದಾನಾ ಕೌನ್ಸೆಲಿಂಗ್ ಸಂದರ್ಭ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಆಗಸ್ಟ್ 31ರ ವರೆಗೆ ಶಾಲೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆ ಕೇವಲ 9. ಶಾಲೆಗೆ ಹಾಜರಾಗುತ್ತಿದ್ದವರು 5 ಅಥವಾ 6 ಮಂದಿ ಮಾತ್ರ. ಈ ಸಂದರ್ಭದಲ್ಲಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿಯೇ ಎದುರಾಗಿತ್ತು. ಸಪ್ಟಂಬರ್ 1ರಂದು ಪ್ರಭಾರ ಮುಖ್ಯಶಿಕ್ಷಕಿಯಾಗಿ ಸಲ್ಡಾನ್ಹಾ ಇವರು ಶಾಲೆಗೆ ಕರ್ತವ್ಯಕ್ಕೆ ಹಾಜರಾದಾಗ ಇಲ್ಲಿದ್ದ ಮಕ್ಕಳ ಸಂಖ್ಯೆ ನೋಡಿ ದಂಗಾದರು. ತಕ್ಷಣ ಕಾರ್ಯಪ್ರವೃತ್ತರಾದ ಗೀತಾ ಸಲ್ದಾನಾ ಪರಿಸರದ ಕೊಳಚೆ ಪ್ರದೇಶಗಳಲ್ಲಿ ಸರ್ವೇಗೆ ಇಳಿದರು. ಬಿಹಾರದ ವಲಸೆ ಕಾರ್ಮಿಕರು ಬೋಳಾರ ಪರಿಸರದಲ್ಲಿ ಮೀನು ಕಾರ್ಖಾನೆಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು ಶಾಲೆಗೆ ಹೋಗದೆ ದಿನ ಕಳೆಯುತ್ತಿದ್ದರು. ಇದನ್ನು ಅರಿತ ಶಿಕ್ಷಕಿ ಜುಡಿತ್ ವಲಸೆ ಕಾರ್ಮಿಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ ಯಶಸ್ವೀಯಾದರು. ಪರಿಣಾಮ ಒಂದೇ ತಿಂಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 52ಕ್ಕೆ ಏರಿತು.
ಸದ್ಯ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸೇರಿ ಇಬ್ಬರು ಶಿಕ್ಷಕಿಯರು ಮಾತ್ರ ಇದ್ದಾರೆ. ಅಕ್ಷರ ದಾಸೋಹದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದೆ. ಸದ್ಯ ದಾನಿಗಳ ಸಹಕಾರದಿಂದ ಸ್ಲೇಟ್, ಕಡ್ಡಿಗಳು ಮಾತ್ರ ಲಭ್ಯವಾಗಿದೆ. ಆದರೆ ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲ. ತೊಡಲು ಬಟ್ಟೆಯಿಲ್ಲ. ಪುಸ್ತಕ, ಬ್ಯಾಗ್, ಚಪ್ಪಲಿಗಳಿಲ್ಲ. ಶಾಲೆಯಲ್ಲಿ ಮಕ್ಕಳಿಗೆ ಆಡವಾಡುವ ಯಾವುದೇ ಸಾಮಾಗ್ರಿ ಇಲ್ಲದೆ ಶಿಕ್ಷಕಿಯೇ ಮಕ್ಕಳೊಂದಿಗೆ ಆಡುವಂತಹ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಈ ಶಾಲೆಯನ್ನು ಉಳಿಸಲು ದಾನಿಗಳ ಸಹಕಾರ ಅಗತ್ಯವಿದೆ.
ದಾನಿಗಳು ಶಿಕ್ಷಕಿ ಗೀತಾ ಜುಡಿತ್ ಸಲ್ದಾನಾ ಇವರ ಮೊಬೈಲ್ ಸಂಖ್ಯೆ : 9845901136 ಯನ್ನು ಸಂಪರ್ಕಿಸಬಹುದು. ಮುಚ್ಚುವ ಶಾಲೆಯನ್ನು ಉಳಿಸಿದ್ದಕ್ಕಾಗಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ಡಾನ್ಹಾ ಇವರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗಳು ಹರಿದು ಬರುತ್ತಿವೆ.